

ಬೆಂಗಳೂರು: ಈ ವಾರ ನಟ, ನಿರೂಪಕ ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಲ್ಲಿ ಬಿಗ್ ಬಾಸ್ (BBKS11) ಸಂಚಿಕೆ ಮುಂದುವರಿದಿದ್ದೇ ಆದರೂ ನಾಲ್ಕನೇ ವಾರದ ಅಂತ್ಯಕ್ಕೆ ಇದೀಗ ಮನೆಯಿಂದ ಸ್ಪರ್ಧಿ ಹಂಸಾ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.
ಈ ವಾರ ಸುದೀಪ್ ಅವರ ಅನುಪಸ್ಥಿತಿ ಇರಲಿದೆ ಎಂಬುದು ಬಹುತೇಕ ವೀಕ್ಷಕರಿಗೆ ಮೊದಲೇ ಗೊತ್ತಿತ್ತು. ಇದಕ್ಕೆ ಪುಷ್ಠಿ ನೀಡಿದ್ದು, ನಿರ್ದೇಶಕ ಯೋಗರಾಜ್ ಭಟ್ಟರು ಮತ್ತು ಮಾತಿನ ಮಲ್ಲ, ಬಿಗ್ ಬಾಸ್ ಸೀಸನ್ ಎರಡರ ರನ್ನರ್ ಅಪ್ ಸೃಜನ್ ಲೋಕೇಶ್ ಅವರ ಎಂಟ್ರಿ. ಆರಂಭದಲ್ಲಿ ಒಂದಷ್ಟು ಖುಷಿ ಇದ್ದರೂ ನಂತರದಲ್ಲಿ ಎಲ್ಲವೂ ಶಾಕಿಂಗ್ ಆಗಿಯೇ ಮನೆ ಮಂದಿಗೆ ಭಾಸವಾಗಿದೆ. ಈ ಮಧ್ಯೆ ಎಲಿಮಿನೇಷನ್ ಭೂತ ಒಬ್ಬರನ್ನು ಕಾಡಿದ್ದು ಕಡೆಗೂ ಸಂಚಿಕೆಯ ಕೊನೆಯಲ್ಲಿ ರಿವೀಲ್ ಆಗಿದೆ.
ಶನಿವಾರ ಸಂಚಿಕೆಯಲ್ಲಿ ಯೋಗರಾಜ್ ಭಟ್ಟರು ಮನೆ ಸ್ಪರ್ಧಿಗಳಿಗೆ ಅಚ್ಚರಿ ಎಂಟ್ರಿಯಾಗಿ ಕಂಡುಬಂದರೆ, ಭಾನುವಾರದ ಸಂಚಿಕೆಗೆ ಸೃಜನ್ ಲೋಕೇಶ್ ಆಗಮಿಸಿದರು. ಮನೆಯೊಳಗೆ ಬಂದ ಮೊದಲೇ ಎಲ್ಲರಿಗೂ ಶಾಕ್ ನೀಡಿದ ಸೃಜನ್, ಕಡೆಯಲ್ಲಿ ಯಾರು ಎಲಿಮಿನೇಟ್ ಆಗಿ ಹೊರಹೋಗಲಿದ್ದಾರೆ ಎಂಬುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಆದರೆ, ಪೂರ್ತಿ ಸಂಚಿಕೆಯನ್ನು ವೀಕ್ಷಕರ ಮುಂದಿಟ್ಟಿಲ್ಲ. ಬದಲಿಗೆ ನಾಳೆಯ ಸಂಚಿಕೆಯಲ್ಲಿ ತಿಳಿಸುವ ಕೆಲಸ ಮಾಡಿದ್ದಾರೆ. ನಾಮಿನೇಟ್ ಆಗಿದ್ದವರ ಪೈಕಿ ಇದೀಗ ಹಂಸಾ ಎಲಿಮಿನೇಟ್ ಆಗಿದ್ದಾರೆ.