

ಮೈಸೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ತಮ್ಮ ಪುತ್ರಿ ಕೆ.ಎಸ್.ಶ್ರಾವ್ಯಳಿಗೆ 545 ಅಂಕ ಬಂದಿತ್ತು. ಮರು ಮೌಲ್ಯಮಾಪನಕ್ಕೆ ಹಾಕಿದ ಬಳಿಕ 606(ಶೇ.97) ಫಲಿತಾಂಶ ಬಂದಿದೆ. ಯಾರದೋ ತಪ್ಪಿನಿಂದಾಗಿ ಅತಿ ಕಡಿಮೆ ಅಂಕ ಬಂದಿತೆಂದು ತಮ್ಮ ಪುತ್ರಿ ಅನುಭವಿಸಿದ ಮಾನಸಿಕ ನೋವಿಗೆ ಬೆಲೆ ಕಟ್ಟಲು ಸಾಧ್ಯವೇ ಎಂದು ಬನ್ನೂರು ಹೋಬಳಿ ಕೊಡಗಳ್ಳಿ ಗ್ರಾಮದ ಸುಮಾ ಶ್ರೀನಿವಾಸ್ ಪ್ರಶ್ನಿಸಿದರು.
ನನ್ನ ಮಗಳ ರೀತಿಯೇ ಎಷ್ಟೋ ಮಕ್ಕಳ ಫಲಿತಾಂಶದಲ್ಲಿ ಲೋಪಗಳು ಆಗಿರಬಹುದಾಗಿದೆ. ಆ ಮಕ್ಕಳು ಅನುಭವಿಸುವ ಮಾನಸಿಕ ಆಘಾತ ಹೇಳಲು ಅಸಾಧ್ಯ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೌಲ್ಯಮಾಪನ ವೇಳೆ ಎಚ್ಚರಿಕೆ ವಹಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.
ಚೆನ್ನಾಗಿ ಓದಿದ್ದರೂ ಕಡಿಮೆ ಅಂಕ ಬಂದಿದೆ ಎಂದು ಮಕ್ಕಳು ಆತಂಕಕ್ಕೆ ಒಳಗಾಗುವುದು ಬೇಡ. ಧೈರ್ಯದಿಂದ ಮರು ಮೌಲ್ಯಮಾಪನಕ್ಕೆ ಹಾಕಬೇಕು ಎಂದು ತಿಳಿಸಿದರು. ವಿದ್ಯಾರ್ಥಿನಿ ಶ್ರಾವ್ಯಾ, ತಂದೆ ಕೊಡಗಳ್ಳಿ ಶ್ರೀನಿವಾಸ್, ದೊಡ್ಡಪ್ಪ ರಾಜೇಂದ್ರಪ್ರಸಾದ್ ಹೊನ್ನಲಗೆರೆ ಇದ್ದರು.