

ಬೆಂಗಳೂರು: "ಬಿಬಿಎಂಪಿ ಗುತ್ತಿಗೆದಾರರ ಬಳಿ ಡಿಸಿಎಂ ಡಿಕೆ ಶಿವಕುಮಾರ್ ಹಣಕ್ಕೆ ಬೇಡಿಕೆಯಿಡುತ್ತಿದ್ದಾರೆ. ಹಣ ಕೇಳಿಲ್ಲ ಎಂದರೆ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ'' ಎಂದು ಬಿಬಿಎಂಪಿ ಗುತ್ತಿಗೆದಾರರು ಸವಾಲು ಹಾಕಿದ್ದಾರೆ.
ಸೋಮವಾರ (ಆ.07) ಬಿಬಿಎಂಪಿ ಗುತ್ತಿಗೆದಾರರ ಸಂಘ ಸುದ್ದಿಗೋಷ್ಠಿ ನಡೆಸಿತ್ತು. ಈ ವೇಳೆ ಗುತ್ತಿಗೆದಾರರು ಡಿಕೆ ಶಿವಕುಮಾರ್ ವಿರುದ್ಧ ಮಾತನಾಡಿರಲಿಲ್ಲ. ಆದರೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜೊತೆಗೆ ವಾಗ್ವಾದ ನಡೆಸಲಾಗಿತ್ತು. ಆಗ ಗುತ್ತಿಗೆದಾರ ಹೇಮಂತ್ ಎಂಬುವವರು ಬಾಕಿ ಬಿಲ್ ಪಾವತಿಗೆ ಹಣ ಕೇಳಿದ್ದಾರೆ. ಹಣ ಕೇಳಿಲ್ಲ ಎನ್ನುವುದಾದರೆ ಅವರು ನಂಬುವ ಅಜ್ಜಯ್ಯನ ಮಠಕ್ಕೆ ಬಂದು ಪ್ರಮಾಣ ಮಾಡಲಿ. ಹಣ ಕೇಳಿದ್ದಾರೆ ಎಂದು ನಾನು ಪ್ರಮಾಣ ಮಾಡುತ್ತೇನೆ ಎಂದು ಡಿಕೆಶಿ ವಿರುದ್ಧ ಮಾತನಾಡಿದರು.
"ನ್ಯಾಯಯುತವಾಗಿ ಕೆಲಸ ಮಾಡಿದ್ದೇವೆ. ಕಮಿಷನರ್ ಮೇಲೆ ಯಾಕೆ ಆರೋಪ ಮಾಡ್ತಿರಾ, ಇಷ್ಟು ದಿನ ಅವರೇ ಅಲ್ವಾ ಬಿಲ್ ಪಾವತಿ ಮಾಡ್ತಿರೋದು, ಈಗ ಯಾಕೆ ಅವರು ಬಿಲ್ ತಡೆಯುತ್ತಾರೆ, ಅವರಿಗೆ ಬಿಲ್ ತಡೆ ಹಿಡಿಯುವಂತೆ ಹೇಳಿರೋದು ಯಾರು ಅವರ ಬಗ್ಗೆ ಮಾತನಾಡಿ. ಈಗ ಸಮಿತಿ ಮಾಡಿದ್ದಾರೆ, ಬಿಲ್ ಸ್ಯಾಂಕ್ಷನ್ ಮಾಡಿಸಿಕೊಳ್ಳುತ್ತೀರಾ?, ನಾವೇನು ಕಳ್ಳತನ ಮಾಡಿಲ್ಲ, ಕೋರ್ಟ್ ಗೆ ಹೋಗೋಣ. ನಾನು ಕೂಡ ಕಾಂಗ್ರೆಸ್ ಗೆ ಓಟ್ ಹಾಕಿದವನು, 94 ಕೋಟಿ ಬಿಲ್ ಬಾಕಿ ಬಿಲ್ ಬರಬೇಕಿದೆ'' ಎಂದು ಹೇಮಂತ್ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಮಾತನಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ.