

ಉದ್ಯೋಗ ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ ಕಾಪಾಡುವುದೇ ಇಂದಿನ ದಿನಗಳಲ್ಲಿ ಸವಾಲಾಗಿ ಪರಿಣಮಿಸಿದೆ. ಸರ್ಕಾರಿ ಮತ್ತು ಖಾಸಗಿ ವಲಯ ಎರಡೂ ಕಡೆ ಕೆಲಸದ ಒತ್ತಡ ಹೆಚ್ಚುತ್ತಲೇ ಇದೆ. ಮಾತ್ರವಲ್ಲ, ಕೆಲಸದ ಅವೈಜ್ಞಾನಿಕ ಹಂಚಿಕೆ, ಕೆಲಸದ ಅವಧಿಯ ವಿಸ್ತರಣೆ, ರಜೆ ಸೂಕ್ತವಾಗಿ ಸಿಗದಿರುವುದು ಸೇರಿದಂತೆ ಹಲವು ಅಂಶಗಳಿಂದ ಒತ್ತಡ ಹೆಚ್ಚುತ್ತಿದೆ. ಇದು ಉದ್ಯೋಗಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ.
ನಿದ್ರಾಹೀನತೆ, ಉದ್ವಿಗ್ನತೆ, ಆತಂಕ, ಖಿನ್ನತೆಯಂಥ ಸಮಸ್ಯೆಗಳ ಪ್ರಮಾಣ ಹೆಚ್ಚುತ್ತಲೇ ಇದೆ. ಅಲ್ಲದೆ, ಕೌಟುಂಬಿಕ ಸಂಬಂಧಗಳು ಶಿಥಿಲಗೊಂಡು ವಿವಾಹ ವಿಚ್ಛೇದನದ ಪ್ರಕರಣಗಳು, ಕೌಟುಂಬಿಕ ವಿವಾದಗಳು ಏರಿಕೆಯಾಗಿವೆ. ಅದರಲ್ಲೂ, ಸಮಾಜದ ಕೆಲ ರಂಗಗಳು ಸಮಯ, ಸಂದರ್ಭ ನೋಡದೆ ಕೆಲಸ ಮಾಡುವ ಅನಿವಾರ್ಯತೆ ಇದೆ. ರೋಗಿಗಳಿಗೆ ಚಿಕಿತ್ಸೆ ಒದಗಿಸುವ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು, ಸಮಾಜದ ಸ್ವಾಸ್ಥ್ಯ ರಕ್ಷಣೆಗಾಗಿ ದುಡಿಯುವ ಮಾಧ್ಯಮದವರು ಹೀಗೆ ಇವರೆಲ್ಲ ಸಮಯದ ಪರಿವೆ ಇಲ್ಲದೆ ಕೆಲಸ ಮಾಡಬೇಕಾಗುತ್ತದೆ.
ಹೀಗಿರುವಾಗ, ಇವರನ್ನು ಯಂತ್ರಗಳಾಗಿ ಭಾವಿಸದೆ ಸಂವೇದನೆಯಿಂದ, ಮಾನವೀಯತೆಯಿಂದ ಕಾಣುವ ಜವಾಬ್ದಾರಿ ಸಂಬಂಧಪಟ್ಟ ವ್ಯವಸ್ಥೆಯದ್ದು. ಆದರೆ, ಹಾಗಾಗುತ್ತಿಲ್ಲ ಎಂಬುದು ಕಹಿವಾಸ್ತವ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕಾನ್ಸ್ಟೆಬಲ್ ಒಬ್ಬರು ಕರ್ತವ್ಯದ ವೇಳೆ ನಿದ್ರಿಸುತ್ತಿದ್ದರು ಎಂಬ ಕಾರಣಕ್ಕೆ ಅವರನ್ನು ಅಮಾನತುಗೊಳಿಸಲಾಗಿತ್ತು. ಈ ಅಮಾನತು ಆದೇಶವನ್ನು ರದ್ದುಗೊಳಿಸಬೇಕೆಂದು ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯ ವೇಳೆ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯ ಎಲ್ಲರ ಕಣ್ಣು ತೆರೆಸುವಂತಿದೆ, ‘ಒಬ್ಬ ವ್ಯಕ್ತಿಗೆ ಆತನ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸ ನೀಡಿದರೆ ದೇಹವೂ ವ್ಯಕ್ತಿಯನ್ನು ನಿದ್ರಿಸುವಂತೆ ಮಾಡುತ್ತದೆ, ಹಾಗಾಗಿ, ನಿದ್ರೆ ಮತ್ತು ಕೆಲಸದ ನಡುವೆ ಸಮತೋಲನ ಸಾಧಿಸುವುದು ಅತ್ಯಗತ್ಯವಾಗಿದೆ.
ಮನುಷ್ಯನಿಂದ ನಿದ್ರೆಯನ್ನು ಕಸಿದುಕೊಳ್ಳುವುದು ಸರಿಯಲ್ಲ. ನಿದ್ದೆ ಕಸಿದುಕೊಂಡರೆ ಆತ ಎಲ್ಲಿ ಬೇಕಾದರೂ ನಿದ್ರಗೆ ಜಾರಲು ಕಾರಣವಾಗುತ್ತದೆ’ ಎಂದು ಹೇಳಿ ಪೇದೆಯ ಅಮಾನತು ಆದೇಶವನ್ನು ರದ್ದುಗೊಳಿಸಿದೆ. ಇತ್ತೀಚಿನ ದಿನಗಳಲ್ಲಂತೂ ಖಾಸಗಿ ರಂಗದಲ್ಲಿ ವಾರಕ್ಕೆ 60, 70 ಗಂಟೆ ಕೆಲಸ ಮಾಡಬೇಕು, ಉತ್ಪಾದಕತೆ ಇನ್ನಷ್ಟು ಹೆಚ್ಚಿಸಬೇಕು ಎಂಬ ಚರ್ಚೆಗಳು ವಿವಾದದ ಸ್ವರೂಪ ಪಡೆದಿದ್ದನ್ನು ಗಮನಿಸಬಹುದು. ಕೆಲಸ ಮತ್ತು ವ್ಯಕ್ತಿಗತ ಬದುಕಿನ ನಡುವೆ ಸಮತೋಲನ ಇಲ್ಲದಿದ್ದಲ್ಲಿ ಕೆಲಸದ ಉತ್ಪಾದಕತೆಯೂ ಗುಣಮಟ್ಟದ್ದಾಗಿರುವುದಿಲ್ಲ, ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಎಂಬುದನ್ನು ಅರಿಯಬೇಕು. ಅಲ್ಲದೆ, ಪೊಲೀಸರು, ವಾಹನ ಚಾಲಕರು, ವೈದ್ಯರು ಸೇರಿದಂತೆ ಕಠಿಣ ಸನ್ನಿವೇಶಗಳಲ್ಲಿ ದುಡಿಯುವವರನ್ನು ಮಾನವೀಯತೆಯಿಂದ ಕಾಣಬೇಕೆ ಹೊರತು ಸಂವೇದನಾಶೂನ್ಯತೆಯನ್ನು ತೋರಬಾರದು.
ವಿಧಾನಮಂಡಲ ಕಲಾಪದ ನಡುವೆ ಶಾಸಕರು ವಿಶ್ರಾಂತಿ ಪಡೆಯಲು ಸರ್ಕಾರಿ ದುಡ್ಡಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಎರಡೆರಡು ಶಿಫ್ಟ್ಗಳಲ್ಲಿ ಅಥವಾ ಹೆಚ್ಚು ಅವಧಿ ಕಾರ್ಯನಿರ್ವಹಿಸುವ ನೌಕರರಿಗೆ ‘ಅಮಾನತು’ ಶಿಕ್ಷೆ ಕಲ್ಪಿಸುವುದು ಯಾವ ನ್ಯಾಯ?