ವಿಪರೀತ ಬಿಸಿಲು-ಧಗೆ; ಬಿಯರ್ ಮಾರಾಟ ಪ್ರಮಾಣ ಶೇ. 45ರಷ್ಟು ಹೆಚ್ಚಳ!

Beer
Published on

ಬೆಂಗಳೂರು: ಬೇಸಿಗೆ ಹಿನ್ನೆಲೆಯಲ್ಲಿ ಇಂಡಿಯನ್ ಮೇಡ್ ಲಿಕ್ಕರ್‌ಗಿಂತ(ಐಎಂಎಲ್) ಬಿಯರ್ ಖರೀದಿಸಿ ಕುಡಿಯುವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. 2023ರ ಏ.1ರಿಂದ ಏ.18ರವೆರೆಗೆ 22.07 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದು, ಶೇ.24 ಬಿಯರ್ ಮಾರಾಟದಲ್ಲಿ ಹೆಚ್ಚಳವಾಗಿದೆ. ಈ ಬಾರಿ ಹೆಚ್ಚುವರಿಯಾಗಿ 121.38 ಎಲ್​ಸಿಬಿಯಷ್ಟು ಬಿಯರ್ ಮಾರಾಟವಾಗಿದ್ದು, ಅಬಕಾರಿ ಇಲಾಖೆಗೆ 800 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಆದಾಯ ಸಂಗ್ರಹವಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 17.74 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ತಾಪಮಾನ ಹೆಚ್ಚಳದಿಂದ ದೇಹವನ್ನು ತಂಪಾಗಿಸಿಕೊಳ್ಳಲು ಕುಡುಕರು ತಮ್ಮ ನೆಚ್ಚಿನ ಬ್ರ್ಯಾಂಡ್ ಬಿಯರ್ ಮೊರೆ ಹೋಗಿದ್ದಾರೆ. ಬಿಸಿಲಿನಿಂದ ಪಾರಾಗಲು ದ್ರವಾಹಾರ ಕುಡಿಯಿರಿ ಎಂಬ ಸಲಹೆಯ ನಡುವೆ ಬಿಯರ್ ಮಾರಾಟದಲ್ಲಿ ಏರಿಕೆ ಕಂಡಿದೆ.

391 ಲಕ್ಷ ಬಾಕ್ಸ್ ಬಿಯರ್ ಸೇಲ್

ರಾಜ್ಯದಲ್ಲಿ 2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ 391 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 269 ಲಕ್ಷ ಬಾಕ್ಸ್ ಬಿಯರ್ ಸೇಲ್ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ಬಿಯರ್ ಮಾರಾಟದಲ್ಲಿ ಶೇ.45 ಏರಿಕೆಯಾಗಿದೆ. ಹೀಗಾಗಿ, ವರ್ಷದಿಂದ ವರ್ಷಕ್ಕೆ ಬಿಯರ್ ಕುಡಿಯುವವರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ.

ಒಂದೂವರೆ ತಿಂಗಳಲ್ಲಿ ರಾಜ್ಯಾದ್ಯಂತ 71 ಕೋಟಿ ರೂ.ಮೌಲ್ಯದ ಮದ್ಯ ಜಪ್ತಿ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯದ ಕಿಕ್ ಜೋರಾಗಿದೆ. ಮಾ.4ರಿಂದ ಏ.16ರವರೆಗೆ 71 ಕೋಟಿ ರೂ.ಮೌಲ್ಯದ 10,62,946 ಲೀ.ಮದ್ಯ ಜಪ್ತಿಯಾಗಿದೆ. 16,965 ಕೇಸ್‌ಗಳು ದಾಖಲಾದರೆ, 2,552 ಘೋರ ಪ್ರಕರಣಗಳು ವರದಿಯಾಗಿವೆ. ಅಕ್ರಮವಾಗಿ ಮದ್ಯ ಮಾರಾಟ, ದಾಸ್ತಾನು ಹಾಗೂ ಸಾಗಾಣೆ ಮಾಡುತ್ತಿದ್ದ ವೇಳೆ 18,127 ಮಂದಿಯನ್ನು ಬಂಧಿಸಿರುವ ಅಬಕಾರಿ ಇಲಾಖೆ, 1,601 ವಾಹನಗಳನ್ನು ವಶಪಡಿಸಿಕೊಂಡಿದೆ.

ಶಾಂತಿನಗರ ಕ್ಷೇತ್ರದಲ್ಲಿ 5 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿ

ದಿನದಿಂದ ದಿನಕ್ಕೆ ಚುನಾವಣೆ ಕಾವು ಏರುತ್ತಿರುವ ನಡುವೆಯೂ ರಾಜ್ಯದ 224 ಕ್ಷೇತ್ರಗಳಲ್ಲಿ ಹೆಂಡದ ಹೊಳೆಯೇ ಹರಿಯುತ್ತಿದೆ. ಎಲ್ಲ ವಿಧಾನಸಭಾ ಕ್ಷೇತ್ರಗಳಗಿಂತ ಶಾಂತಿನಗರ ಕ್ಷೇತ್ರದಲ್ಲಿ ಅತಿ ಹೆಚ್ಚು 5 ಕೋಟಿ ರೂ. ಮೌಲ್ಯದ ಮದ್ಯ ಜಪ್ತಿವಾಗುವ ಮೂಲಕ ಮೊದಲ ಸ್ಥಾನದಲ್ಲಿದೆ. ಮಹದೇವಪುರ, ಯಲಹಂಕ ಮತ್ತು ಅನೇಕಲ್ ಕ್ಷೇತ್ರಗಳು ಕ್ರಮವಾಗಿ 2,3 ಮತ್ತು 4 ಸ್ಥಾನಗಳಿವೆ. ಹುಣಸೂರು, ಚಾಮುಂಡೇಶ್ವರಿ, ವರುಣ, ಯಶವಂತಪುರ, ಅನೇಕಲ್ ಹಾಗೂ ಮಲ್ಲೇಶ್ವರ ಕ್ಷೇತ್ರಗಳಲ್ಲೂ ಸರಾಸರಿ 50 ಸಾವಿರ ಲೀ.ಮದ್ಯ ವಶಪಡಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net