ಫೋನ್ ಕಾಲ್ ವಂಚನೆ: ವಾಟ್ಸ್​ಆ್ಯಪ್​ ಬಳಕೆದಾರರೇ ಹುಷಾರು

WhatsApp (1)
Published on
ವಾಟ್ಸ್​ಆ್ಯಪ್​​ನಲ್ಲಿ ಅಪರಿಚಿತ ನಂಬರ್​ಗಳಿಂದ ಕರೆಮಾಡಿ, ವಂಚನೆಯ ಜಾಲಕ್ಕೆ ಬೀಳಿಸಲು ಯತ್ನಿಸುವ ಘಟನೆಗಳು ಹೆಚ್ಚಾಗಿದೆ. ಕರೆ ಸ್ವೀಕರಿಸಿದವರಿಗೆ ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ವಂಚಿಸುವುದು ಇವರ ಪ್ಲಾನ್. ಹೀಗಾಗಿ, ಅಪರಿಚಿತ ಸಂಖ್ಯೆಗಳಿಂದ ಬರುವ ಇಂಟರ್​ನ್ಯಾಷನಲ್ ವಾಟ್ಸ್​ಆಪ್ ಕಾಲ್​ಗಳನ್ನು ಸ್ವೀಕರಿಸದೇ ಇರುವುದು ಉತ್ತಮ.

ಕಳೆದ ಕೆಲವು ವಾರಗಳಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಅಂತಾರಾಷ್ಟ್ರೀಯ ಕರೆಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದರಲ್ಲಿ ಆಡಿಯೋ ಮತ್ತು ವಿಡಿಯೋ ಕರೆಗಳು ಸೇರಿವೆ. ಈ ಸಂಗತಿಯನ್ನು ಸರ್ಕಾರವೂ ಗುರುತಿಸಿದೆ.

ವಾಟ್ಸ್​ಆಪ್ ಕೂಡ ತನ್ನ ಕಡೆಯಿಂದ ಇಂತಹ ಘಟನೆಗಳನ್ನು ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್- ಎಐ) ಮತ್ತು ಯಂತ್ರ ಕಲಿಕೆ (ಎಂಎಲ್- ಮಶೀನ್ ಲರ್ನಿಂಗ್) ಸಿಸ್ಟಮ್ಳನ್ನು ಹೆಚ್ಚಿಸುವುದಾಗಿ ಹೇಳಿದೆ.

ಸರ್ಕಾರ ಮತ್ತು ವಾಟ್ಸ್​ಆಪ್ ತಮ್ಮ ಪಾಲಿನ ಕೆಲಸವನ್ನು ಮಾಡುತ್ತಿದ್ದರೂ, ವಾಟ್ಸ್​ಆಪ್ ಬಳಕೆದಾರರು ಸಹ ಎಚ್ಚರವಾಗಿರುವುದು ಮುಖ್ಯ. ಇಂತಹ ವಂಚನೆಗಳಿಗೆ ಬಲಿಯಾಗುವುದನ್ನು ತಪ್ಪಿಸಲು ಕೆಲವು ಸರಳ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

ತಾವು ಬಹುರಾಷ್ಟ್ರೀಯ ಕಂಪನಿಗಳ (ಎಂಎನ್​ಸಿ) ಮಾನವ ಸಂಪನ್ಮೂಲ (ಎಚ್​ಆರ್) ವಿಭಾಗದ ಸಿಬ್ಬಂದಿ ಎಂದು ಸಾಮಾನ್ಯವಾಗಿ ಈ ವಂಚಕರು ಹೇಳಿಕೊಳ್ಳುತ್ತಾರೆ. ಮನೆಯಿಂದಲೇ ಸುಲಭವಾಗಿ ಕೆಲಸ ಮಾಡುವ ಪ್ರಸ್ತಾಪ ಮುಂದಿಟ್ಟು, ಇದರಿಂದ ಕೂತಲ್ಲೇ ಸಾಕಷ್ಟು ಹಣ ಗಳಿಸಬಹುದೆಂಬ ಆಮಿಷಗಳನ್ನು ಒಡ್ಡುತ್ತಾರೆ.

ಮನವೊಲಿಕೆ-ಪ್ರಲೋಭನೆ: ಈ ವಂಚಕರು ಮಿಕಗಳನ್ನು ಬಲೆಗೆ ಹಾಕಿಕೊಳ್ಳುವ ನಿಟ್ಟಿನಲ್ಲಿ ಮನವೊಲಿಸುವ ಕೆಲಸವನ್ನೂ ಮಾಡುತ್ತಾರೆ. ಅಷ್ಟಕ್ಕೂ ಮೋಸವೇ ಉದ್ದೇಶವಾದುದರಿಂದ ಇದರಲ್ಲೆಲ್ಲ ಪಳಗಿರುತ್ತಾರೆ; ಸಿದ್ಧತೆಯನ್ನೂ ಮಾಡಿಕೊಂಡಿರುತ್ತಾರೆ. ಎಲ್ಲ ವಿಷಯ ಅರಿತವರಂತೆ ತೋರುತ್ತಾರೆ. ಇವರು ಸಾಮಾನ್ಯವಾಗಿ ಸರಳವಾದ, ಸುಲಭವಾದ ಕೆಲಸ ಮಾಡಿಸಿಕೊಂಡು ಆಕರ್ಷಕ ಹಾಗೂ ಪ್ರಲೋಭನೆಗೆ ಒಳಗಾಗುವಂತಹ ಉಡುಗೊರೆಗಳನ್ನು ನೀಡುತ್ತಾರೆ. ಇವುಗಳಲ್ಲಿ ಯೂಟ್ಯೂಬ್ ವಿಡಿಯೋಗಳು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್​ಗಳನ್ನು ಇಷ್ಟಪಡುವ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುವಂತಹ ಸರಳವಾದ ವಿಷಯಗಳು ಸೇರಿರುತ್ತವೆ. ಈ ವಂಚಕರು ಆರಂಭದಲ್ಲಿ ಇಂತಹ ಕೆಲಸಗಳನ್ನು ಮಾಡಿದ್ದಕ್ಕಾಗಿ ಬಲಿಪಶುಗಳಿಗೆ ಹಣ ಪಾವತಿ ಮಾಡುವ ಮೂಲಕ ನಂಬಿಕೆಯನ್ನು ಗಳಿಸಿಕೊಳ್ಳಲು ಮುಂದಾಗುತ್ತಾರೆ.

ಮುಂದಿನ ಹಂತವು ಸರಣಿ ಕೆಲಸಗಳನ್ನು ನೀಡಿ ಬಲೆ ಹಾಕುವುದಾಗಿರುತ್ತದೆ. ಬಳಕೆದಾರರಿಗೆ ಒಂದೆರಡು ಬಾರಿ ಪಾವತಿಸಿದ ನಂತರ, ‘ಹೆಚ್ಚಿನ ಕಾರ್ಯಗಳನ್ನು ಪೂರ್ಣಗೊಳಿಸಲು ಮತ್ತು ಹೆಚ್ಚು ಹಣವನ್ನು ಗಳಿಸಲು ಬಯಸುವಿರಾ’ ಎಂದು ಕೇಳುತ್ತಾರೆ. ಬಳಕೆದಾರರು ಹೌದು ಎಂದು ಹೇಳಿದರೆ, ಅವರಿಗೆ ಒಂದಿಷ್ಟು ಹೆಚ್ಚಿನ ಕೆಲಸಗಳನ್ನು ನೀಡುತ್ತಾರೆ. ಇವುಗಳಲ್ಲಿ ಒಂದೆರಡು ಸಾಮಾನ್ಯವಾಗಿ ಮೊದಲ ಕಾರ್ಯಗಳಂತೆ ಸರಳವಾಗಿರುತ್ತವೆ. ಆದರೆ, ನಂತರ ಬಳಕೆದಾರರಿಗೆ ನೀಡುವ ಕೆಲಸವು ಎರಡು ಅಥವಾ ಮೂರು ಪಟ್ಟು ಆದಾಯ ಪಡೆಯುವ ಭರವಸೆಯೊಂದಿಗೆ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವುದನ್ನು ಒಳಗೊಂಡಿರುತ್ತದೆ. ಇಲ್ಲಿಂದಲೇ ಹಗರಣದ ಎಳೆ ಪ್ರಾರಂಭವಾಗುತ್ತದೆ. ಸುಲಭ ಕೆಲಸ ಮಾಡಿಸಿಕೊಂಡು ಒಂದಿಷ್ಟು ಹಣ ಪಾವತಿಸಿದ ನಂತರ, ಬಳಕೆದಾರರಿಂದಲೇ ಶುಲ್ಕ ಹಾಗೂ ಇತರ ರೀತಿಯ ನೆಪಗಳನ್ನು ಮುಂದಿಟ್ಟು ಹೆಚ್ಚಿನ ಹಣವನ್ನು ತಾವೇ ಪಾವತಿಸಿಕೊಳ್ಳುತ್ತಾರೆ. ಹೀಗೆ ಪದೇಪದೇ ಮಾಡಿ ಸಾಕಷ್ಟು ಹಣವನ್ನು ಕಿತ್ತುಕೊಳ್ಳುತ್ತಾರೆ.

ಕರೆ ಸ್ವೀಕರಿಸಬೇಡಿ

ವಾಟ್ಸ್​ಆ್ಯಪ್​​ನಲ್ಲಿ ಅಪರಿಚಿತ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸಲು ಹೋಗಬೇಡಿ. ಇಂತಹ ಸಂಖ್ಯೆಗಳಿಂದ ಬರುವ ಸಂದೇಶಗಳು ಅಥವಾ ಕರೆಗಳಿಗೆ ಪ್ರತಿಕ್ರಿಯಿಸದಿರುವುದು ವಂಚನೆ ಅಥವಾ ಮೋಸ ಹೋಗುವುದನ್ನು ತಡೆಯಲು ಇರುವ ಉತ್ತಮ ಮಾರ್ಗ. ನಿಮಗೆ ಇಂತಹ ಕರೆಗಳು ಬಂದರೆ ಅವುಗಳನ್ನು ತಕ್ಷಣವೇ ಬ್ಲಾಕ್ ಮಾಡಿ. ಮಿಸ್ಡ್ ಕಾಲ್​ಗಳಿದ್ದರೆ ಮರಳಿ ಕರೆ ಮಾಡಲು ಹೋಗಬೇಡಿ.

ನಗ್ನ ವಿಡಿಯೋ ಕರೆ ಮಾಡಿ ಬ್ಲ್ಯಾಕ್​ಮೇಲ್

ಮತ್ತೊಂದು ಸಾಮಾನ್ಯ ವಾಟ್ಸ್​ಆಪ್ ಅಪಾಯ ಎಂದರೆ,‘ನಗ್ನ ವೀಡಿಯೊ ಕರೆ.’ ಇದು ಕೂಡ ಈ ಅಂತಾರಾಷ್ಟ್ರೀಯ ಕರೆ ಹಗರಣಗಳ ಭಾಗವಾಗಿದೆ. ಇದರಲ್ಲಿ ಏನಾಗುತ್ತದೆ ಎಂದರೆ ವಂಚಕರು ಅಪರಿಚಿತರಿಗೆ ವಾಟ್ಸ್​ಆಪ್ ವಿಡಿಯೋ ಕರೆ ಮಾಡುತ್ತಾರೆ. ಪುರುಷ ಫೋನ್ ಎತ್ತಿದರೆ, ಇನ್ನೊಂದು ಬದಿಯಲ್ಲಿ ನಗ್ನ ಮಹಿಳೆ ಮತ್ತು ಮಹಿಳೆ ಕರೆ ತೆಗೆದುಕೊಂಡರೆ ಇನ್ನೊಂದು ಬದಿಯಲ್ಲಿ ನಗ್ನ ಪುರುಷ ಕಾಣಿಸಿಕೊಳ್ಳುತ್ತಾನೆ. ಕರೆ ಸ್ವೀಕರಿಸಿದವರನ್ನು ಬ್ಲಾ್ಯಕ್​ವೆುೕಲ್ ಮಾಡಿ ಹಣ ಕೇಳುವುದು ಇದರ ಉದ್ದೇಶವಾಗಿರುತ್ತದೆ. ವಂಚಕರು ಈ ವಿಡಿಯೊಗಳನ್ನು ರೆಕಾರ್ಡ್ ಮಾಡುತ್ತಾರೆ. ನಂತರ ಕರೆ ಸ್ವೀಕರಿಸಿದವರನ್ನು ಬ್ಲಾ್ಯಕ್​ವೆುೕಲ್ ಮಾಡಲು ಮುಂದಾಗುತ್ತಾರೆ. ಮರ್ಯಾದೆ ತೆಗೆಯುವ ಬೆದರಿಕೆ ಒಡ್ಡಿ ಹಣ ಕೀಳಲು ತೊಡಗುತ್ತಾರೆ.

ಭಾರತದಲ್ಲಿ 48.7 ಕೋಟಿ ಬಳಕೆದಾರರು: ಇಡೀ ಜಗತ್ತಿನಲ್ಲಿಯೇ ಅತಿಹೆಚ್ಚು ವಾಟ್ಸ್​ಆಪ್ ಬಳಕೆದಾರರನ್ನು ಹೊಂದಿರುವ ದೇಶ ಭಾರತ. ಭಾರತದಲ್ಲಿ 48.7 ಕೋಟಿ ವಾಟ್ಸ್​ಆಪ್ ಬಳಕೆದಾರರಿದ್ದಾರೆ. ಈ ಸಂಖ್ಯೆಯು ಪ್ರತಿ ವರ್ಷ ಶೇಕಡಾ 16.6ರಷ್ಟು ದರದಲ್ಲಿ ಏರುತ್ತಿದೆ. ಈ ವಿಷಯದಲ್ಲಿ ಭಾರತದ ನಂತರದ ಸ್ಥಾನದಲ್ಲಿರುವುದು ಬ್ರೆಜಿಲ್. ಈ ದೇಶದಲ್ಲಿ 11.85 ಕೋಟಿ ಬಳಕೆದಾರರಿದ್ದಾರೆ.

ಮೆಟಾಗೆ ನೋಟಿಸ್: ವಾಟ್ಸ್​ಆಪ್ ಅಂತಾರಾಷ್ಟ್ರೀಯ ಕರೆಗಳ ಹಗರಣ ಭಾರತದಾದ್ಯಂತ ಸಾವಿರಾರು ಬಳಕೆದಾರರ ಮೇಲೆ ಪರಿಣಾಮ ಬೀರಿದೆ. ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್​ಫಾಮ್ರ್ ವಾಟ್ಸ್​ಆಪ್​ಗೆ ನೋಟಿಸ್ ಕಳುಹಿಸಿದ್ದು, ಬಳಕೆದಾರರ ಸುರಕ್ಷತೆಯನ್ನು ಖಾತ್ರಿಪಡಿಸುವ ಜವಾಬ್ದಾರಿ ಡಿಜಿಟಲ್ ಪ್ಲಾಟ್​ಫಾಮರ್್​ಗಳ ಮೇಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ದುರ್ಬಳಕೆ ಅಥವಾ ಬಳಕೆದಾರರ ಗೌಪ್ಯತೆಯ ಉಲ್ಲಂಘನೆಯ ಆರೋಪ ಇದ್ದಲ್ಲಿ ಡಿಜಿಟಲ್ ಪ್ಲಾಟ್​ಫಾಮರ್್​ಗಳು ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

ನಾಲ್ಕು ಹೊಸ ಫೀಚರ್

ಸಾಮಾಜಿಕ ಜಾಲತಾಣ ವಾಟ್ಸ್​ಆಪ್ ನಾಲ್ಕು ಹೊಸ ಫೀಚರ್​ಗಳನ್ನು ಘೋಷಿಸಿದೆ. ಗೌಪ್ಯ ಎನಿಸಿದ ನಿರ್ದಿಷ್ಟ ಚಾಟ್​ಗಳನ್ನು ಅನ್ಯರಿಗೆ ಕಾಣದಂತೆ ಇಡುವ ಅವಕಾಶ ಈ ಪೈಕಿ ಒಂದಾಗಿದೆ. ಈ ಚಾಟ್ ತೆರೆದುಕೊಳ್ಳದಂತೆ ಪಾಸ್​ವರ್ಡ್ ಅಥವಾ ಬೆರಳಚ್ಚಿನ ಸುರಕ್ಷಿತವಾಗಿ ಇರಿಸಬಹುದು. ಅಪರಿಚಿತರು ಮಾಡುವ ಕಾಲ್​ಗಳನ್ನು ನಿಶ್ಶಬ್ದ (ಸೈಲೆನ್ಸ್)ವಾಗಿ ಇರಿಸುವುದು, ಗ್ರೂಪ್​ನ ಸಂದೇಶಗಳನ್ನು ಹೈಲೈಟ್ ಮಾಡುವ ಅವಕಾಶವನ್ನು ಅಡ್ಮಿನ್​ಗಳಿಗೆ ನೀಡಲಾಗಿದೆ. ಜತೆಗೆ ಕಮ್ಯುನಿಟಿ ಗ್ರೂಪ್​ಗಳಿಗೆ ನೇರವಾಗಿ ಪ್ರವೇಶ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಯಾವುದೇ ಸಂದೇಶ ಕಳುಹಿಸಿದ 15 ನಿಮಿಷದಲ್ಲಿ ಅದನ್ನು ಎಡಿಟ್ ಮಾಡುವ ಅಂಶ ಹೊಸ ಫೀಚರ್​ನಲ್ಲಿ ಸೇರಿದೆ ಎಂದು ವಾಟ್ಸ್​ಆಪ್​ನ ಮಾತೃ ಸಂಸ್ಥೆಯಾದ ಮೆಟಾ ತಿಳಿಸಿದೆ.

ವಿದೇಶಗಳ ನಂಬರ್

ವಾಟ್ಸ್​ಆಪ್ ಬಳಕೆದಾರರಿಗೆ ಬರುತ್ತಿರುವ ಈ ಅಂತಾರಾಷ್ಟ್ರೀಯ ವಂಚನೆ ಕರೆಗಳ ಹಾಗೂ ಸಂದೇಶಗಳ ಫೋನ್ ನಂಬರ್​ಗಳು+84, +60, +62, +251, +254 ಇತ್ಯಾದಿ ಸಂಖ್ಯೆಗಳಿಂದ ಪ್ರಾರಂಭವಾಗುತ್ತವೆ. ಈ ಸಂಖ್ಯೆಗಳು ಆಯಾ ದೇಶದ ಸಂಕೇತಗಳಾಗಿವೆ.

+60 ಮಲೇಷ್ಯಾ

+62 ಇಂಡೋನೇಷ್ಯಾ

+84 ವಿಯೆಟ್ನಾಂ

+254 ಕೀನ್ಯಾ

+251 ಇಥಿಯೋಪಿಯಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net