

ಏನೆಲ್ಲವನ್ನು ಸೃಷ್ಟಿಸಿದ ಪರಮಾತ್ಮ ಮನುಷ್ಯನನ್ನು ಸಹ ಸೃಷ್ಟಿಸಿದ. ಸಕಲ ಭೋಗ ಭಾಗ್ಯಗಳನ್ನು ಕೊಟ್ಟ. ಆದರೆ ಮನುಷ್ಯನಿಗೆ ಸಂತೃಪ್ತಿ ಇಲ್ಲ. ಇದ್ದುದರಲ್ಲಿ ತೃಪ್ತಿ ಪಡೆಯುವುದೇ ಜೀವನದ ಪರಮ ಗುರಿಯಾಗಬೇಕು. ನಮ್ಮ ಮನೆಯ ಅಂಗಳದ ಕಸವನ್ನು ನಾವಾಗಲಿ ಇಲ್ಲವೇ ಬೇರೆಯವರಾಗಲಿ ಹಸನಗೊಳಿಸಬಹುದು. ಆದರೆ ಮನದ ಅಂಗಳದ ಕಸವನ್ನು ನಾವೇ ಹಸನ ಮಾಡಿಕೊಳ್ಳಬೇಕಾಗುತ್ತದೆ.
ನಮ್ಮ ಅಂತರಂಗ ಬೇರೆಯವರ ಕಣ್ಣಿಗೆ ಕಾಣದು. ಒಬ್ಬ ಶ್ರೀಮಂತ ಹೂವಿನ ತೋಟ ನಿರ್ವಿುಸಿದ್ದ. ಹೂವು ಮಾರಿ ಅಪಾರ ಸಂಪತ್ತು ಗಳಿಸಿದ್ದ. ಆದರೆ ಯಾವತ್ತೂ ಹೂದೋಟಕ್ಕೆ ಹೋದವನಲ್ಲ. ಅಲ್ಲಿಯ ಹೂವಿನ ಸೌಂದರ್ಯ ಸುಗಂಧ ಸವಿದಿರಲಿಲ್ಲ. ಆ ಹೂವಿನ ತೋಟದಲ್ಲಿ ಕೆಲಸ ಮಾಡುವ ಕೂಲಿಯವನ ಒತ್ತಾಯಕ್ಕೆ ಒಪ್ಪಿ ಹೂದೋಟಕ್ಕೆ ಹೋದ. ವೈವಿಧ್ಯಮಯವಾದ ಹೂವಿನ ತೋಟದಲ್ಲಿ ಸ್ವಲ್ಪ ಸಮಯ ಕುಳಿತ. ಎಲ್ಲಿಯೂ ಕಾಣದ ಆನಂದವನ್ನು ಪಡೆದ. ಕೂಲಿಯವನಿಗೆ ಹೇಳಿದ: ಇಂದು ನನ್ನ ಜೀವನ ಸಾರ್ಥಕವೆನಿಸಿತು. ಇಷ್ಟು ದಿನ ಹೂವನ್ನು ಮಾರಿ ಹಣ ಗಳಿಸಿದ್ದೆ. ಆದರೆ ಸಂತೋಷ ಕಂಡಿರಲಿಲ್ಲ. ನಿನ್ನಿಂದ ಇಂದು ನಾನು ಸಂತಸದ ದಾರಿಯನ್ನು ಕಂಡೆ ಎಂದ. ನಮ್ಮ ಬದುಕು ಕೂಡ ಒಂದು ಹೂದೋಟ. ಅಲ್ಲಿ ನಾವು ಶಾಂತಿ, ಸಮಾಧಾನ, ದಯೆ, ಕಾರುಣ್ಯ, ವಾತ್ಸಲ್ಯ ಮೊದಲಾದ ಗುಣಗಳನ್ನು ಬೆಳೆಸಿಕೊಳ್ಳಬೇಕು. ದಾರಿಯ ಪಕ್ಕದಲ್ಲಿ ಒಂದು ಹೂಗಂಟಿ ಬೆಳೆದು ನಿಂತಿತ್ತು.
ಆ ದಾರಿಯಲ್ಲಿ ನಡೆದು ಹೋಗುವ ಮನುಷ್ಯನ ಕೈಗೆ ತಲುಪಿ ಗಾಯವಾಯಿತು. ತಕ್ಷಣ ಆ ವ್ಯಕ್ತಿ ಸಿಟ್ಟಿನಿಂದ ನೋಡಿದ. ಆ ಹೂಗಂಟಿ ಹೇಳಿತು: ಎಲೈ ಮಾನವ ಮುಳ್ಳುಗಳಿರುವುದು ನನ್ನ ರಕ್ಷಣೆಗೆ, ತಿವಿಯಲು ಅಲ್ಲ. ನನ್ನಲ್ಲಿರುವ ಹೂಗಳನ್ನು ನೋಡು ಎಂದಿತು. ಅದನ್ನು ಕೇಳಿದ ಆ ವ್ಯಕ್ತಿಯ ವಿವೇಕ ಕಣ್ಣು ತೆರೆಯಿತು. ಹಾಗಾಗಿ ಜೀವನದಲ್ಲಿ ಸಿಹಿ ಕಹಿಗಳನ್ನು ಸಮನ್ವಯ ಭಾವದಿಂದ ಕಂಡು ಪರಮ ಶಾಂತಿ ಪಡೆಯಲು ಯತ್ನಿಸುವುದು ಶ್ರೇಯಸ್ಕರ.