

ತೀರ್ಥಹಳ್ಳಿ: ಮಳೆಗಾಲ ಆರಂಭ ಆಗುವವರೆಗೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಪಿಡಿಒಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಕುಡಿಯುವ ನೀರಿನ ಯೋಜನೆಯಲ್ಲಿ ಕಳಪೆ ಕಾಮಗಾರಿ ಮಾಡಿದವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕಾಗುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದರು.
ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿ ಬುಧವಾರ ಗ್ರಾಮೀಣ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಬಿಸಿಲಿನ ಬೇಗೆ ಏರುತ್ತಿರುವ ಹಿನ್ನೆಲೆಯಲ್ಲಿ ನೀರಿನ ಕೊರತೆಯಾಗುವ ಸಾಧ್ಯತೆ ಇದೆ. ಕುಡಿಯುವ ನೀರಿನ ಸರಬರಾಜಿಗೆ ನೀರಿಗೆ ಕೊರತೆಯಾದಲ್ಲಿ ಖಾಸಗಿ ಕೊಳವೆ ಬಾವಿಗಳಿಂದಲೂ ನೀರು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ಅನಿವಾರ್ಯವಾದರೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಮಾಡುವ ವೆಚ್ಚದ ಹಣವನ್ನು ಜಿಲ್ಲಾಡಳಿತದಿಂದ ಪಡೆಯಬಹುದು ಎಂದರು.
ಕುಡಿಯುವ ನೀರಿನ ಯೋಜನೆ ಕಾಮಗಾರಿ ಕಳಪೆಯಾಗಿದ್ದರೆ ಅಂತಹ ಗುತ್ತಿಗೆದಾರಿಗೆ ನೋಟಿಸ್ ನೀಡಬೇಕು. ಅಳವಡಿಸಿರುವ ಉಪಕರಣಗಳ ಗುಣಮಟ್ಟ ಕಳಪೆಯಾಗಿದ್ದರೆ ಅಂಥವನ್ನು ಗುರುತಿಸಿ ನನ್ನ ಗಮನಕ್ಕೆ ತರಬೇಕು. ನಿರ್ಮಾಣವಾಗಿರುವ ಟ್ಯಾಂಕ್ ಬಳಕೆಯಾಗದಿದ್ದರೆ ಬಿರುಕು ಬರುವುದು ಸಹಜ. ಅವುಗಳನ್ನು ಒಡೆದು ಹೊಸದಾಗಿ ನಿರ್ಮಿಸುವುದು ಅನಿವಾರ್ಯ ಎಂದರು.
ಜೆಜೆಎಂ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿ ಸಭೆಯಲ್ಲಿ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಡಲಾಯಿತು. ಪೈಪ್‌ಗಳು ಎಲ್ಲೆಂದರಲ್ಲಿ ಸೀಳಿಹೋಗಿವೆ. ನಲ್ಲಿಗಳು ಈಗಾಗಲೇ ಕಿತ್ತುಹೋಗಿವೆ. ಕೆಲವು ಭಾಗದಲ್ಲಿ ಪೈಪ್‌ಲೈನ್ ಆಗಿದೆ, ಟ್ಯಾಂಕ್ ನಿರ್ಮಿಸಿಲ್ಲ. ಕೆಲವೆಡೆ ಸ್ಥಳೀಯರಿಂದ ಮಾಡಿಸಿರುವ ಕೆಲಸ ಕಳಪೆಯಾಗಿದೆ ಎಂದು ಶಾಸಕರಿಗೆ ದೂರು ಸಲ್ಲಿಸಿದರು.
ಟ್ಯಾಂಕ್ ನಿರ್ಮಿಸಿ ಎರಡು ವರ್ಷವಾದರೂ ನೀರು ಬಿಡದ ಕಾರಣ ಬಿಸಿಲಿನ ತಾಪಕ್ಕೆ ಪೂರ್ಣ ಬಿರುಕು ಬಿಟ್ಟಿದೆ. ಆಗುಂಬೆ ಸಮೀಪದ ಕಂಚಿನಹಳ್ಳ ಭಾಗದ 4-5 ಹಳ್ಳಿಯಲ್ಲಿ ಪೈಪ್ ಅಳವಡಿಸಿದ್ದರೂ ಟ್ಯಾಂಕ್ ನಿರ್ಮಿಸಿಲ್ಲ. ಕೇಳಿದರೆ ಮನೆಗಳ ಸಂಖ್ಯೆ ಕಡಿಮೆ ಇರುವಲ್ಲಿ ಟ್ಯಾಂಕ್ ಮಾಡಲು ಅವಕಾಶವಿಲ್ಲಾ ಎನ್ನುತ್ತಾರೆ. ಗ್ರಾಪಂಗೆ ಹಸ್ತಾಂತರ ಮಾಡಿರುವ ಕಡೆಗಳಲ್ಲೂ ನೀರು ಬರುತ್ತಿಲ್ಲ ಎಂದು ಸ್ಥಳೀಯರು ದೂರಿದರು. ತಾಪಂ ಇಒ ಎಂ.ಶೈಲಾ, ಜಿಪಂ ಎಇಇ ಅಣ್ಣಪ್ಪ, ಪಿಡಿಒಗಳು ಭಾಗವಹಿಸಿದ್ದರು.