'ಬಿಗ್' ಮನೆಗೆ ಮೂವರು ವೈಲ್ಡ್​ ಕಾರ್ಡ್​ ಎಂಟ್ರಿ! ಸೆಕೆಂಡ್​ ಆಫ್​ನಲ್ಲಿ ಸ್ಫೋಟಗೊಂಡ ಸೇಡಿನ ಜ್ವಾಲೆ | BBK12

ವಿಜಯವಾಣಿ (83)
Published on

ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಕನ್ನಡ ಸೀಸನ್ 12 (BBK12) ಶುರುವಾಗಿ ಮೂರು ವಾರಗಳೇ ಕಳೆದಿದ್ದು, ಇದೀಗ ಬಿಗ್ ಬಾಸ್​ 2.0 ಮೂಲಕ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ಗ್ರ್ಯಾಂಡ್​ ಫಿನಾಲೆಯಲ್ಲಿ ಸುಧೀ ಗೆದ್ದು, ಇಮ್ಯೂನಿಟಿ ಪಡೆದುಕೊಂಡರೆ, ಮಂಜು ಭಾಷಿಣಿ ಮತ್ತು ಅಶ್ವಿನ್​ ಎಸ್​.ಎನ್​ ಎಲಿಮಿನೇಟ್​ ಆಗಿ ಹೊರಬಂದರು. ಇವರಿಬ್ಬರ ನಿರ್ಗಮನದ ಬೆನ್ನಲ್ಲೇ ಮೂವರು ವೈಲ್ಡ್​​ ಕಾರ್ಡ್​ ಸ್ಪರ್ಧಿಗಳಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿರುವುದು ಸದ್ಯ ಆಟದ ಕಿಚ್ಚನ್ನು ಹೆಚ್ಚಿಸಿದೆ.

ರಿಷಾ, ರಘು ಮತ್ತು ಸೂರಜ್ ಸಿಂಗ್​ ಇದೀಗ ಮನೆಯೊಳಗೆ ಕಾಲಿಟ್ಟಿರುವ ಮೂವರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳು. ಈ ಮೂವರ ಪೈಕಿ ರಘು, ಅಶ್ವಿನಿ ಗೌಡ ಮತ್ತು ಜಾನ್ವಿ ವಿರುದ್ಧ ಏಕಾಏಕಿ ತಿರುಗಿ ಬಿದ್ದಿದ್ದಾರೆ. ರಕ್ಷಿತಾ ಶೆಟ್ಟಿ ಬಗ್ಗೆ ಕೀಳಾಗಿ ಮಾತಾಡಿದ್ದಲ್ಲದೇ, ತಮ್ಮ ತಪ್ಪಿನ ಅರಿವನ್ನು ಎಲ್ಲಿಯೂ ಮಾತನಾಡದೆ ಇದ್ದದ್ದು ಸದ್ಯ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಎಲ್ಲ ಸಂಚಿಕೆಗಳನ್ನು ಹೊರಗಿದ್ದು ನೋಡಿರುವ ರಘು, ಮನೆಯೊಳಗೆ ಕಾಲಿಟ್ಟ ಮೊದಲ ದಿನವೇ ಮನದೊಳಗಿದ್ದ ಕಿಡಿಯನ್ನು ಸ್ಫೋಟಿಸಿದ್ದಾರೆ.

ಇಂದಿನ ಪ್ರೋಮೋದಲ್ಲಿ ಅಶ್ವಿನಿ ಅವರನ್ನು ಏಕವಚನದಲ್ಲಿ ಮಾತನಾಡಿಸಿರುವ ರಘು, ರಕ್ಷಿತಾಳನ್ನು ನಡೆಸಿಕೊಂಡ ರೀತಿಗೆ ಅಶ್ವಿನಿ ಮತ್ತು ಜಾನ್ವಿ ವಿರುದ್ಧ ಕಿಡಿಕಾರಿದ್ದಾರೆ. ರಘು ಮಾತುಗಳಿಗೆ ಕೆಂಡಾಮಂಡಲಗೊಂಡ ಅಶ್ವಿನಿ, ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇವರಿಬ್ಬರ ಜಗಳ ಸದ್ಯ ಮನೆಯಲ್ಲಿ ಹೊಸ ಕಿಚ್ಚನ್ನು ಹೊತ್ತಿಸಿದೆ. ಇವರ ಬೆನ್ನಲ್ಲೇ ಮನೆಯೊಳಗೆ ಬಂದ ಬ್ಯೂಟಿ ರಿಷಾ ಗೌಡ ಕೂಡ ಅಶ್ವಿನಿ ಮತ್ತು ಇತರೆ ಸ್ಪರ್ಧಿಗಳಿಗೆ ಮಾತಿನ ಚಾಟಿ ಬೀಸಿದ್ದಾರೆ.

ಧ್ರುವಂತ್​ ಅವರ ಸಮಯ ಮುಗಿದಿದೆ, ಕಪಟ ಮುಖವಾಡ ಹಾಕಿಕೊಂಡು ಬದುಕುತ್ತಿರುವುದು ಸ್ಪಂದನ, ಹೇಳುವುದು ಒಂದು ಮಾಡುವುದು ಒಂದು, ಆನೆ ನಡೆದ ದಾರಿ ಯಾವಾಗಲೂ ಸರಿಯಿರಲ್ಲ ಅಂತ ಅಶ್ವಿನಿಗೆ ತೋರಿಸ್ತೀನಿ. ನನ್ನ ಟಾರ್ಗೆಟ್​ ಸುಧೀ. ಇವರು ಟಫ್​ ಸ್ಪರ್ಧಿ ಎಂದು ನಾನು ಅಂದ್ಕೊಂಡಿದ್ದೆ. ಆದರೆ, ಇವರಿಗೆ ಉತ್ತರಕುಮಾರ ಅಂತ ನಾನೇ ಟೈಟಲ್​ ಕೊಡ್ತೀನಿ ಎಂದು ಹೇಳಿದ್ದಾರೆ. ಇದೆಲ್ಲವೂ, ಮನೆಯೊಳಗೆ ಹೊಸ ಕಿಚ್ಚನ್ನೇ ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ ಆಟದ ಗತ್ತು, ಗಮ್ಮತ್ತಿಗೆ ಯಾವುದೇ ಕೊರೆತೆಯಿಲ್ಲ ಎನ್ನುವುದನ್ನು ಒತ್ತಿ ಹೇಳಿದೆ.

ಅಶ್ವಿನಿ, ಜಾನ್ವಿ ಆಟ ಬಲು ಕಷ್ಟ!

ರಕ್ಷಿತಾಳನ್ನು ಟಾರ್ಗೆಟ್​ ಮಾಡಿಕೊಂಡು ಮಾತನಾಡಿದ ರೀತಿಗೆ ಇಡೀ ಮನೆ ಮಂದಿ ಅಶ್ವಿನಿ ಮತ್ತು ಜಾನ್ವಿ ವಿರುದ್ಧ ಈಗಾಗಲೇ ಅಸಮಾಧಾನಗೊಂಡಿದ್ದಾರೆ. ಅಶ್ವಿನಿ, ಜಾನ್ವಿ ಒಂದು ಎಂದಾದರೆ, ಉಳಿದವರೆಲ್ಲ ಬೇರೆ ಎನ್ನುವಂತಾಗಿದೆ. ಇದರ ಮಧ್ಯೆ, ರಘು ಮತ್ತು ರಿಷಾ ಕೂಡ ಇವರಿಬ್ಬರನ್ನು ಗುರಿಯಾಗಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮಾತಿನ ಟಕ್ಕರ್​ ಕೊಡಲು ಸಜ್ಜಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net