

ಶಿವಮೊಗ್ಗ: ಇದುವರೆಗೆ ಜಿಲ್ಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಅತ್ಯಂತ ವ್ಯವಸ್ಥಿತ ಹಾಗೂ ಶಾಂತಿಯುತವಾಗಿ ನಡೆದಿದೆ. ಮುಂದಿನ ದಿನಗಳಲ್ಲಿ ಭದ್ರಾವತಿ, ಶಿವಮೊಗ್ಗ, ರಿಪ್ಪನ್‌ಪೇಟೆ, ಸಾಗರದ ಹಿಂದು ಮಹಾಸಭಾ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಂದರ್ಭ ಸೂಕ್ತವಾಗಿ ಬಂದೋಬಸ್ತ್ ನಿರ್ವಹಣೆ ಮಾಡಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಸೂಚಿಸಿದರು.
ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಅವರು, ಎಸ್ಪಿ, ಎಎಸ್ಪಿ, ಸಿಪಿಐ, ಡಿವೈಎಸ್ಪಿ ಹಂತದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ಈದ್‌ಮಿಲಾದ್ ಸಂದರ್ಭ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಹಲವು ಸೂಚನೆಗಳನ್ನು ನೀಡಿದರು. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ಬಂದೋಬಸ್ತ್ ಬಗ್ಗೆ ಮಾಹಿತಿ ಪಡೆದರು.
ಬಂದೋಬಸ್ತ್ ಕರ್ತವ್ಯ ನಿರ್ವಹಣೆಗೆ ಹೊರ ಜಿಲ್ಲೆಯಿಂದ ಆಗಮಿಸಿರುವ ಅಧಿಕಾರಿಗಳು ತುಂಬ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಎಲ್ಲ ಅಧಿಕಾರಿಗಳು ತಮಗೆ ಸೂಚಿಸಲಾಗಿರುವ ಸೆಕ್ಟರ್‌ನಲ್ಲಿಯೇ ಇದ್ದು ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸಬೇಕು ಎಂದರು.
ಗಣಪತಿ ಮತ್ತು ಈದ್ ಮಿಲಾದ್ ಮೆರವಣಿಗೆಗಳ ಸಂದರ್ಭದಲ್ಲಿ ರಸ್ತೆಯ ಎರಡೂ ಕಡೆ ತೀವ್ರ ನಿಗಾ ವಹಿಸಬೇಕು. ಪ್ಯಾಟ್ರೋಲಿಂಗ್ ಹೆಚ್ಚಿಸಬೇಕು. ಮೆರವಣಿಗೆಯಲ್ಲಿ ಘೋಷಣೆ ಕೂಗುವವರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಮುಖ್ಯವಾದ ಸ್ಥಳಗಳಲ್ಲಿ ಡ್ರೋನ್ ಬಳಸಿಕೊಂಡು ದೃಶ್ಯಗಳನ್ನು ಸೆರೆ ಹಿಡಿಯಬೇಕು. ಮೆರವಣಿಗೆಗಳಲ್ಲಿ 75 ಡೆಸಿಬಲ್‌ಗಿಂತ ಹೆಚ್ಚು ಶಬ್ದವನ್ನುಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಪೂರ್ವ ವಲಯ ಐಜಿಪಿ ಡಾ. ರವಿಕಾಂತೇಗೌಡ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಬಿಎಂಟಿಎಫ್ ಎಸ್ಪಿ ಮುತ್ತುರಾಜ್, ಎಎಸ್ಪಿಗಳಾದ ಎ.ಜಿ.ಕಾರಿಯಪ್ಪ, ಎಸ್.ರಮೇಶ್‌ಕುಮಾರ್ ಇತರರಿದ್ದರು.