ಬಿಬಿಎಂಪಿ ಏಳು ಹೋಳು! ಸಪ್ತ ಪಾಲಿಕೆಗಳಾಗಿ ಬೆಂಗಳೂರು ವಿಭಜನೆ ಶಿಫಾರಸು

ವಿಜಯವಾಣಿ (5)
Published on
  • ವಿಧಾನ ಮಂಡಲ ಬಜೆಟ್ ಅಧಿವೇಶನದಲ್ಲಿ ಮಂಡನೆ ಸಾಧ್ಯತೆ
  • ತಕ್ಷಣ ಚುನಾವಣೆಗಾಗಿ ಸುಪ್ರೀಂ ಕದ ತಟ್ಟಿದ ಪ್ರತಿಪಕ್ಷ ಬಿಜೆಪಿ

ಬೆಂಗಳೂರು: ರಾಜಧಾನಿಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಮೇಲ್ದರ್ಜೆಗೇರಿಸಿ, ಆಡಳಿತಾತ್ಮಕ ಅನುಕೂಲಕ್ಕೆ ಏಳು ಪಾಲಿಕೆಗಳಾಗಿ ವಿಂಗಡಿಸುವ ಸರ್ಕಾರದ ಮಹತ್ವಾಕಾಂಕ್ಷೆಗೆ ರೆಕ್ಕೆ ಮೂಡಿದೆ. ಈ ಸಂಬಂಧ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಅಂತಿಮ ವರದಿಯನ್ನು ಸಲ್ಲಿಸಿದ್ದು, ಮುಂಬರುವ ಬಜೆಟ್ ಅಧಿವೇಶನದಲ್ಲಿ ಮಸೂದೆಗೆ ಅನುಮೋದನೆ ಪಡೆಯಲು ಸರ್ಕಾರ ಉತ್ಸುಕವಾಗಿದೆ. ಆದರೆ, ಬೆಂಗಳೂರು ವಿಭಜನೆಯನ್ನು ವಿರೋಧಿಸುತ್ತಿರುವ ಪ್ರತಿಪಕ್ಷ ಬಿಜೆಪಿ, ಬಿಬಿಎಂಪಿಗೆ ಕೂಡಲೇ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಮೊರೆ ಹೋಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಸಂಬಂಧ ವಿಧಾನಸಭೆಯಲ್ಲಿ ಮಂಡಿಸಿದ್ದ ಮಸೂದೆಗೆ ಪಕ್ಷಾತೀತವಾಗಿ ಶಾಸ ಕರು ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಜಂಟಿ ಪರಿಶೀಲನಾ ಸಮಿತಿಯ ಪರಾಮರ್ಶೆಗೆ ಒಪ್ಪಿ ಸಲಾಗಿತ್ತು. ಇದೀಗ ಸಮಿತಿ ತನ್ನ ಜವಾಬ್ದಾರಿ ಪೂರೈಸಿ ಸೋಮವಾರ ವಿಧಾನಸೌಧದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್​ಗೆ ವರದಿ ಸಲ್ಲಿಸಿತು. ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ವರದಿ ಸಲ್ಲಿಸಿ, ಆಡಳಿತಾತ್ಮಕವಾಗಿ ಬಿಬಿಎಂಪಿ ಪುನಾರಚನೆ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ಶಿಫಾರಸು ಮಾಡಲಾಗಿದೆ ಎಂದರು.

ಜನರ ಆಶೋತ್ತರಗಳಿಗೆ ಸ್ಪಂದಿಸಲು, ಉತ್ತಮ ಆಡಳಿತ ನೀಡುವಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವಿಫಲವಾಗಿದೆ. ಮಹಾನಗರ ನಿವಾಸಿಗಳು, ಭಾಗಿದಾರರ ಅಪೇಕ್ಷೆಯಂತೆ ಬಿಬಿಎಂಪಿ ಏಳು ಭಾಗಗಳಾಗಿ ವಿಂಗಡಣೆ ಸೂಕ್ತವೆಂದು ಪ್ರಸ್ತಾವಿತ ಮಸೂದೆಗೆ ಜಂಟಿ ಪರಿಶೀಲನಾ ಸಮಿತಿ ವರದಿ ಒತ್ತಾಸೆ ನೀಡಿದೆ. ಯೋಜಿತ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ. ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷ, ಬೆಂಗಳೂರು ನಗರಾಭಿವೃದ್ಧಿ ಸಚಿವ ಉಪಾಧ್ಯಕ್ಷರಾಗಿರುತ್ತಾರೆ. ಬಿಬಿಎಂಪಿಯನ್ನು ವಿಂಗಡಿಸಿ ಹಂತ ಹಂತವಾಗಿ ಗರಿಷ್ಠ ಏಳು ಪಾಲಿಕೆಗಳ ರಚನೆ. ಪ್ರತಿಯೊಂದು ಪಾಲಿಕೆಗೂ ಸ್ವಾಯತ್ತ ಅಧಿಕಾರ ನೀಡುವಂತೆಯೂ ಈ ವರದಿ ತಿಳಿಸಿದೆ.

ಮುಂದೆ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಈ ವರದಿ ಮಂಡನೆಯಾಗುವ ಸಾಧ್ಯತೆ ಇದೆ. ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯ ವಿಧೇಯಕ ಶಾಸನ ಸಭೆಯಿಂದ ಅನುಮೋದನೆ ಪಡೆದು ರಾಜ್ಯಪಾಲರ ಸಹಿಗೆ ಕಳಿಸಲಾಗುತ್ತದೆ.

ಮುಖ್ಯಾಂಶಗಳು

  • ಬಿಬಿಎಂಪಿ ವಿಭಜಿಸಿ ಹಂತ ಹಂತ ವಾಗಿ ಗರಿಷ್ಠ 7 ಪಾಲಿಕೆಗಳ ರಚನೆ
  • ಪ್ರತಿಯೊಂದು ಪಾಲಿಕೆಯ ವ್ಯಾಪ್ತಿ ಯಲ್ಲಿ ಗರಿಷ್ಠ 125 ವಾರ್ಡ್ ಮಿತಿ
  • ವಾರ್ಡ್ ಮರು ವಿಂಗಡಣೆಗೆ ಮಾನದಂಡ, ಗಡಿ ಗುರುತಿಸಲು ಸಮಿತಿ ರಚನೆ

ಗ್ರೇಟರ್ ಬೆಂಗಳೂರು ಮಸೂದೆ ಸಂಬಂಧಿತ ಜಂಟಿ ಪರಿಶೀಲನಾ ಸಮಿತಿ ವರದಿಯನ್ನು ಸ್ವೀಕರಿಸಿರುವೆ. ಮುಂದಿರುವ ಅಧಿವೇಶನದಲ್ಲಿ ಈ ವರದಿ ಮಂಡನೆ ಬಗ್ಗೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ರ್ಚಚಿಸಿ ತೀರ್ವನಿಸಲಾಗುವುದು. | ಯು.ಟಿ.ಖಾದರ್ ಫರೀದ್ ವಿಧಾನಸಭಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net