

ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಇಂಗ್ಲೆಂಡಿನ ಸಾಹಸಯಾತ್ರಿ ಬೇರ್ ಗ್ರಿಲ್ಸ್ ಅವರೊಂದಿಗೆ ಡಿಸ್ಕವರಿ ಚಾನೆಲ್ನ 'ಮ್ಯಾನ್ ವರ್ಸಸ್ ವೈಲ್ಡ್' ಸರಣಿಯಲ್ಲಿ ಕಾಣಿಸಿಕೊಂಡಿದ್ದು ನಿಮಗೆ ನೆನಪಿರಬಹುದು. ಮಳೆ ಮತ್ತು ಚಳಿಯಲ್ಲಿ ಪ್ರಧಾನಿ ಮೋದಿ ಕಾಡಿನ ಯಾತ್ರೆ ನಡೆಸಿದ್ದು ಯುವಜನರಿಗೆ ಹುರುಪು ನೀಡಿತ್ತು.
ಇದೀಗ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಮೋದಿ ಅವರೊಂದಿಗೆ ಕಳೆದ ಆ ವಿಶೇಷ ಕ್ಷಣಗಳನ್ನು ಬೇರ್ ಗ್ರಿಲ್ಸ್ ನೆನಪಿಸಿಕೊಂಡಿದ್ದಾರೆ. ಧಾರಾವಾಹಿಯ ಶೂಟಿಂಗ್ ನಂತರ ಮಳೆಯಲ್ಲೇ ಒಟ್ಟಿಗೆ ಚಹಾ ಕುಡಿದಾಗಿನ ಫೋಟೋವನ್ನು ತಮ್ಮ ನೆಚ್ಚಿನ ಫೋಟೋಗಳಲ್ಲಿ ಒಂದು ಎಂದು ಶುಕ್ರವಾರ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಲಕ್ಷಾಂತರ ನೆಟ್ಟಿಗರ ಗಮನ ಸೆಳೆದಿದ್ದು, ಕೆಲವೇ ಗಂಟೆಗಳಲ್ಲಿ 14 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ, 78,000 ಲೈಕ್ಗಳನ್ನು ಪಡೆದಿದೆ.
2019 ರಲ್ಲಿ ಡಿಸ್ಕವರಿ ಚಾನಲ್ನ ತಮ್ಮ ಜನಪ್ರಿಯ ಸರಣಿ ಮ್ಯಾನ್ ವರ್ಸಸ್ ವೈಲ್ಡ್ ಎಂಬ ಜಂಗಲ್ ಸರ್ವೈವಲ್ ಪ್ರೋಗ್ರಾಂಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗ್ರಿಲ್ಸ್ ಆಹ್ವಾನಿಸಿದ್ದರು. ಕಾಡಿನಲ್ಲಿ ಬದುಕುಳಿಯುವುದು ಹೇಗೆ ಎಂಬುದನ್ನೇ ತಿಳಿಸಿಕೊಡುವ ಸಾಹಸಗಾರ ಬೇರ್ ಗ್ರಿಲ್ಸ್ರ ಸಮಕ್ಕೆ ಪ್ರಧಾನಿ ಮೋದಿ ಮಳೆಯಲ್ಲೇ ಕಾಡಿನಲ್ಲಿ ಓಡಾಡಿದ್ದು ಎಲ್ಲರ ಗಮನ ಸೆಳೆದಿತ್ತು. ಮಾಧ್ಯಮಗಳಲ್ಲಿ ಚೆನ್ನಾಗಿ ಜಾಹೀರುಗೊಳಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಬೇರ್, ಮೋದಿ ಅವರನ್ನು ಜಾಗತಿಕ ಮಹಾನಾಯಕ ಎಂದು ಕರೆದಿದ್ದರು.
ಆ ಶೂಟಿಂಗ್ ವೇಳೆಯಲ್ಲಿ ಸೆರೆ ಹಿಡಿಯಲಾದ ಚಿತ್ರವೊಂದನ್ನು ಇದೀಗ ಗ್ರಿಲ್ಸ್ ಶೇರ್ ಮಾಡಿದ್ದಾರೆ. "ನನ್ನ ನೆಚ್ಚಿನ ಛಾಯಾಚಿತ್ರಗಳಲ್ಲಿ ಒಂದು: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಡಿಸ್ಕವರಿ ಜಂಗಲ್ ಅಡ್ವೆಂಚರ್ ನಡೆಸಿದ ಮೇಲೆ ಪೂರ್ಣವಾಗಿ ಒದ್ದೆ ಆಗಿ ಚಹಾ ಹಂಚಿಕೊಳ್ಳುತ್ತಿರುವುದು. ಈ ಕ್ಷಣ ನನಗೆ ವನ್ಯಲೋಕ ಹೇಗೆ ಸಮಾನತೆ ಉಂಟುಮಾಡುವಂಥದ್ದು ಎಂದು ನೆನಪಿಸುತ್ತದೆ. ವಿವಿಧ ಟೈಟಲ್ ಮತ್ತು ಮಾಸ್ಕ್ಗಳ ಹಿಂದಿರುವ ನಾವೆಲ್ಲರೂ ಒಂದೇ ಆಗಿದ್ದೇವೆ" ಎಂದು ಬರೆದಿದ್ದಾರೆ.
ಕಾರ್ಯಕ್ರಮದಲ್ಲಿ ಮೋದಿ ಅವರು ಚಹಾ ಮಾರಾಟಗಾರನ ಮಗನಾಗಿ ಸರಳ ಜೀವನ ನಡೆಸಿದ ಬಗ್ಗೆ, ತಮ್ಮ ಯೌವ್ವನದಲ್ಲಿ ಆಧ್ಯಾತ್ಮಿಕ ಅರಿವು ಗಳಿಸಲು ಏಕಾಂಗಿಯಾಗಿ ಹಿಮಾಲಯದ ಪ್ರವಾಸ ಮಾಡಿದ್ದರ ಬಗ್ಗೆ ತಿಳಿಸಿದ್ದರು. ಎಪಿಸೋಡ್ ಕೊನೆಯಲ್ಲಿ ಸಂತೋಷಭರಿತರಾದ ಗ್ರಿಲ್ಸ್, ಭಾರತಕ್ಕಾಗಿ ವಿಶೇಷ ಪ್ರಾರ್ಥನೆ ಕೂಡ ಮಾಡಿದ್ದರು. ಆ ಎಪಿಸೋಡ್ 6.1 ಮಿಲಿಯನ್ ವೀಕ್ಷಣೆಗಳನ್ನು ಪಡೆದು ದಾಖಲೆ ಮಾಡಿತ್ತು ಎಂಬುದಾಗಿಯೂ ಡಿಸ್ಕವರಿ ಚಾನೆಲ್ ತಿಳಿಸಿತ್ತು. (ಏಜೆನ್ಸೀಸ್)