

ಮಾಲೂರು/ಕೋಲಾರ: ಸಾರ್ವಜನಿಕ ಜೀವನದಲ್ಲಿ ಇರುವವರು ಒಬ್ಬರು ಇನ್ನೊಬ್ಬರ ಬಗ್ಗೆ ಮಾತನಾಡುವಾಗ ಮಾತಿನ ಮೇಲೆ ಹಿಡಿತ ಇರಬೇಕು. ಹೇಳಿಕೆ ನೀಡುವ ಭರದಲ್ಲಿ ನಮ್ಮ ಮನೆತನದ ಬಗ್ಗೆ ಮಾತನಾಡುವ ಮೊದಲು ಇತಿಹಾಸ ತಿಳಿದುಕೊಂಡು ಮಾತನಾಡಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಅವರು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ಗೌಡರಿಗೆ ಎಚ್ಚರಿಕೆ ನೀಡಿದರು.
ಮಾಲೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಯಾರ ವೈಯಕ್ತಿಕ ವಿಚಾರಕ್ಕೆ ಬಂದಿಲ್ಲ. ಆದರೂ ಸಹ ನನ್ನ ತಂದೆ, ತಾಯಿ ಹೆಸರನ್ನು ಪ್ರಸ್ತಾಪಿಸಿ ಮಾತನಾಡಿದ್ದೀರಿ, ಇದರ ಪರಿಣಾಮ ಏನು ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಭಾವುಕರಾದರು.
ಮತ ಎಣಿಕೆಯ ಸಂಬಂಧ ನ್ಯಾಯಾಲಯದ ಆದೇಶ ಅಸಿಂಧು ಎಂದು ಪ್ರಕಟಿಸಿದೆ. ಈ ಸಂಬಂಧ ಮಾಲೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮ ಆಚರಣೆ ಮಾಡಿದ್ದು, ಈ ಬಗ್ಗೆ ಪ್ರಶ್ನಿಸಿದಾಗ 30 ದಿನ ತಡೆ ನೀಡಿದೆ. ಇಷ್ಟು ಮಾತ್ರಕ್ಕೆ ಸಂಭ್ರಮ ಮಾಡಿರುವವರು ಹುಚ್ಚರು ಎಂದು ಹೇಳಿದ್ದೇನೆ ಹೊರತು, ಮಂಜುನಾಥಗೌಡ ಹುಚ್ಚ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಮಾಜಿ ಶಾಸಕ ಮಂಜುನಾಥಗೌಡರ ಬಗ್ಗೆ ಏಕವಚನದಲ್ಲಿ ಮಾತನಾಡಿಲ್ಲ. ಕೆಟ್ಟ ಪದಗಳ ಬಳಕೆ ಮಾಡಿಲ್ಲ. ನಮ್ಮ ತಂದೆ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಇದರಿಂದ ನಮ್ಮ ಕುಟುಂಬ ತುಂಬಾ ನೋವು ಅನುಭವಿಸುತ್ತಿದೆ. ತಾಲೂಕಿನ ಜನತೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಗಮನಕ್ಕೆ ತರುತ್ತೇನೆ. ಮಂಜುನಾಥ್ಗೌಡ ಮಾಡಿರುವ ಆರೋಪ ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
* ದರಖಾಸ್ತು ಸಮಿತಿಯಲ್ಲಿ ಅಕ್ರಮ ನಡೆದಿಲ್ಲ
ದರಖಾಸ್ತು ಸಮಿತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮಂಜುನಾಥ್ಗೌಡ ಇ.ಡಿ.ಗೆ ದೂರು ನೀಡಿದ್ದಾರೆ. ಈ ಕುರಿತು ನ್ಯಾಯಾಲಯ ನೀಡುವ ತೀಮಾರ್ನಕ್ಕೆ ನಾವು ಬದ್ಧನಾಗಿರುತ್ತೇವೆ. ಸಮಿತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.
* ಹೋಸಕೋಟೆ ಆಟ ಮಾಲೂರಲ್ಲಿ ನಡೆಯಲ್ಲ
ಮಾಜಿ ಶಾಸಕ ಮಂಜುನಾಥಗೌಡರ ಬಳಿ ಇದ್ದ ನೂರಾರು ಮುಖಂಡರುಗಳು ಕಾಂಗ್ರೆಸ್ಗೆ ಬಂದು ಸೇರಿದ್ದಾರೆ. ಬೇಕಾದರೆ ವಾಪಸ್ ಕರೆಸಿಕೊಳ್ಳಲಿ, ಹೊಸಕೋಟೆ ಆಟ ಮಾಲೂರಲ್ಲಿ ನಡೆಸಲು ಬರಬೇಡಿ. ಬ್ಲಾಕ್ ಮೇಲ್ ಮಾಡಿ ಆಸ್ತಿ ಮಾಡಿಲ್ಲ. ಇತಿಹಾಸ ಏನು ಎಂಬುದು ಕ್ಷೇತ್ರದ ಜತೆಗೆ ಗೊತ್ತಿಗೆ ಕೇಳಿ ತಿಳಿದುಕೊಳ್ಳಲಿ ಎಂದು ನಂಜೇಗೌಡ ಸಲಹೆ ನೀಡಿದರು.
* ಮೋಸ ಮಾಡಿದ್ದು ಮಂಜುನಾಥ್ಗೌಡ
ಗುರುಗಳಾದ ಎ.ನಾಗರಾಜ್, ಸಚಿವ ಕೆ.ಎಚ್.ಮುನಿಯಪ್ಪಗೆ ಯಾವುದೇ ಮೋಸ ಮಾಡಿಲ್ಲ. ಅವರು ಮಾಡಿದ ಆರೋಪಗಳು ಸುಳ್ಳು. ಲೋಕಸಭೆ ಚುನಾವಣೆ ವೇಳೆ ಕೋಲಾರ ಕೇಶವ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮೋಸ ಮಾಡಿದ್ದು ಮಂಜುನಾಥಗೌಡ. ನನಗೂ ಸಹ ಹೆಚ್ಚು ತೊಂದರೆ ನೀಡಿದ್ದಾರೆ. ಆದರೂ ಸಹ ಭಯಪಡುವುದಿಲ್ಲ. ಕೆಣಕಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ನಂಜೇಗೌಡ ಎಚ್ಚರಿಕೆ ನೀಡಿದರು.
ನಗರಸಭೆ ಅಧ್ಯಕ್ಷ ವಿಜಯಲಕ್ಷಿ$್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಿಂಗಪುರ ಕೃಷ್ಣಪ್ಪ, ರಾಮಮೂರ್ತಿ, ಮಾಜಿ ಅಧ್ಯಕ್ಷ ವಿಜಯ ನರಸಿಂಹ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ.ಆರ್.ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುನೀಲ್ ನಂಜೇಗೌಡ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ನಯೀಮ್ ಉಲ್ಲಾ, ಜಿಲ್ಲಾ ಹಾಲೂ ಒಕ್ಕೂಟದ ನಿರ್ದೇಶಕ ಶ್ರೀನಿವಾಸ್, ಮುಖಂಡರಾದ ಎಂ.ವಿ.ಸೋಮಶೇಖರ್, ಕ್ಷೇತ್ರಹಳ್ಳಿ ವೆಂಕಟೇಶ್ ಗೌಡ, ರಮೇಶ್ ಗೌಡ, ಆಂಜಿನಪ್ಪ ಇದ್ದರು.