

ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ಸಿದ್ಧತೆಗೆ ಮುಂದಾಗಿರುವ ಕಾಂಗ್ರೆಸ್, ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಸಭಡೆ ನಡೆಸಿತು.
ಒಂದು ತಿಂಗಳ ಅವಧಿಯೊಳಗಾಗಿ ಖಾಲಿ ಇರುವ ಪದಾಧಿಕಾರಿಗಳ ಹುದ್ದೆ ತುಂಬಲು, ನಿಷ್ಕ್ರಿಯರಾಗಿರುವ ಪದಾಧಿಕಾರಿಗಳ ಜಾಗಕ್ಕೆ ಬೇರೆಯವರನ್ನು ನೇಮಿಸುವಂತೆ ಸಭೆಯಲ್ಲಿ ಡಿಕೆಶಿ ಅವರು ಸೂಚನೆ ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಬೆಂಗಳೂರು ನಗರದ ಬ್ಲಾಕ್ ನಾಯಕರ ಜತೆ ಪಾಲಿಕೆ ಚುನಾವಣೆ ಸಿದ್ಧತೆ ಬಗ್ಗೆ ಸಭೆ ಮಾಡಿದ್ದೇವೆ. ಪಾಲಿಕೆ ಚುನಾವಣೆ ಶೀಘ್ರವೇ ಪ್ರಕಟವಾಗಲಿದ್ದು, ಅಷ್ಟರ ಹೊತ್ತಿಗೆ ಪಕ್ಷವನ್ನು ಸಜ್ಜುಗೊಳಿಸಬೇಕು. ಈ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಲಾಗಿದೆ ಎಂದರು.
ಬೆಂಗಳೂರು ನಗರದಲ್ಲಿ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ನಾವು ಸೋತಿರಬಹುದು, ಆದರೆ ಪಾಲಿಕೆ ಚುನಾವಣೆಯಲ್ಲಿ ನಾವು ಚೇತರಿಸಿಕೊಳ್ಳುವ ವಿಶ್ವಾಸ ನನಗಿದೆ ಎಂದರು.
ಹಸ್ತಕ್ಷೇಪ ಮಾಡಿಲ್ಲ:
ಯಡಿಯೂರಪ್ಪ ಅವರ ಪ್ರಕರಣದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಇದು ಕಾನೂನಿನ ಪ್ರಕ್ರಿಯೆ. ಬಿಜೆಪಿ ನಾಯಕರು ನಮ್ಮ ಹೆಸರು ಯಾಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದಿಲ್ಲ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಕರಣದ ಬಗ್ಗೆ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು ಈ ವಿಚಾರವಾಗಿ ನಾವು ಮಾತನಾಡುವುದು ಸರಿಯಲ್ಲ ಎಂದರು.
ಆರ್.ಅಶೋಕ್ ಅವರ ಟೀಕೆ ಬಗ್ಗೆ ಪ್ರತಿಕ್ರಿಯಿಸಿ ಅವರು ಒಬ್ಬ ಸುಳ್ಳುಗಾರ ಹಾಗೂ ಜೋಕರ್. ಅವರು ಯಾವುದಾದರೂ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ. ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ಅನುಭವವನ್ನು ಈಗ ಹೇಳುತ್ತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಈಗ ನೀರಿನ ಸಮಸ್ಯೆ ಇಲ್ಲ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲಾಗಿದೆ ಎಂದರು.
ನೀರಿನ ಪರೀಕ್ಷೆ ಕಡ್ಡಾಯ:
ಕಲುಷಿತ ನೀರಿನ ಬಗ್ಗೆ ಕೇಳಿದಾಗ ಪ್ರತಿದಿನ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಪರೀಕ್ಷೆ ನಡೆಸಿ ಜನರಿಗೆ ನೀಡಲಾಗುತ್ತಿದೆ. ಕಾವೇರಿ, ಬೋರ್ ವೆಲ್ ನೀರನ್ನು ಸಹ ಪರೀಕ್ಷೆಗೆ ಒಳಪಡಿಸುತ್ತಿದ್ದು. ದಿನದ ವರದಿ ನನಗೂ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಕೆಶಿ ತಿಳಿಸಿದರು.
ಬಿಬಿಎಂಪಿ ವಾರ್ಡ್:
ಬಿಬಿಎಂಪಿ ವಿಭಾಗಿಸುವ ಬಗ್ಗೆ ಬಿಜೆಪಿ ವಿರೋಧಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ ಈ ವಿಚಾರವಾಗಿ ಸಮಿತಿಯ ವರದಿ ಇದೆ. ಸದ್ಯಕ್ಕೆ 225 ವಾರ್ಡ್‌ಗಳನ್ನು ಮಾಡಲಾಗಿದ್ದು, ಚುನಾವಣೆ ನಂತರವೂ ಬಿಬಿಎಂಪಿ ವಿಭಜನೆ ಮಾಡಬಹುದು. ಈಗಲೇ ಮಾಡಬೇಕೆಂದೇನಿಲ್ಲ ಎಂದರು.
ಬಿಟ್ ಕಾಯಿನ್ ಹಗರಣ ಸಂಬಂಧ ನಲಪಾಡ್ ಅವರನ್ನು ವಿಚಾರಣೆಗೆ ಒಳಪಡಿಸಿರುವ ಬಗ್ಗೆ ಕೇಳಿದಾಗ, ಆ ವಿಚಾರವಾಗಿ ನನಗೆ ಮಾಹಿತಿ ಇಲ್ಲ ಎಂದರು.
ಜಿಲ್ಲಾ ಪಂಚಾಯ್ತಿ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ನಾವು ಚುನಾವಣೆ ನಡೆಸಲೇಬೇಕು. ಹೀಗಾಗಿ ನಾವು ಎಲ್ಲಾ ಚುನಾವಣೆ ಮಾಡಲು ಬದ್ಧವಾಗಿದ್ದೇವೆ ಎಂದರು.