

BBK12: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಜನಪ್ರಿಯತೆ ಗಳಿಸಿರುವ ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ಈಗಾಗಲೇ ಅದ್ದೂರಿ ಚಾಲನೆ ದೊರೆಕಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಸುದೀಪ್ ಅವರೇ ನಡೆಸಿಕೊಡುತ್ತಿದ್ದು, ಈ ಬಾರಿ ಬಿಗ್ ಮನೆಯೊಳಗೆ ಒಟ್ಟು 19 ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದಾರೆ. ಆರಂಭದಲ್ಲಿ ಇದು ವೀಕ್ಷಕರ ಕುತೂಹಲ ಹೆಚ್ಚಿಸಿದ್ದೇ ಆದರೂ ಇದೀಗ ಶಾಕಿಂಗ್ ಟ್ವಿಸ್ಟ್ಗಳು, ಡಬಲ್ ಎಲಿಮಿನೇಷನ್ ಮತ್ತು ದ್ವೇಷದ ಮಾತುಗಳು ಸದ್ಯ ವೀಕ್ಷಕರನ್ನು ಅಕ್ಷರಶಃ ಗೊಂದಲಕ್ಕೀಡಾಗಿಸಿದೆ.
ಭಾನುವಾರದ ಸಂಚಿಕೆಯಲ್ಲಿ ಆರ್ಜೆ ಅಮಿತ್ ಮತ್ತು ಕರಿಬಸಪ್ಪ ಜೋಡಿ ಎಲಿಮಿನೇಟ್ ಆಗುವ ಮೂಲಕ ಮನೆಯಿಂದ ಹೊರಬಂದರು. ಪ್ರಸ್ತುತ, ಬಿಗ್ ಮನೆಯಲ್ಲಿ ಉಳಿದಿರುವ 17 ಸ್ಪರ್ಧಿಗಳ ಪೈಕಿ ಅರಸ-ಅರಸಿಯರು ಮತ್ತು ಸೇವಕರ ನಡುವೆ ಮಾತಿನ ಜಟಾಪಟಿಗಳು ತಾರಕಕ್ಕೇರಿವೆ. ಅವರ ಮಾತಿಗೆ ಇವರು ಒಪ್ಪಿಗೆ ಇಲ್ಲ, ಇವರ ಮಾತಿಗೆ ಅವರ ಸಮ್ಮತಿ ಇಲ್ಲದಂತಾಗಿದೆ. ಅರಸಿಯರ ಸಾಲಿನಲ್ಲಿ ಅಶ್ವಿನಿ ತಮಗೆ ಅನಾರೋಗ್ಯ ಸಮಸ್ಯೆಯಿದೆ. ಸೇವಕರು ಮಾಡಿದ ತಪ್ಪಿಗೆ ನಾವೆಲ್ಲರೂ ಲಿವಿಂಗ್ ರೂಮ್ಗೆ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಚೀರಾಡಿದರೆ, ಅತ್ತ ಜಾಹ್ನವಿ ಅವರ 'ಗಾಂಚಾಲಿ' ಪದಕ್ಕೆ ಇತರೆ ಸ್ಪರ್ಧಿಗಳು ತೀವ್ರ ಅಸಮಾಧಾನಗೊಂಡರು.
ಅಡುಗೆ ಮನೆಯೊಳಗೆ ಪ್ರವೇಶಿಲ್ಲ, ಸೇವಕರು ಕ್ಷಮೆ ಕೋರಬೇಕು ಎಂಬ ಹಠದಲ್ಲಿ ಅಶ್ವಿನಿ ತಂಡವಿದ್ದರೆ, ಅತ್ತ ನಮ್ಮಿಂದ ಇದನ್ನೆಲ್ಲ ಕೇಳಲು, ಮಾಡಲು ಸಾಧ್ಯವಿಲ್ಲ ಎಂದು ಸೇವಕರ ತಂಡದಲ್ಲಿರುವ ಮಂಜು ಭಾಷಿಣಿ ಕಣ್ಣೀರಿಟ್ಟಿದ್ದಾರೆ. ಒಟ್ಟಾರೆ, ಮನೆಯೊಂದು ಮೂರು ಬಾಗಿಲು ಆಗಿದ್ದು, 'ಕ್ಷಮಿಸಿ' ಎಂಬ ಒಂದು ಪದವನ್ನು ಹೇಳಲು ಹಲವರಿಗೆ ಕಷ್ಟವಾಗಿದೆ. ಒಂದಷ್ಟು ಮಂದಿ ಕೇಳಲು ತಯಾರಿದ್ದರು, ಮತ್ತೊಂದು ಕಡೆ ಕೇಳಿಸಿಕೊಳ್ಳಲು ತಯಾರಿಲ್ಲ. ಎರಡು ತಂಡಗಳ ಕೆಲವು ಸ್ಪರ್ಧಿಗಳಿಂದ ಬರುತ್ತಿರುವ ಮಾತಿನ ಬಾಣಗಳು ಜಗಳವನ್ನು ಇನ್ನಷ್ಟು ಹೆಚ್ಚು ಮಾಡುತ್ತಿದೆಯೇ ಹೊರತು ಸರಿಪಡಿಸುತ್ತಿಲ್ಲ.
ಇಂದಿನ ಸಂಚಿಕೆಯಲ್ಲಿಯೂ ಅಶ್ವಿನಿ ಗೌಡ ಮತ್ತು ಆಶ್ವಿನಿ ನಡುವೆ ಮಾತಿನ ಜಟಾಪಟಿ ನಡೆದಿದ್ದು, ದ್ವೇಷದ ಹೊಗೆ ಮನೆ ಪೂರ ಹಬ್ಬಿದಂತೆ ಕಾಣಿಸಿದೆ. ಪದಬಳಕೆ, ಆಡಿದ ಮಾತುಗಳು, ವೈಯಕ್ತಿಕ ಕಿಚ್ಚು ಯಾವ ಹಂತಕ್ಕೆ ಕೊಂಡೊಯ್ಯಲಿದೆ ಎಂಬುದನ್ನು ಕಾದು ನೋಡಬೇಕಿದೆ.