ಉಪ ಚುನಾವಣೆ ಹಿನ್ನೆಲೆ; ಮತ್ತೆ ಜಾತಿ ಮೀಸಲು ಬಿರುಗಾಳಿ...

Lead
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ರಾಜ್ಯದಲ್ಲಿ ಆಗೊಮ್ಮೆ ಈಗೊಮ್ಮೆ ಪ್ರತಿಧ್ವನಿಸುತ್ತಿದ್ದ ಜಾತಿ ಮೀಸಲಾತಿ ಬೇಡಿಕೆಯ ಕೂಗು ಈಗ ಉಪಚುನಾವಣೆ ಸಂದರ್ಭದಲ್ಲಿ ಮತ್ತಷ್ಟು ಬಲಪಡೆದಿರುವುದು ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ಇಕ್ಕಟ್ಟು ತಂದಿದೆ.

‘ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಸಿದ್ಧವಿದ್ದೇವೆ’ ಎಂಬ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಹೇಳಿಕೆ ಮತ್ತು ‘ಜಾತಿಗಣತಿ ವರದಿ ಸ್ವೀಕರಿಸಿ ಅದರಂತೆ ನಡೆದುಕೊಳ್ಳಲು ನಾವು ತಯಾರಿದ್ದೇವೆ’ ಎಂಬ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಭರವಸೆ ಸಂಚಲನಕ್ಕೆ ಕಾರಣವಾಗಿದೆ. ಸಂಪುಟದ ಹಿರಿಯ ಸಹೋದ್ಯೋಗಿಗಳ ಹೇಳಿಕೆಗಳಿಂದ ಸರ್ಕಾರದ ಮೇಲಿನ ಒತ್ತಡ ಮತ್ತಷ್ಟು ಹೆಚ್ಚಾಗಿದೆ. ಪಾದಯಾತ್ರೆ ಜತೆಗೆ ತೀವ್ರ ಹೋರಾಟ ಕೈಕೊಳ್ಳುವಂತಹ ತೀರ್ವನಗಳೂ ಹೊರಬಿದ್ದಿವೆ. ಮೀಸಲಾತಿ ವಿಚಾರವಾಗಿ ಸರ್ಕಾರಕ್ಕೆ ಮನವಿಕೊಟ್ಟು ಸುಮ್ಮನಾಗಿದ್ದ ಸಣ್ಣಪುಟ್ಟ ಜಾತಿಗಳೂ ಈ ಬೆಳವಣಿಗೆ ಬಳಿಕ ಇದೇ ಸರಿಯಾದ ಸಮಯವೆಂದು ಅಖಾಡಕ್ಕಿಳಿಯಲು ಸಿದ್ಧತೆ ಆರಂಭಿಸಿವೆ. ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆ ಸಂದರ್ಭದಲ್ಲಿ ಈ ಜಾತಿ ಹೋರಾಟದ ಪರಿಣಾಮವನ್ನು ಸರಿಯಾಗಿ ಗ್ರಹಿಸಿರುವ ರಾಜಕೀಯ ನಾಯಕರು ತಮ್ಮ ಗಮನವನ್ನು ಅತ್ತ ಚಿತೆôಸಿದ್ದಾರೆ.

ವಾಲ್ಮೀಕಿಗಳ ಬೇಡಿಕೆ: ಮೀಸಲು ವಿಚಾರವಾಗಿ ವಾಲ್ಮೀಕಿ ಸಮಾಜ ಆಗ್ರಹಿಸುತ್ತಲೇ ಇದೆ. ಸಮುದಾಯದ ಜನಪ್ರತಿನಿಧಿಗಳೆಲ್ಲ ರಾಜೀನಾಮೆ ಕೊಟ್ಟಾದರೂ ಸರಿ ಸರ್ಕಾರದ ಮೇಲೆ ಒತ್ತಡ ತರಬೇಕೆಂಬ ನಿರ್ಣಯ ಮಾಡಿಕೊಂಡಿದೆ. ಇತ್ತ ಕುರುಬ ಸಮಾಜ ಕೂಡ ಸರಣಿ ಸಭೆಗಳನ್ನು ನಡೆಸಿದ್ದು, ಪಾದಯಾತ್ರೆ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಇದೇ ರೀತಿ ವಿವಿಧ ಜಾತಿ ಪಂಗಡಗಳಿಂದ ವಿಷಯವನ್ನು ಹಸಿರಾಗಿಡುವ ಪ್ರಯತ್ನ ನಡೆಯುತ್ತಿದೆ.

ಸರ್ಕಾರಕ್ಕೆ ಸಲೀಸಲ್ಲ: ಈ ಬೆಳವಣಿಗೆ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸುತ್ತಿದೆ. ಕೆಲವು ಬೇಡಿಕೆಗಳ ಬಗ್ಗೆ ಸ್ಪಷ್ಟವಾದ ಸಹಮತವಿದೆ. ಆದರೆ, ತೀರ್ಮಾನ ಕೈಗೊಂಡರೆ ರಾಜಕೀಯ ಜಾತಿ ಸಮೀಕರಣದಲ್ಲಿ ಪಕ್ಷಕ್ಕೆ ಪೆಟ್ಟು ಬೀಳುವ ಆತಂಕ ಸರ್ಕಾರ ನಡೆಸುವವರಲ್ಲಿದೆ. ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಬೆಂಬಲ ವ್ಯಕ್ತಪಡಿಸಿದರೂ ಈಗ ಅದನ್ನು ಜಾರಿ ಮಾಡುವುದು ಸುಲಭವಲ್ಲ. ಏಕೆಂದರೆ ಪ್ರತಿ ಹೆಜ್ಜೆಯೂ ರಾಜಕೀಯ ಪರಿಣಾಮಕ್ಕೆ ದಾರಿಯಾಗುವುದು ಸ್ಪಷ್ಟ. ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುವಷ್ಟು ಬೆಳವಣಿಗೆ ನಡೆದರೂ ಅಚ್ಚರಿಪಡಬೇಕಿಲ್ಲ. ಹೀಗಿರುವಾಗ ಒಮ್ಮತದಿಂದ ಕರೆದೊಯ್ಯುವ ಅನಿವಾರ್ಯತೆ ಎದುರಾಗಿದೆ.

ನಾಯಕತ್ವ ರಾಜಕಾರಣ

ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು, ಗೋವಿಂದ ಕಾರಜೋಳ, ಕೆ.ಎಚ್.ಮುನಿಯಪ್ಪ ಹೀಗೆ ಹತ್ತು ಹಲವು ನಾಯಕರು ಮೀಸಲು ವಿಚಾರದಲ್ಲಿ ವಾದ ಮುಂದಿಟ್ಟು ಆಯಾ ಸಮುದಾಯದ ಕಿವಿ ನೆಟ್ಟಗಾಗುವಂತೆ ಮಾಡಿದ್ದಾರೆ. ಈ ಒತ್ತಡಕ್ಕೆ ಸರ್ಕಾರ ಮಣಿದದ್ದೇ ಆದರೆ ಜೀವಮಾನದಲ್ಲಿ ತಂತಮ್ಮ ಸಮುದಾಯಕ್ಕೆ ದೊಡ್ಡ ಕೊಡುಗೆ ನೀಡಿದ ಗರಿ ತಮ್ಮಮುಡಿಗೇರುತ್ತದೆ ಎಂಬ ಅರಿವು ಅವರಿಗಿದೆ.

1.ಹಿಂದುಳಿದ ವರ್ಗದ ಮೀಸಲು ಪ್ರಮಾಣ ಹೆಚ್ಚಿಸಿ ವರ್ಗೀಕರಣದ ಉದ್ದೇಶದಿಂದಲೇ ಸಿದ್ಧಪಡಿಸಿದ ಸಾಮಾಜಿಕ ಆರ್ಥಿಕ ಗಣತಿ ಸಿದ್ಧವಿದೆ2.ಪರಿಶಿಷ್ಟ ಜಾತಿ ಮೀಸಲು ವರ್ಗೀಕರಣ ಪ್ರಸ್ತಾಪಿಸುವ ಎ.ಜೆ.ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 7 ವರ್ಷ ಕಳೆದಿದೆ3.ಶಿಕ್ಷಣ, ಉದ್ಯೋಗದಲ್ಲಿ ಎಸ್ಸಿ/ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸುವ ಶಿಫಾರಸು ಮಾಡಿರುವ ನ್ಯಾ.ನಾಗಮೋಹನದಾಸ್ ವರದಿ ಈಗಷ್ಟೇ ಸರ್ಕಾರದ ಕೈಸೇರಿದೆ.

ಸುಪ್ರೀಂ ಮಿತಿ ಅಡ್ಡಿ

ಎಸ್ಸಿ/ಎಸ್ಟಿ ಮೀಸಲು ಪ್ರಮಾಣ ಹೆಚ್ಚಿಸುವುದೇ ದೊಡ್ಡ ಸವಾಲು. ಹಿಂದುಳಿದ ವರ್ಗದವರೂ ತಮ್ಮ ಮೀಸಲಾತಿ ಪ್ರಮಾಣ ಹೆಚ್ಚಿಸಿ ಎನ್ನುತ್ತಾರೆ. ಆದರೆ, ಒಟ್ಟಾರೆ ಮೀಸಲು ಪ್ರಮಾಣ ಶೇ.50 ಮೀರಬಾರದೆಂದು ಸುಪ್ರೀಂಕೋರ್ಟ್ ತೀರ್ಪೆಂದರಲ್ಲಿ ಅಭಿಪ್ರಾಯಪಟ್ಟಿದೆ. ಹೀಗಾಗಿ ಸಮತೋಲನ ಸಾಧಿಸುವುದು ಹೇಗೆಂಬುದೇ ಸರ್ಕಾರದ ಮುಂದಿರುವ ಪ್ರಶ್ನೆಯಾಗಿದೆ.

ಪ್ರಕ್ರಿಯೆ ಹೇಗೆ?

  • ಮೀಸಲು ವರ್ಗೀಕರಣ, ಮೀಸಲು ಬದಲಾವಣೆ, ಪ್ರಮಾಣ ಹೆಚ್ಚಳ ಪ್ರಕ್ರಿಯೆ ರಾಜ್ಯ ಸರ್ಕಾರದ ಹಂತದಲ್ಲಿ ಆಗುವಂಥದ್ದಲ್ಲ. ರಾಜ್ಯ ಸರ್ಕಾರ ನಿರ್ಣಯ ಮಾಡಿ ಕೇಂದ್ರಕ್ಕೆ ಕಳಿಸಿ ಅಲ್ಲಿ ತೀರ್ವನವಾಗಬೇಕು.
  • ಮೊದಲು ರಾಜ್ಯ ಸಚಿವ ಸಂಪುಟದಲ್ಲಿ ರ್ಚಚಿಸಿ ನಿರ್ಣಯಿಸಬೇಕು.
  • ಶಾಸನಸಭೆಯಲ್ಲಿ ಮಂಡಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು.
  • ಕೇಂದ್ರ ಕಾನೂನು, ಕುಲಶಾಸ್ತ್ರ ಅಧ್ಯಯನ, ಗೃಹ ಇಲಾಖೆಯ ಅಭಿಪ್ರಾಯ ಪಡೆಯಬೇಕು.
  • ಬೇಡಿಕೆ ಸೂಕ್ತವಾಗಿದ್ದರೆ ಸಂಸತ್ತಿನಲ್ಲಿ ಮಸೂದೆ ಮಂಡಿಸಬೇಕು.
  • ಎಲ್ಲ ರಾಜ್ಯಗಳಿಗೆ ಅಭಿಪ್ರಾಯ ಕಳಿಸಬೇಕು, ಮೂರನೇ ಒಂದು ಭಾಗ ಒಪ್ಪಿಗೆ ಪಡೆಯಬೇಕು.

ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಅಸ್ಪೃ್ಯರಲ್ಲದವರೂ, ಹಿಂದುಳಿದ ವರ್ಗಗಳ ಗುಣಲಕ್ಷಣ ಇಲ್ಲದವರೂ ಇದ್ದಾರೆ. ಇಷ್ಟು ದಿನ ಸಾಮಾಜಿಕ ನ್ಯಾಯದ ಮಾತನಾಡುತ್ತಿದ್ದವರು ಈ ಅನ್ಯಾಯ ಸರಿಪಡಿಸಿಲ್ಲ. ಈಗ ಪ್ರಯತ್ನ ನಡೆಸಿದರೆ ಟೀಕಿಸುತ್ತಾರೆ. - ವಾದಿರಾಜ್, ಆರ್​ಎಸ್​ಎಸ್

ಯಾರ ಬೇಡಿಕೆ ಏನು?

1. ಹಿಂದುಳಿದ ವರ್ಗಕ್ಕೆ (ಎ2) ಸೇರಿಸಲು ಪಂಚಮಸಾಲಿಗಳ ಪಟ್ಟು 2. ಸದಾಶಿವ ಆಯೋಗದ ವರದಿ ಜಾರಿಮಾಡಿ ಎಸ್ಸಿ ಒಳಮೀಸಲು ನಿಗದಿ ಮಾಡಬೇಕು 3. ಹಿಂದುಳಿದ ವರ್ಗದ ಮೀಸಲು ಪ್ರಮಾಣವನ್ನೇ ಹೆಚ್ಚಿಸಬೇಕು 4. ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲು ಕೊಡಬೇಕು 5. ಕುರುಬರನ್ನು ಹಿಂದುಳಿದ ವರ್ಗದಿಂದ ಎಸ್ಟಿಗೆ ಸೇರಿಸಬೇಕು 6. ಬೆಸ್ತರು, ಕೋಲಿ, ಗಂಗಾಮತಸ್ತರನ್ನು ಪ.ಪಂಗಡಕ್ಕೆ ಸೇರಿಸಬೇಕು 7. ಸವಿತಾ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು 8. ಮಡಿವಾಳರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಜನಸಂಖ್ಯೆ ಆಧಾರದ ಮೇಲೆ ವಾಲ್ಮೀಕಿ ಸಮುದಾಯದ ಮೀಸಲು ಹೆಚ್ಚಿಸಬೇಕೆಂಬ ಬೇಡಿಕೆ 1991ರಿಂದಲೂ ಇದೆ. ನಿರಂತರವಾಗಿ ಒತ್ತಡ ಹಾಕುತ್ತಲೇ ಇದ್ದೇವೆ. ಈಗಲೂ ಚಾಲನೆಯಲ್ಲಿದೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ. | ಚಂದ್ರಶೇಖರ್ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಅಧ್ಯಕ್ಷ

ಬಿಜೆಪಿ ನಿಲುವೇನು?

ಸದಾಶಿವ ಆಯೋಗದ ವರದಿ ಜಾರಿ ಬಗ್ಗೆ ಸ್ಪಷ್ಟತೆ ಇಲ್ಲ. ಈಗಾಗಲೇ ಸಂಘ ಪರಿವಾರ ಸಭೆ ನಡೆಸಿ ಒಮ್ಮತ ಮೂಡಿಸಲು ಪ್ರಯತ್ನಿಸುತ್ತಿರುವುದರಿಂದ ಪಕ್ಷ ಕೊಂಚ ನೆಮ್ಮದಿಯಲ್ಲಿದೆ. ಆದರೆ, ಪಕ್ಷ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಷ್ಟ ಎಂಬ ಸ್ಪಷ್ಟ ಅರಿವು ನಾಯಕರಿಗಿದೆ. ಬೇಡಿಕೆಗೆ ಆಗ್ರಹಿಸಿ ಹೋರಾಟ ತೀವ್ರವಾದರೆ ಏನು ಮಾಡುವುದೆಂಬ ಗೊಂದಲವೂ ಇದೆ.

ಕೈ ಪಡೆ ಮನಸ್ಥಿತಿ ಏನು?

ಸದಾಶಿವ ಆಯೋಗದ ವಿಚಾರದಲ್ಲಿ ಪರ-ವಿರೋಧದ ತಿಕ್ಕಾಟ ಮುಂಚೆಯಿಂದಲೂ ಇದ್ದು, ಈಗಲೂ ಒಮ್ಮತವಿಲ್ಲ. ಈಗ ಬಿಜೆಪಿ ಸರ್ಕಾರದಲ್ಲಿ ಏನು ಬೇಕಾದರೂ ಆಗಲಿ. ಸರ್ಕಾರದ ತೀರ್ವನದಿಂದ ಆಗುವ ರಾಜಕೀಯ ಬೆಳವಣಿಗೆ ಮತ್ತು ತಮಗಾಗುವ ಲಾಭದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಜೆಡಿಎಸ್ ದೂರ

ಒಕ್ಕಲಿಗರ ಮತಗಳನ್ನೇ ಹೆಚ್ಚಾಗಿ ನೆಚ್ಚಿಕೊಂಡ ಜೆಡಿಎಸ್​ಗೆ ಈ ಜಾತಿ ಬೇಡಿಕೆ ವಿಚಾರದಲ್ಲಿ ಯಾವುದೇ ಸ್ಪಷ್ಟ ನಿಲುವಿಲ್ಲ. ಯಾರೇ ಮನವಿ ನೀಡಿದರೂ ಅವರಿಗೆ ಜೈ ಎನ್ನುವ ಮನಸ್ಥಿತಿ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net