

Nawaz Sharif : ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ನಡೆದ ಅಮಾನವೀಯ ಭಯೋತ್ಪಾದಕ ದಾಳಿಯನ್ನು ಇಡೀ ಜಗತ್ತು ಖಂಡಿಸಿದೆ. ಈ ಕೃತ್ಯದಲ್ಲಿ ಪಾಕಿಸ್ತಾನ ಕೈವಾಡ ಇರುವುದರಿಂದ ಭಾರತ, ಪಾಕ್ ವಿರುದ್ಧ ಆಕ್ರೋಶ ಹೊರಹಾಕಿದೆ. ಅಲ್ಲದೆ, ರಾಜತಾಂತ್ರಿಕವಾಗಿ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇತ್ತ ಪಾಕ್ ಕೂಡ ಭಾರತದ ವಿರುದ್ಧ ಕ್ರಮಗಳನ್ನು ಕೈಗೊಂಡಿದೆ. ಉಭಯ ದೇಶಗಳ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯುದ್ಧದ ಭೀತಿ ಆವರಿಸಿದೆ. ಇದೇ ಸಂದರ್ಭದಲ್ಲಿ, ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ.
ರಾಜತಾಂತ್ರಿಕ ಮಾರ್ಗಗಳ ಮೂಲಕ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಪರಿಹರಿಸುವಂತೆ ನವಾಜ್ ಷರೀಫ್ ಅವರು ತಮ್ಮ ಕಿರಿಯ ಸಹೋದರ ಮತ್ತು ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಷ್ಗೆ ಸಲಹೆ ನೀಡಿದ್ದಾರೆ.
ಪಾಕಿಸ್ತಾನದ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಶೆಹಬಾಜ್ ಅವರು ಭಾನುವಾರ ಲಾಹೋರ್ನಲ್ಲಿ ನವಾಜ್ ಷರೀಫ್ ಅವರನ್ನು ಭೇಟಿಯಾದರು. ಪಹಲ್ಗಾಮ್ ದಾಳಿಯ ನಂತರ ಭಾರತ ತೆಗೆದುಕೊಂಡ ನಿರ್ಧಾರಗಳ ವಿರುದ್ಧ ತಮ್ಮ ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಅವರಿಗೆ ವಿವರಿಸಿದರು. ಸಿಂಧೂ ಜಲ ಒಪ್ಪಂದದಿಂದ ಭಾರತ ಹಿಂದೆ ಸರಿದಿರುವ ಸಂಗತಿಗಳನ್ನು ಬಹಿರಂಗಪಡಿಸಿದರು. ಭಾರತದ ನಡವಳಿಕೆಯಿಂದಾಗಿ ಉದ್ವಿಗ್ನತೆ ಹೆಚ್ಚಾಗಿದೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ, ನವಾಜ್ ಷರೀಫ್ ಪ್ರತಿಕ್ರಿಯಿಸಿ, ಆಕ್ರಮಣಕಾರಿಯಾಗಿ ವರ್ತಿಸದಂತೆ ಮತ್ತು ಭಾರತದೊಂದಿಗೆ ಶಾಂತಿ ಪುನಃಸ್ಥಾಪಿಸಲು ಲಭ್ಯವಿರುವ ಎಲ್ಲ ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ತಮ್ಮ ಸಹೋದರನಿಗೆ ಸಲಹೆ ನೀಡಿದ್ದಾರೆ. ಅಲ್ಲದೆ, ಭಾರತದ ವಿಚಾರದಲ್ಲಿ ಎಚ್ಚರವಹಿಸುವಂತೆ ಹೇಳಿದ್ದಾರೆಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದೆಡೆ, ಷರೀಫ್ ಅವರ ಪುತ್ರಿ ಮತ್ತು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ಅವರು ಭಯೋತ್ಪಾದಕ ದಾಳಿಯನ್ನು ಖಂಡಿಸಿ ಇನ್ನೂ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಇದೇ ಸಂದರಭದಲ್ಲಿ, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ, ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ನೆರೆಯ ದೇಶವು ಕೂಡ ಇದಕ್ಕೆ ಪ್ರತಿಕ್ರಿಯಿಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸಿಫ್ ಪ್ರಮುಖ ಹೇಳಿಕೆಗಳನ್ನು ನೀಡಿದ್ದು, ಪಹಲ್ಗಾಮ್ ಘಟನೆಯ ನಂತರ ಭಾರತ ಪ್ರತೀಕಾರದ ದಾಳಿ ನಡೆಸಲಿದೆ ಮತ್ತು ಇದು ಶೀಘ್ರದಲ್ಲೇ ಸಂಭವಿಸುವ ಸಾಧ್ಯತೆಯಿದೆ ಎಂದಿದ್ದಾರೆ.
ಭಾರತದಿಂದ ಪ್ರತೀಕಾರದ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ, ನಾವು ನಮ್ಮ ಪಡೆಗಳನ್ನು ಎಚ್ಚರಿಸಿದ್ದೇವೆ. ದಾಳಿಯ ಸಂದರ್ಭದಲ್ಲಿ ಕೆಲವು ಕಾರ್ಯತಂತ್ರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆ ಮಟ್ಟಿಗೆ ಈಗಾಗಲೇ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭಾರತ ದಾಳಿ ನಡೆಸುವ ಸಾಧ್ಯತೆಯಿದೆ ಎಂದು ತಮ್ಮ ಸೇನೆಯು ಸರ್ಕಾರಕ್ಕೂ ಸಹ ವಿವರಿಸಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನವು ಹೆಚ್ಚಿನ ಎಚ್ಚರಿಕೆಯಲ್ಲಿದೆ. ಅಲ್ಲದೆ, ನಮ್ಮ ಅಸ್ತಿತ್ವಕ್ಕೆ ನೇರ ಬೆದರಿಕೆ ಇದೆ ಎಂದು ಭಾವಿಸಿದರೆ, ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಾಗಿ ಆಸಿಫ್ ಹೇಳಿದ್ದಾರೆ. (ಏಜೆನ್ಸೀಸ್)