

BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ 11ರ ಗ್ರ್ಯಾಂಡ್ ಫಿನಾಲೆಗೆ ಕೇವಲ ಒಂದು ವಾರವಷ್ಟೇ ಬಾಕಿ ಉಳಿದಿದ್ದು, ಕಳೆದ ವಾರ ಮನೆಯಿಂದ ಮಿಡ್-ವೀಕ್ ಎಲಿಮಿನೇಷನ್ನಲ್ಲಿ ಹೊರಬರಬೇಕಿದ್ದ ಸ್ಪರ್ಧಿಗಳು ಈಗ ಬಿಗ್ ಬಾಸ್ 11ರ ಕೊನೆಯ ಕಿಚ್ಚನ ಪಂಚಾಯತಿಗೆ ಬಂದು ತಲುಪಿದ್ದಾರೆ. ವಾರದ ಮಧ್ಯೆದಲ್ಲೇ ಮನೆಯಿಂದ ಹೊರಬೀಳಬೇಕಿದ್ದ ಕೆಲವು ಸ್ಪರ್ಧಿಗಳು ಇದೀಗ ನಟ, ನಿರೂಪಕ ಕಿಚ್ಚ ಸುದೀಪ್ ಅವರ ಮುಂದೆಯೇ ಎಲಿಮಿನೇಟ್ ಆಗಿ ತಮ್ಮ ಬಿಗ್ ಬಾಸ್ ಪಯಣ ಕೊನೆಗೊಳಿಸಲಿದ್ದಾರೆ.
ಸ್ನೇಹ, ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದ ಕೆಲವರು ಫಿನಾಲೆ ಜಿದ್ದಾಜಿದ್ದಿನಲ್ಲಿ ಅದನ್ನೆಲ್ಲ ಬದಿಗಿಟ್ಟು ಎದುರು-ಬದುರು ಸೆಣಸಾಡಿದ್ದೇ ಆದರೂ ಗ್ರ್ಯಾಂಡ್ ಫಿನಾಲೆ ವೇದಿಕೆಯನ್ನು ತಲುಪುವಲ್ಲಿ ಒಂದು ಹೆಜ್ಜೆ ಹಿಂದುಳಿದಿದ್ದಾರೆ. ಮೊದಲ ದಿನದಿಂದಲೂ ಸಾಕಷ್ಟು ಟ್ವಿಸ್ಟ್, ಜಟಾಪಟಿ, ವಾಗ್ವಾದ, ಆರೋಪ-ಪ್ರತ್ಯಾರೋಪಗಳಿಂದಲೇ ಇಲ್ಲಿಯವರೆಗೆ ಸಾಗಿ ಬಂದಿರುವ ಸ್ಪರ್ಧಿಗಳು ಸದ್ಯ ಗೆಲುವಿನ ಹಂತ ತಲುಪಲು ಸನ್ನಿಹಿತದಲ್ಲಿದ್ದಾರೆ. ಬಿಗ್ ಬಾಸ್ 11ರ ಒಟ್ಟು 20 ಘಟಾನುಘಟಿ ಸ್ಪರ್ಧಿಗಳನ್ನು ಮನೆಯಿಂದ ಹೊರಹಾಕಿ ಈಗ ಮನೆಯಲ್ಲಿ ಉಳಿದಿರುವುದು ತ್ರಿವಿಕ್ರಮ್, ಉಗ್ರಂ ಮಂಜು, ರಜತ್, ಭವ್ಯ, ಮೋಕ್ಷಿತಾ, ಧನರಾಜ್ ಮತ್ತು ಹನುಮಂತು ಮಾತ್ರ.
ಪ್ರತಿ ವಾರ ಕಿಚ್ಚನ ಪಂಚಾಯತಿಗೆ ಕಾತರದಿಂದ ಕಾಯುವ ವೀಕ್ಷಕರಿಗೆ ಈ ವಾರದ ಕೊನೆಯ ಕಿಚ್ಚನ ಪಂಚಾಯತಿ ಮೇಲೆ ಭಾರೀ ನಿರೀಕ್ಷೆ ಹಾಗೂ ಕುತೂಹಲ ಮೂಡಿದೆ. ಇದಕ್ಕೆ ಕಾರಣ, ಇಬ್ಬರ ಎಲಿಮಿನೇಷನ್. ವಾರದ ಮಧ್ಯಂತರದಲ್ಲಿ ಮನೆಯಿಂದ ಹೊರಬರಬೇಕಿದ್ದ ಸ್ಪರ್ಧಿಗಳು ಧನರಾಜ್ ತಪ್ಪು ಹಾಗೂ ಒಪ್ಪಿನಿಂದ ನೇರವಾಗಿ ವಾರಾಂತ್ಯ ತಲುಪಿದ್ದಾರೆ. ಫಿನಾಲೆ ಟಿಕೆಟ್ ಪಡೆದು ಗ್ರ್ಯಾಂಡ್ ಫಿನಾಲೆ ಹಂತವನ್ನು ತಲುಪಿರುವ ಹನುಮಂತು ಜತೆಗೆ ಮೋಕ್ಷಿತಾ ಮತ್ತು ತ್ರಿವಿಕ್ರಮ್ ಕೂಡ ಸೇರಿಕೊಂಡಿರುವುದು ಅವರ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಸದ್ಯ ಧನರಾಜ್, ಮಂಜು, ಭವ್ಯ, ರಜತ್ ಮತ್ತು ಗೌತಮಿ ಪೈಕಿ ಯಾರಿಬ್ಬರು ಮನೆಯಿಂದ ಹೊರಬರುತ್ತಾರೆ ಎಂಬುದೇ ಇದೀಗ ವೀಕ್ಷಕರ ಕೌತುಕ.
ಬಿಗ್ ಬಾಸ್ ಅಂದಮೇಲೆ ಜಾಲತಾಣಗಳಲ್ಲಿ ಟ್ರೋಲ್, ಮೀಮ್ಗಳ ಸುರಿಮಳೆಗಳು ತೀರ ಸಾಮಾನ್ಯ. ನೆಟ್ಟಿಗರು ತಮ್ಮ ನೆಚ್ಚಿನ ಸ್ಪರ್ಧಿಗಳ ಫೋಟೋ ಮುಂದಿಟ್ಟು ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹೊರಹಾಕುವಲ್ಲಿ ಒಂದೆಜ್ಜೆ ಮುಂದೆಯೇ ಇದ್ದಾರೆ. ಪ್ರತಿವಾರ ಯಾರು ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ ಎಂದು ಮುಂಚಿತವಾಗಿಯೇ ಅಭಿಪ್ರಾಯಗಳನ್ನು ಹೊರಹಾಕುವ ನೆಟ್ಟಿಗರು, ಈ ವಾರ ಫಿನಾಲೆ ಓಟದಿಂದ ಯಾರು ಹೊರಬರಲಿದ್ದಾರೆ ಎಂಬುದನ್ನು ಈಗಾಗಲೇ ಊಹಿಸಿದ್ದಾರೆ. ಈ ಸಾಲಿನಲ್ಲಿ ಗೌತಮಿ ಹೆಸರು ಹೆಚ್ಚಾಗಿ ಕೇಳಿಬಂದಿದ್ದರೆ, ಮಂಜು ಮತ್ತು ಧನರಾಜ್ ಹೆಸರುಗಳು ಕೂಡ ಅಲ್ಲಲ್ಲಿ ಸದ್ದು ಮಾಡಿವೆ. ಅಸಲಿಗೆ ಇವರ ನಡುವೆ ಯಾರಿಗೆ ಫಿನಾಲೆ ಓಟದಿಂದ ಗೇಟ್ಪಾಸ್? ಯಾರು ಫಿನಾಲೆಯನ್ನು ಪ್ರವೇಶಿಸಲಿದ್ದಾರೆ ಎಂಬುದನ್ನು ಇಂದು ಮತ್ತು ನಾಳಿನ ಸಂಚಿಕೆಯಲ್ಲಿ ಕಾದು ತಿಳಿಯಬೇಕಿದೆ.