

BBK12: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇಂದಿಗೆ ಮೂರು ವಾರಗಳು ಕಳೆದಿದ್ದು, ಮೊದಲ ಫಿನಾಲೆಗೆ ದಿನಗಣನೆ ಆರಂಭಗೊಂಡಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಿರುವುದು ನೋಡುಗರಿಗೆ ಖುಷಿ ನೀಡಿದ್ದೇ ಆದರೂ ಈ ಬಾರಿಯ ಬಿಗ್ ಬಾಸ್ ಸಖತ್ ಟ್ವಿಸ್ಟ್ಗಳಿಂದ ಕೂಡಿರುವುದು ಸದ್ಯ ಭಾರೀ ಗೊಂದಲಕ್ಕೆ ಕಾರಣವಾಗಿದೆ.
ಆರಂಭದಲ್ಲಿ ಮನೆಯೊಳಗೆ ಒಟ್ಟು 19 ಸ್ಪರ್ಧಿಗಳು ಎಂಟ್ರಿಕೊಟ್ಟರು. ಆದರೆ, ಆಟದ ಗತ್ತು, ಗಮ್ಮತ್ತು ಮಾತ್ರ ಇಂದಿಗೂ ಕಾಣಿಸಿಲ್ಲ. ಈ ಬಗ್ಗೆ ಕಳೆದ ವಾರವಷ್ಟೇ ಸುದೀಪ್ ತಮ್ಮ 'ವಾರದ ಕಥೆ ಕಿಚ್ಚನ ಜೊತೆ' ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಸ್ಪಷ್ಟವಾಗಿ ತಿಳಿ ಹೇಳಿದರು. ಇದೀಗ ಮೊದಲ ಫಿನಾಲೆ ಈ ಭಾನುವಾರ ನಡೆಯಲಿದ್ದು, ಕೇವಲ ನಾಲ್ಕು ಮಂದಿ ಮಾತ್ರ ಈ ವೇದಿಕೆಗೆ ಕಾಲಿಡಲಿದ್ದಾರೆ. ಇನ್ನುಳಿದ ಅಷ್ಟು ಮಂದಿ ಎಲಿಮಿನೇಷನ್ ಎಂಬ ತೂಗುಗತ್ತಿಯಲ್ಲಿ ಸಿಲುಕಿದ್ದಾರೆ.
ಸುಧೀ, ಅಶ್ವಿನಿ ಗೌಡ, ಮಾಳು ಮತ್ತು ರಾಶಿಕಾ ಫಿನಾಲೆ ಹಂತದಲ್ಲಿ ಸ್ಪರ್ಧಿಸಿದರೆ, ಚಂದ್ರಪ್ರಭ, ಅಶ್ವಿನಿ ಎಸ್.ಎನ್, ಕಾವ್ಯ, ಗಿಲ್ಲಿ, ಧ್ರುವಂತ್, ಧನುಷ್, ಸ್ಪಂದನ, ಮಂಜು ಭಾಷಿಣಿ, ರಕ್ಷಿತಾ ಶೆಟ್ಟಿ, ಸತೀಶ್, ಮಲ್ಲಮ್ಮ, ಜಾಹ್ನವಿ ಮಿಡ್ ವೀಕ್ ಎಲಿಮಿನೇಷ್ಗೆ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಎಷ್ಟು ಜನ ಮನೆಯಿಂದ ಹೊರ ಹೋಗ್ತಾರೆ ಎಂಬುದು ಸ್ಪಷ್ಟವಿಲ್ಲ. ಕೆಲವೇ ಕೆಲವರು ಅಥವಾ ನಾಮಿನೇಟ್ ಆದ ಅಷ್ಟೂ ಸ್ಪರ್ಧಿಗಳು ಎಲಿಮಿನೇಟ್ ಆದರೂ ಅಚ್ಚರಿಯಿಲ್ಲ. ಇದಕ್ಕೆ ಕಾರಣ, ಈ ಹಿಂದೆಯೇ ಸುದೀಪ್ ಅವರು ಕೊಟ್ಟಿರುವ ಮುನ್ಸೂಚನೆ.
ಕಳೆದ ವಾರಗಳಲ್ಲಿ ಸುದೀಪ್ ಮನೆ ಮಂದಿಗೆಲ್ಲ ತಮ್ಮ ದಿ ಬೆಸ್ಟ್ ಆಟವನ್ನು ಕೊಡಲು ಹೇಳಿದ್ದರು. ಕಾರಣ, ಇಲ್ಲಿ ನಿಮಗೆ ಹೆಚ್ಚಿನ ಸಮಯವಿಲ್ಲ. ಯಾರೂ ಯಾವಾಗ ಬೇಕಾದರೂ ಮನೆಯಿಂದ ಹೊರ ಹೋಗಬಹುದು, ಎಷ್ಟು ಸಂಖ್ಯೆಯಲ್ಲಿ ಬೇಕಾದ್ರೂ ಎಲಿಮಿನೇಟ್ ಆಗಬಹುದು ಎಚ್ಚರಿಕೆ ಎಂದಿದ್ದರು.
ಅಂತೆಯೇ, ಫಿನಾಲೆ ಸ್ಪರ್ಧಿಗಳನ್ನು ಹೊರತುಪಡಿಸಿ, ಉಳಿದೆಲ್ಲರೂ ಎಲಿಮಿನೇಟ್ ಆಗಬಹುದು. ಅವರ ಜಾಗಕ್ಕೆ ಹೊಸ ಎಂಟ್ರಿಗಳು ಬರಬಹುದು? ಎಂದು ಸುಳಿವು ನೀಡಿದ್ದರು. ಇದೆಲ್ಲವನ್ನೂ ಗಮನಿಸಿ, ನೋಡುವುದಾದರೆ ಈ ವಾರ ಹಲವು ಟ್ವಿಸ್ಟ್ಗಳು ಬಿಗ್ ಮನೆಯ ಸದಸ್ಯರಿಗೆ ಮತ್ತು ವೀಕ್ಷಕರಿಗೆ ಕಾದಿದೆ ಎಂಬುದು ಖಚಿತ. ಏನಾಗಲಿದೆ ಎಂಬುದನ್ನು ಶನಿವಾರ ಮತ್ತು ಭಾನುವಾರ ನಡೆಯಲಿರುವ ಫಿನಾಲೆ ಸಂಚಿಕೆಯಲ್ಲಿ ಕಾದು ತಿಳಿಯೋಣ.