

ಶಿವಮೊಗ್ಗ: ಖಾಸಗಿ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಕೆರೆಯ ಹೂಳು ಹಾಗೂ ಮಣ್ಣನ್ನು ಸೂಕ್ತ ಪ್ರಾಧಿಕಾರದ ಅನುಮತಿ ಇಲ್ಲದೇ ತೆಗೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಎಚ್ಚರಿಕೆ ನೀಡಿದರು.
ಕೆರೆ ಹೂಳು ಹಾಗೂ ಮಣ್ಣಿನ ಅನಧಿಕೃತ ಸಾಗಣೆ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಈ ಸಂಬಂಧ ಶೀಘ್ರವೇ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ-ಖಾಸಗಿ ಕಾಮಗಾರಿಗಳಿಗೆ, ಕೆರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಾಗೂ ಇತರೆ ಕೆರೆಯ ಹೂಳು ಎತ್ತುವಳಿ ಕಾಮಗಾರಿಗಳಿಗೆ ಕೆರೆಯ ಮಣ್ಣನ್ನು ಉಪಯೋಗಿಸಲು ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳಾದ ಸಣ್ಣ ಮತ್ತು ಬೃಹತ್ ನೀರಾವರಿ ಇಲಾಖೆ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ, ಗ್ರಾಮ ಪಂಚಾಯತ್‌ಗಳಿಗೆ ಅರ್ಜಿ ಸಲ್ಲಿಸಬೇಕು ಎಂದರು.
ಸಂಬಂಧಪಟ್ಟ ಕೆರೆ ಪ್ರಾಧಿಕಾರಗಳು ಅರ್ಜಿ ಪರಿಶೀಲಿಸಿ, ಕೆರೆ ಪ್ರದೇಶದಲ್ಲಿ ಎತ್ತುವಳಿ ಮಾಡಬಹುದಾದ ಹೂಳು ಅಥವಾ ಮಣ್ಣಿನ ಅಂದಾಜು ಪಟ್ಟಿ ತಯಾರಿಸಿ ಕೆರೆಯ ಯಾವ ಭಾಗದಲ್ಲಿ ಎತ್ತುವಳಿ ಮಾಡುವುದು ಎಂಬ ನಕಾಶೆವುಳ್ಳ ವಿಸ್ತೃತ ಯೋಜನಾ ವರದಿಯೊಂದಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರವಾನಿಸಬೇಕು ಎಂದು ಸೂಚಿಸಿದರು.
ನಿಯಮಾನುಸಾರ ಹಾಗೂ ಕ್ರಮಬದ್ಧವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಾರ್ಯಾನುಮತಿ ಪಡೆದು ಕೆರೆಗಳಲ್ಲಿ ಹೂಳು ಅಥವಾ ಮಣ್ಣು ಎತ್ತುವಳಿ ಮಾಡುವಂತೆ, ತಪ್ಪಿದಲ್ಲಿ ಕೆರೆ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆ ಹಾಗೂ ಸಾಗಣೆಯಲ್ಲಿ ತೊಡಗಿರುವ ವಾಹನಗಳನ್ನು ಜಪ್ತಿ ಮಾಡಿ ದಂಡ ಸಹಿತವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೆರೆ ಪ್ರಾಧಿಕಾರಗಳಿಗೆ ಸೂಚಿಸಿದರು.
ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ಎಎಸ್‌ಪಿ ಕಾರ್ಯಪ್ಪ, ಹಿರಿಯ ಭೂ ವಿಜ್ಞಾನಿ ನವೀನ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಗಣಿ ಇಲಾಖೆ ಕಾರ್ಯಾದೇಶ ಅಗತ್ಯ
ಗ್ರಾಮ ಪಂಚಾಯಿತಿಯ ಪ್ರಾಧಿಕಾರವುಳ್ಳ ಕೆರೆಗಳಲ್ಲಿ ಹೂಳು ಅಥವಾ ಮಣ್ಣು ತೆಗೆಯಲು ಅನುಮತಿ ಕೋರಿದಲ್ಲಿ ಸಂಬಂಧಿಸಿದ ಗ್ರಾಪಂ ಸಾಮಾನ್ಯ ಸಭೆಯ ಅನುಮೋದನೆ ಹಾಗೂ ಸಕ್ಷಮ ಪ್ರಾಧಿಕಾರಿಗಳಿಂದ ಡಿಪಿಆರ್ ತಯಾರಿಸಿಕೊಂಡು ಪ್ರಸ್ತಾವನೆಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಲ್ಲಿಸಬೇಕು ಎಂದು ಡಿಸಿ ಗುರುದತ್ತ ಹೆಗಡೆ ಹೇಳಿದರು. ಸೂಕ್ತ ದಾಖಲಾತಿಗಳೊಂದಿಗೆ ಸ್ವೀಕೃತಗೊಂಡ ಪ್ರಸ್ತಾವನೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರಿಶೀಲಿಸಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994, ತಿದ್ದುಪಡಿ ನಿಯಮಗಳು 2023ರಂತೆ ಸರ್ಕಾರಕ್ಕೆ ಪಾವತಿಸಬೇಕಾದ ರಾಜಧನ ಮತ್ತು ಇನ್ನಿತರೆ ಶುಲ್ಕಗಳನ್ನು ನಿಗದಿಪಡಿಸಿ ಕಾರ್ಯಾದೇಶ ನೀಡಬೇಕು. ಕಾರ್ಯಾದೇಶವನ್ನು ಐಎಲ್ಎಂಎಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿ ಮಣ್ಣು ಸಾಗಣೆ ಮಾಡಲು ಖನಿಜ ಸಾಗಣೆ ಪರವಾನಗಿ ವಿತರಿಸುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.