

ಬೆಂಗಳೂರು: ಕನ್ನಡದ ಬಿಗ್ಬಾಸ್ ಸೀಸನ್ 11ರಲ್ಲಿ (BBKS11) ನೋಟದ ಘರ್ಷಣೆ, ಮಾತಿನ ಸಂಘರ್ಷಣೆಯೇ ಜೋರಾಗಿ ಸದ್ದು ಮಾಡುತ್ತಿದೆ. ಮೊದಲ ದಿನದಿಂದಲೂ ಬಿಗ್ ಸ್ಪರ್ಧಿಗಳ ನಡುವಿನ ಪೈಪೋಟಿ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ ವಿನಃ ಆಟದ ಗತ್ತು, ಗಮ್ಮತ್ತು ಕಾಣಿಸುತ್ತಿಲ್ಲ. ಈಗಾಗಲೇ ಮನೆಯಿಂದ ಇಬ್ಬರು ಘಟಾನುಘಟಿ ಸ್ಪರ್ಧಿಗಳು ಶಾಕಿಂಗ್ ರೀತಿಯಲ್ಲಿ ಎಲಿಮಿನೇಟ್ ಆಗಿ ಹೊರನಡೆದಿದ್ದು, ಗಾಯಕ ಹನುಮಂತು ಎಂಟ್ರಿಯೊಂದಿಗೆ ಮನೆಯಲ್ಲಿ ಮತ್ತೊಂದು ಹೊಸ ಕಳೆ ಆರಂಭಗೊಂಡಿದೆ. ಸಾಕಷ್ಟು ಟ್ವಿಸ್ಟ್ಗಳ ನಡುವೆ ಇದೀಗ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜನಸಾಮಾನ್ಯರು ನೇರವಾಗಿ ದೊಡ್ಡ ಮನೆಯೊಳಗೆ ಪ್ರವೇಶಿಸಿದ್ದಾರೆ.
ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ಟಾಸ್ಕ್ನಲ್ಲಿ 2 ಪಕ್ಷಗಳ ನಾಯಕರು ತಮ್ಮ ಕಾರ್ಯಕರ್ತರ ಬಲಾಬಲದಿಂದ ಕಾರ್ಯವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಎದುರಾಳಿಗಳಿಗೆ ತಮ್ಮ ಧ್ವನಿಯಲ್ಲೇ ಟಕ್ಕರ್ ಕೊಡಲು ಐಶ್ವರ್ಯ ಮುಂದಾದರೆ, ಮತ್ತೊಂದೆಡೆ ತ್ರಿವಿಕ್ರಮ್ ತಮ್ಮ ಖಡಕ್ ಪೈಪೋಟಿಯನ್ನು ಆಟದಲ್ಲೇ ತೋರಿಸ್ತೀನಿ ಬನ್ನಿ ಎಂದು ಸವಾಲು ಹಾಕುವ ಛಾಪು ಮೂಡಿಸುತ್ತಿದ್ದಾರೆ. ಈ ಎರಡು ಪಕ್ಷಗಳ ರಾಜಕೀಯ ಲೆಕ್ಕಾಚಾರಗಳು ಸರಿಯಿದೆಯೇ ಎಂದು ಹೇಳಲು ಪ್ರಜೆಗಳು ಬೇಕೇ ಬೇಕು ಅಲ್ಲವೇ? ಹೀಗಾಗಿ ಇದೀಗ ಬಿಗ್ ಮನೆಯೊಳಗೆ ಸಾಮಾನ್ಯ ಜನರು ಎಂಟ್ರಿ ಕೊಟ್ಟಿದ್ದಾರೆ.
ಜನರು ಮನೆಯೊಳಗೆ ಆಗಮಿಸುತ್ತಿದ್ದಂತೆ ಅಚ್ಚರಿಗೊಂಡ ಬಿಗ್ ಸ್ಪರ್ಧಿಗಳು, ಒಂದು ನಿಮಿಷ ಜನರತ್ತ ಕಣ್ಣಾಯಿಸಿದ್ದಾರೆ. ಮನೆಗೆ ಬಂದ ಜನರು ತಮಗಾಗಿ ಮೀಸಲಿಟ್ಟ ಆಸನಗಳಲ್ಲಿ ಕುಳಿತು, ಬಿಗ್ ಮಂದಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಮಧ್ಯೆ ಮಾನಸಾಗೆ ಖಡಕ್ ಆಗಿ ಒಂದಷ್ಟು ವಿಚಾರಗಳನ್ನು ತಿಳಿಸಿದ ಜನಸಾಮಾನ್ಯರು, ಧಿಕ್ಕಾರ...ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗಿದ್ದಾರೆ.