

ನವದೆಹಲಿ: ಲಡಾಖ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾ ಮತ್ತು ಪಾಕಿಸ್ತಾನ ಒಟ್ಟಾಗಿ ಭಾರತದ ಮೇಲೆ ಮುರಕೊಂಡು ಬೀಳುವ ಸಾಧ್ಯತೆ ಇದೆ. ಇಂಥ ದಾಳಿಗಳನ್ನು ಹಿಮ್ಮೆಟ್ಟಿಸಲು ಸನದ್ಧವಾಗಿರುವಂತೆ ಭಾರತೀಯ ಸೇನಾಪಡೆಯ ಮೂರು ವಿಭಾಗಗಳಿಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೂಚನೆ ನೀಡಿದ್ದಾರೆ.
ಭಾರತೀಯ ವಾಯುಪಡೆಯ ಕೇಂದ್ರ ಕಚೇರಿಯಲ್ಲಿ ಐಎಎಫ್ನ ಕಮಾಂಡರ್ಗಳನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಕ್ಕಟ್ಟನ್ನು ಪರಿಹರಿಸಿ, ವಾಸ್ತವ ಗಡಿರೇಖೆಯ ಬಳಿ ನಿಯೋಜಿಸಿರುವ ಸೇನಾಪಡೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚೀನಾದೊಂದಿಗೆ ಮಾತುಕತೆ ನಡೆಯುತ್ತಿದೆ. ಆದರೂ ಪಾಕ್ ಜತೆಗೂಡಿ ಅದು ದಾಳಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ, ಸೇನಾಪಡೆಯ ಮೂರು ವಿಭಾಗಗಳೂ ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ರೀತಿ ಸನ್ನದ್ಧವಾಗಿರಬೇಕು ಎಂದು ಹೇಳಿದ್ದಾಗಿ ವಾಯುಪಡೆ ಮೂಲಗಳು ತಿಳಿಸಿವೆ.
ಗಡಿಯಲ್ಲಿ ಇತ್ತೀಚೆಗೆ ಉಂಟಾದ ಉದ್ವಿಗ್ನ ಸ್ಥಿತಿಗೆ ತಕ್ಷಣವೇ ಸ್ಪಂದಿಸುವ ರೀತಿಯ ಸನ್ನದ್ಧತೆಯನ್ನು ಕಾಯ್ದುಕೊಂಡಿದ್ದಕ್ಕಾಗಿ ಐಎಎಫ್ ಕಮಾಂಡರ್ಗಳನ್ನು ಅಭಿನಂದಿಸಿದ ರಾಜನಾಥ್ ಸಿಂಗ್, ಪೂರ್ವ ಲಡಾಖ್ನ ಮುಂಚೂಣಿ ನೆಲೆಗಳಲ್ಲಿ ತ್ವರಿತವಾಗಿ ವಾಯುಪಡೆಯ ಯುದ್ಧವಿಮಾನಗಳ ನಿಯೋಜನೆಯ ಸಾಮರ್ಥ್ಯ ಶತ್ರುಪಾಳೆಯಕ್ಕೆ ನಮ್ಮ ಶಕ್ತಿಯನ್ನು ಪರಿಚಯಿಸಿಕೊಟ್ಟಿದೆ ಎಂದು ಹೇಳಿದ್ದಾಗಿ ತಿಳಿಸಿವೆ.
ಲಡಾಖ್ನಲ್ಲಿ ವಾಸ್ತವ ಗಡಿರೇಖೆಯ ಬಳಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಈ ಪರಿಸ್ಥಿತಿಯ ಲಾಭ ಪಡೆದುಕೊಂಡು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿ ಭಾಗದಲ್ಲಿ ತೊಂದರೆ ಉಂಟು ಮಾಡಬೇಕಿತ್ತು. ಆದರೆ, ಅದರ ದಿವ್ಯ ಮೌನವಾಗಿರುವುದಕ್ಕೆ ಭಾರತೀಯ ಸೇನಾಪಡೆ ಮೂಲಗಳು ಅಚ್ಚರಿ ವ್ಯಕ್ತಪಡಿಸಿವೆ.
ಬೇರೆಡೆ ದಾಳಿ ಸಂಭವ: ಲಡಾಖ್ ಬಿಕ್ಕಟ್ಟನ್ನು ಚೀನಾ ಚಳಿಗಾಲದುದ್ದಕ್ಕೂ ಎಳೆದು ಗಮನವನ್ನು ಬೇರೆಡೆ ಸೆಳೆದು ಈಶಾನ್ಯ ರಾಜ್ಯಗಳ ಬಳಿ ದಾಳಿ ಮಾಡುವ ಸಂಭವವೂ ಇಲ್ಲದಿಲ್ಲ. ಹಾಗಾಗಿ ವಾಸ್ತವ ಗಡಿರೇಖೆಯುದ್ದಕ್ಕೂ ನಿಯೋಜಿಸಿರುವ ಯೋಧರನ್ನು ಹಿಂತೆಗೆಯುವ ವಿಷಯದಲ್ಲಿ ಭಾರತೀಯ ಸೇನಾಪಡೆ ತುಂಬಾ ಎಚ್ಚರಿಕೆಯಿಂದ ವರ್ತಿಸುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೇನಾಪಡೆಯ ಮೂಲಗಳು, ಲಡಾಖ್ನಲ್ಲಿ ನಮ್ಮೊಂದಿಗೆ ಗಲಾಟೆ ಮಾಡುತ್ತಲೇ ಬೇರೊಂದು ವಲಯದಲ್ಲಿ ಅದರಲ್ಲೂ ವಿಶೇಷವಾಗಿ ಅರುಣಾಚಲ ಪ್ರದೇಶದಲ್ಲಿ ಚೀನಾ ದಾಳಿ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜತೆಗೆ ಕೂಡ ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನ ಕಿತಾಪತಿ ಮಾಡಿ ಒತ್ತಡ ಹೇರುವ ಸಾಧ್ಯತೆಯೂ ಇದೆ. ಆದ್ದರಿಂದ, ಪ್ರಸ್ತುತ ಪರಿಸ್ಥಿತಿಯನ್ನು ತುಂಬಾ ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ ಎಂದು ಹೇಳಿವೆ.