ಗ್ರಹಣದ ಆತಂಕ ಬೇಡ, ಎರಡು ತಿಂಗಳು ಎಚ್ಚರಿಕೆಯಲ್ಲಿರಿ...

Grahana
Published on
| ರಾಜಗುರು ಬಿ.ಎಸ್. ದ್ವಾರಕಾನಾಥ್

ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್

ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ||

ಗ್ರಹ ಬದಲಾವಣೆ, ಗ್ರಹಣಗಳ ಪರಿಣಾಮದಿಂದಾಗುವ ಆಗು- ಹೋಗು ಗಳನ್ನು ವಿಶ್ಲೇಷಿಸುವುದಾದರೆ ಈ ಬಾರಿ ಅಮವಾಸ್ಯೆ ಗ್ರಹಣ (ಶನಿವಾರ) ರಾಷ್ಟ್ರದಲ್ಲಿ ಆಚರಣೆ ಇರಲಿಲ್ಲ. ಹೀಗಾಗಿ ಯಾರೂ ಭಯ ಪಡಬೇಕಿಲ್ಲ. ಯಾವ ರಾಶಿಗೂ ಮಾರಕವಿಲ್ಲ, ಚಿಂತೆಯೂ ಮಾಡಬೇಕಿಲ್ಲ. ಆರೋಗ್ಯದ ದೃಷ್ಟಿಯಿಂದ ಮುಂದಿನ ಎರಡು ತಿಂಗಳು ಎಚ್ಚರಿಕೆಯಲ್ಲಿರಬೇಕಾಗುತ್ತದೆ. ಜೀವಕ್ಕೆ ಅಪಾಯಕಾರಿಯಾಗುವ ರೋಗಗಳು ಬರಲ್ಲ, ಸಣ್ಣಪುಟ್ಟ ಪರಿಣಾಮ ಬೀರುವ ಸೋಂಕು ಇರಲಿದೆ.

ಎಲ್ಲಿಯವರೆಗೆ ಸತ್ಕರ್ಮ ಆಚರಣೆ ಇರುತ್ತದೋ ಅಲ್ಲಿವರೆಗೆ ದೇವರು ಸುಮ್ಮನಿರುತ್ತಾನೆ. ಪ್ರಕೃತಿಗೆ ಅಡೆತಡೆ ಉಂಟುಮಾಡಿದಾಗ, ಯಾವುದನ್ನು ಮಾಡಬಾರದೋ ಅದನ್ನು ಮಾಡಿದಾಗ ದೇವರು ಯಾವುದೋ ಒಂದು ರೂಪದಲ್ಲಿ ಪ್ರಕಟವಾಗಿ ಮನುಷ್ಯರಿಗೆ ಪಾಠ ಕಲಿಸುತ್ತಾನೆಂಬುದಕ್ಕೆ ತಾಜಾ ಉದಾಹರಣೆ ನಮ್ಮ ಎದುರಿಗೆ ನೋಡುತ್ತಿದ್ದೇವೆ. ಕರೊನಾ ಬಂದಿದೆ, ಸಾವಿರಾರು ಜನರು ಜೀವ ಕಳೆದುಕೊಳ್ಳಬೇಕಾಯಿತು. ಪರಮಾತ್ಮ ಅವತರಿಸಿ ಸಮತೋಲನ ಮಾಡಲೆಂದೇ ಹೀಗೆ ಮಾಡಿದ್ದಾನೆ ಎನ್ನಬಹುದು. ಯಾರದ್ದೋ ತಪ್ಪು ಎಂದು ಹೇಳುವುದಲ್ಲ. ಈ ಸಂವತ್ಸರದಲ್ಲಿ ನವೆಂಬರ 20ರಂದು ಗುರು ಮಕರದಿಂದ ಕುಂಭಕ್ಕೆ ಪ್ರವೇಶ ಮಾಡಿದ್ದಾನೆ. ಕಳೆದ ನಾಲ್ಕು ವರ್ಷದಲ್ಲಿ ರಾಜಕಾರಣದಲ್ಲಿ ಸಾಕಷ್ಟು ವ್ಯತ್ಯಾಸ ಆಗುತ್ತಿದೆ. ವಿಶ್ವದಲ್ಲಿ ಯಾವ ದೇಶ ನೆಮ್ಮದಿಯಾಗಿದೆ? ಏನು ಸಾಧನೆಯಾಗಿದೆ? ಅದರರ್ಥವಾಗಿ ಗ್ರಹಗಳ ವಿಶ್ಲೇಷಣೆ ಮಾಡುವುದಾದರೆ ಜನರು ಜೀವ ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಇದೆ. ಮತ್ತೊಂದೆಡೆ, ಹೆಚ್ಚುಕಡಿಮೆ ಜಲಪ್ರಳಯ ಆಗುತ್ತಿದೆ. ಬದುಕು ಅಸ್ಥಿರವಾಗಿದೆ. ಗುರುವಿನ ಮಕರ ಕುಂಭದ ಬದಲಾವಣೆ ಇದಕ್ಕೆಲ್ಲ ಕಾರಣ.

ಕುಂಭ ರಾಶಿಗೆ ಗುರು ಬಂದಿದ್ದರೂ ಏನಾಗಿದೆ ಎಂದರೆ, ಅಲೆಗಳಿಂದ ಸಮುದ್ರಗಳು ಉಕ್ಕಿಹರಿದು ಜಲದಿಂದ ಹೊಸ ರೋಗ ಹುಟ್ಟಿ ಪೀಡಿಸಬಹುದು. ಆದರೆ, ಜನ ಹೆದರಬೇಕಿಲ್ಲ. ಕುಂಭದಲ್ಲಿ ಗುರು ಇರುವುದರಿಂದ ಉತ್ತರ ಭಾರತದಲ್ಲಿ ಜಲಪ್ರಳಯ ಆಗಲಿದ್ದು, ದಕ್ಷಿಣದಲ್ಲೂ ಕುಂಭದ್ರೋಣ ಮಳೆಯಾಗಿ ಹಾನಿ ಆಗಬಹುದು. ಚೆನ್ನೈ, ಕೇರಳದ ಕೆಲ ಭಾಗ, ಮುಂಬೈ ಪ್ರದೇಶ, ರಾಜ್ಯದ ಕರಾವಳಿ ಮಳೆಯಿಂದ ತತ್ತರಿಸುತ್ತದೆ. ಹಾಗಾಗಿ, ಜನರು ಮುಂದಿನ 2 ತಿಂಗಳು ಶೀತ, ಶ್ವಾಸಕೋಶಕ್ಕೆ ಸಂಬಂಧಪಟ್ಟಂತೆ ಎಚ್ಚರಿಕೆ ವಹಿಸಬೇಕು.

ಗುರು 2022 ಏಪ್ರಿಲ್ 13ರವರೆಗೆ ತನ್ನ ಮನೆ ದಾಟಿ ಸ್ವಂತಮನೆಗೆ ಹೋಗುತ್ತಾನೆ. ಇಲ್ಲಿವರೆಗೆ ಮಾತ್ರ ಕಂಟಕಪ್ರಾಯವಾಗುತ್ತಾನೆ. ಈ ಗುರುಸಂಚಾರದಲ್ಲೇ ಎರಡು ಗ್ರಹಣ ಬಂದು ಹೋಗಿವೆ. ನಮ್ಮ ದೇಶಕ್ಕೆ ಕಷ್ಟನಷ್ಟ, ಪ್ರಾಣಭೀತಿ ಕೊಟ್ಟಿಲ್ಲ. ಕೊಡುವುದೂ ಇಲ್ಲ. ಅಮೆರಿಕಕ್ಕೆ ಗ್ರಹಣದ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಕಷ್ಟನಷ್ಟ, ಅಕ್ಕಪಕ್ಕದ ಶತ್ರುಗಳಿಂದ ಅಶಾಂತಿ ಕಾಡಬಹುದು. ಆರ್ಥಿಕವಾಗಿಯೂ ಪೆಟ್ಟುಬೀಳಲಿದೆ. ದಕ್ಷಿಣ ಆಫ್ರಿಕಾದಲ್ಲಿ ಮರಣಭೀತಿ, ಪರಿಹಾರ ಇಲ್ಲದ ಕಾಯಿಲೆ ಕಾಣಿಸಿಕೊಳ್ಳಬಹುದು. ದಕ್ಷಿಣ ಅಮೆರಿಕ, ನ್ಯೂಜಿಲೆಂಡ್, ಆಸ್ಟ್ರೇಲಿಯಾದಲ್ಲಿ ಕೆಲವು ಅನಾಹುತ ಆಗಲಿವೆ. ದಕ್ಷಿಣ ಆಫ್ರಿಕಾಕ್ಕೆ ವಿಶ್ವದ ನೆರವು ಅಗತ್ಯವಾಗಲಿದೆ.

ಕಾರ್ತಿಕ ಶುದ್ಧ ಪೌರ್ಣಮಿಯ ಚಂದ್ರಗ್ರಹಣ ಮತ್ತು ಶನಿವಾರ ಸಂಭವಿಸಿದ ಸೂರ್ಯಗ್ರಹಣದ ಪರಿಣಾಮವಾಗಿ ವಿಶ್ವದ ಬೇರೆ-ಬೇರೆ ಕಡೆಗಳಲ್ಲಿ ಭೂಕಂಪ, ಚಂಡಮಾರುತ, ಸಮುದ್ರದಿಂದ ಬಿಸಿಗಾಳಿ, ತೇವಾಂಶದಿಂದ ಶೀತಗಾಳಿ ರಾಚಬಹುದು. ಒಟ್ಟಾರೆ ಈ ಎರಡು ಗ್ರಹಣಗಳು ಭಾರತಕ್ಕಿಂತ ಅಧಿಕವಾಗಿ ನೆರೆಯ ರಾಷ್ಟ್ರಗಳಿಗೆ ಹೆಚ್ಚು ಹಾನಿ ಮಾಡಲಿವೆ.

ಜನವರಿ 15ರೊಳಗೆ ನೆರೆಯ ಕೆಲವು ರಾಷ್ಟ್ರಗಳಲ್ಲಿ ರಾಜಕೀಯ ವಿಪ್ಲವಗಳು ನಡೆಯಬಹುದು. ಚೀನಾ ಕೂಡ ಆಂತರಿಕವಾಗಿ ತತ್ತರಿಸಿ ಹೋಗಲಿದೆ. ಗುರು ಬದಲಾವಣೆಯಿಂದ ಕೆಲವು ಭಾಗದಲ್ಲಿ ಒಳ್ಳೆಯ ಬೆಳೆಯಾಗುತ್ತದೆ, ಪದಾರ್ಥಗಳನ್ನು ಸಂಗ್ರಹ ಮಾಡದಿದ್ದರೆ ಆಹಾರಕ್ಕೆ ಪರದಾಡಬೇಕಾಗುತ್ತದೆ. ದೇಶ ಆಳುವವರಿಗೆ ಆಪಾದನೆ ಇಲ್ಲದಿರಬಹುದು. ಯಾವುದೇ ಕೆಟ್ಟ ಕೆಲಸ ಮಾಡದೇ ಇರಬಹುದು. ಆದರೆ, ದೇಶವನ್ನು ಮುನ್ನಡೆಸಿದರಾ ಎಂದು ಕೇಳಿದರೆ ‘ಇಲ್ಲ’ ಎನ್ನಬೇಕಾಗುತ್ತದೆ. ನೂರು ರೂ. ಪೆಟ್ರೋಲ್​ಗೆ ಕೊಟ್ಟು ಹಳ್ಳಿಯ ಬಡವ ಹೇಗೆ ಜೀವನ ಸಾಗಿಸುವುದು? ಹಣ್ಣು, ತರಕಾರಿ ತಿನ್ನಿ ಎಂದು ವೈದ್ಯರು ಹೇಳುತ್ತಾರೆ, ಈಗಿನ ಬೆಲೆಯಲ್ಲಿ ಅಸಾಧ್ಯ. ಹಾಗಿದ್ದರೆ ಬೆಲೆನಿಯಂತ್ರಣ ಏಕೆ ಸಾಧ್ಯವಾಗಲಿಲ್ಲ. ಇದೆಲ್ಲ ಅವರೇ ಮಾಡಿಕೊಂಡ ಸ್ವಯಂಕೃತ ತಪ್ಪು.

ಮತದಾನ ಕಡ್ಡಾಯಗೊಳಿಸಲು ಇದು ಸಕಾಲ. ಅಧಿಕಾರಕ್ಕಾಗಿ ಪಕ್ಷ ಬದಲಾಯಿಸದಂತೆ ಪಕ್ಷಾಂತರ ನಿಷೇಧ ಕಾಯ್ದೆ ಬಿಗಿಗೊಳಿಸುವುದಕ್ಕೂ ಇದು ಸುಸದಂರ್ಭ. ಮಹಿಳಾ ಪ್ರಾತಿನಿಧ್ಯ ಹೆಚ್ಚಿಸಲು ಮೀಸಲು ಪ್ರಮಾಣ ಜಾಸ್ತಿ ಮಾಡಲು ಇದು ಸೂಕ್ತ ಅವಕಾಶ. ಗುರು ಕುಂಭ, ಮೀನಕ್ಕೆ ಬಂದಾಗ ಇದೆಲ್ಲವನ್ನೂ ಜಾರಿ ಮಾಡಿದರೆ ಆಡಳಿತ ಪಕ್ಷದ ವರ್ಚಸ್ಸು ವೃದ್ಧಿಸಲು ಸಹಕಾರಿಯಾಗಲಿದೆ. 2022 ಏಪ್ರಿಲ್ 14ರಂದು ಒಂದೇ ದಿನ ಆರು ಗ್ರಹಗಳು ಬದಲಾಗುತ್ತವೆ. ರಾಹು, ಕೇತು, ಗುರು, ಸೂರ್ಯ ಸೇರಿ ಆರು ಗ್ರಹಗಳು ಒಟ್ಟು ಏಕಕಾಲದಲ್ಲಿ ಬದಲಾಗುತ್ತವೆ. ಒಂದೇ ಮಾಸದಲ್ಲಿ ಈ ರೀತಿ ಬದಲಾವಣೆ ಬಲು ಅಪರೂಪ. ಅವತ್ತೂ ಹೇಳಿದ್ದೆ, ಇವತ್ತೂ ಹೇಳುತ್ತೇನೆ. ದೇಶಕ್ಕೆ ಆಗುವ ಅನಾಹುತ ತಪ್ಪಿಸಲು ಗುರುಕೃಪೆ ಬೇಕು. ಪ್ರಜಾರಕ್ಷಣೆಗಾಗಿ ಪ್ರಧಾನಿಯವರು ಶ್ರೀಕ್ಷೇತ್ರ ಗಾಣಗಾಪುರಕ್ಕೆ ಭೇಟಿಕೊಟ್ಟು ದತ್ತಾತ್ರೇಯನಲ್ಲಿ ಪ್ರಾರ್ಥಿಸಲಿ.

ಬೆಲೆಯೇರಿಕೆ ಆಗುತ್ತದೆ: ರಾಜಕಾರಣದಲ್ಲಿ ದೊಡ್ಡ ಸ್ಥಾನಮಾನ ಹೊಂದಿರುವವರು ಆರೋಗ್ಯ ಸಮಸ್ಯೆ ಉಂಟಾಗಿ ಕಣ್ಮರೆಯೂ ಆಗಬಹುದು, ಪಾಕಿಸ್ತಾನವು ಅಪ್ಘಾನಿಸ್ತಾನದ ನೆಲೆ ಬಳಸಿಕೊಂಡು ಭಾರತದತ್ತ ನುಗ್ಗುವ ಅಪಾಯವಿದೆ, ಈ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯ. ಅಮೆರಿಕ ಕೂಡ ಭಾರತದ ಮುಂದೆ ಸಹಾಯಹಸ್ತ ಚಾಚಬೇಕಾಗಿ ಬರಬಹುದು. ಪುಟ್ಟಪುಟ್ಟ ರಾಜ್ಯಗಳು ಸೊರಗಿ ಹೋಗುತ್ತವೆ, ಆಹಾರ ಪದಾರ್ಥದ ಬೆಲೆ ಏರುತ್ತ ಹೋಗುತ್ತದೆ, ಸುಖವೂ ಇರಲ್ಲ. ಜನಪ್ರಿಯತೆಗೆ, ಜನನಾಯಕ ಎನಿಸಿಕೊಳ್ಳಲು ಗುಂಪಿನ ನಡುವೆ ಹೋದರೆ ಪ್ರಧಾನಿಗೆ ಅಪಾಯವಿದೆ.

ರಾಷ್ಟ್ರ ರಾಜಕೀಯ ಹೇಗಿದೆ?: ಇಂದು ರಾಷ್ಟ್ರದಲ್ಲಿನ ಆಳುವ ಪಕ್ಷದ ಪ್ರಭಾವ ಕುಗ್ಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕುಗ್ಗಲಿದೆ. ಕೇವಲ ಶನಿಯ ಸಂಚಾರದಿಂದಲೇ ಜನಾನುರಾಗಿ, ಜನಾದೇಶ ಇಳಿಮುಖವಾಗಲಿದೆ. ಆದರೆ, ವಿರೋಧ ಪಕ್ಷ ಆ ಸ್ಥಾನ ತುಂಬಲು ಅವಕಾಶ ಇಲ್ಲ. ಡಿಸೆಂಬರ್​ನಿಂದ ಏಪ್ರಿಲ್ 14ರವರೆಗೆ ರಾಷ್ಟ್ರವನ್ನು ಆಳುವವರ ಕೀರ್ತಿ ದಿನೇದಿನೆ ಕುಗ್ಗುತ್ತದೆ. ಮುಂಬರುವ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಏಕಪಕ್ಷೀಯ ವಿಜಯಕ್ಕೆ ತಡೆ ಬೀಳಲಿದೆ. ಎಲ್ಲ ರಾಜ್ಯಗಳಲ್ಲೂ ಅವರು ಸರ್ಕಾರ ಉಳಿಸಿಕೊಳ್ಳಲು ಸಣ್ಣಪುಟ್ಟ ಪಕ್ಷಗಳಿಗೆ ಕೈಚಾಚಲೇ ಬೇಕಾಗುತ್ತದೆ. ಕಾಂಗ್ರೆಸ್​ಗೆ ಸದ್ಯ ದೊಡ್ಡ ಲಾಭವಾಗುವ ಲಕ್ಷಣ ಇಲ್ಲದೇ ಇದ್ದರೂ ಬೇರೆ-ಬೇರೆ ಪಕ್ಷಗಳು ಒಂದಾಗಿ, ಒಂದು ಹಂತದಲ್ಲಿ ರಾಷ್ಟ್ರದಲ್ಲಿ ಆಳುವವರಿಗೆ ಭಯವನ್ನೂ ಹುಟ್ಟಿಸುತ್ತಾರೆ, ಕಡಿವಾಣವನ್ನೂ ಹಾಕುತ್ತಾರೆ. ಸೂರ್ಯ ಚಲಿಸುತ್ತ ಧನಸ್ಸಿಗೆ ಬರುತ್ತಾನೆ. ಮಕರ ರಾಶಿಗೆ ಜನವರಿ 15ಕ್ಕೆ ಪ್ರವೇಶ ಮಾಡಿದಾಗ ರಾಷ್ಟ್ರದಲ್ಲಿ ಒಬ್ಬ ಮಹಿಳೆ ರಾಷ್ಟ್ರ ರಾಜಕಾರಣದಲ್ಲಿ ಸೆಣಸಾಟ ಮಾಡಲಿದ್ದು, ಆಳುವವರು ಕೆಲವೊಂದು ಕಹಿ ಉಣಬೇಕಾಗುತ್ತದೆ.

ರಾಜ್ಯದ ಕತೆ ಏನು?: ರಾಜ್ಯದ ವಿಚಾರಕ್ಕೆ ಬಂದರೆ ಡಿ.15ರಿಂದ ಜನವರಿ 15ರವರೆಗೆ ರಾಜಕೀಯ ಅಸ್ಥಿರತೆ ಕಾಣಿಸಿಕೊಳ್ಳಲಿದೆ. ಕೆಲವು ಸಮಸ್ಯೆಗಳಿಂದ ರಾಜ್ಯವನ್ನು ಆಳುತ್ತಿರುವವರಿಗೆ ರಾಜಕೀಯ ಜೀವನದಲ್ಲಿ ಕಪ್ಪುಚುಕ್ಕೆ ಬರುವ ಕಾಲ ಎಂದು ಹೇಳಬಹುದು. 15ರಂದು ರವಿ 12ನೇ ಮನೆಗೆ ಬರುತ್ತಾನೆ. ರಾಜ್ಯವನ್ನು ಆಳುವವರಿಗೆ ಸಂಕಟ ಬರುತ್ತದೆ. ಹೇಗೆ ನಿಭಾಯಿಸುತ್ತಾರೋ ಕಾದುನೋಡೋಣ. ರಾಜ್ಯದಲ್ಲಿ ಬಹಳ ಮಳೆಯಾಗುತ್ತದೆ, ಮಲೆನಾಡು ಭಾಗದಲ್ಲಿ ಬೆಳೆಹಾನಿ. ಅಡಕೆ, ಭತ್ತ, ಏಲಕ್ಕಿ, ಲವಂಗ ಬೆಳೆಗೆ ಏಟು ಬೀಳಲಿದೆ.

(ಲೇಖಕರು ದೈವಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net