BBK11: ಫಿನಾಲೆ ವೇದಿಕೆ ರಂಗೇರಿಸಿದ 'ಮ್ಯಾಕ್ಸ್​'; ಕೊನೆಯ ಸೀಸನ್​ನಲ್ಲಿ ಮನಬಿಚ್ಚಿ ಕುಣಿದು ಕುಪ್ಪಳಿಸಿದ ಕಿಚ್ಚ ಸುದೀಪ್​

ವಿಜಯವಾಣಿ - 2025-01-25T112210.377
Published on

BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್​ ಸೀಸನ್​ 11 ಇದೀಗ ಕೊನೆಯ ಹಂತ ತಲುಪಿದೆ. ನಿರೂಪಕನಾಗಿ ಕಿಚ್ಚ ಸುದೀಪ್​ ಅವರ ಕಡೆಯ ಸೀಸನ್​ ಇದಾಗಿದ್ದು, ವೇದಿಕೆಯಲ್ಲಿ 'ಮ್ಯಾಕ್ಸ್'​ ಮ್ಯಾಕ್ಸಿಮಮ್​ ಡ್ಯಾನ್ಸ್ ಮಾಡಿದ್ದಾರೆ.

ಯಶಸ್ವಿ 15 ವಾರಗಳನ್ನು ಪೂರೈಸಿ, 16ನೇ ವಾರ ಹಾಗೂ ಕೊನೆಯ ವಾರದಲ್ಲಿ ಮನೆಯೊಳಗೆ ಉಳಿದಿರುವ ಸ್ಪರ್ಧಿಗಳ ನಡುವೆ ಈಗ ಗೆಲುವಿನ ಓಟದ ಲೆಕ್ಕಾಚಾರ ಬಿಟ್ಟರೆ ಬೇರೇನೂ ಓಡುತ್ತಿಲ್ಲ. ಸದ್ಯ ಗ್ರ್ಯಾಂಡ್​ ಫಿನಾಲೆ ತಲುಪಿರುವ ಆರು ಸ್ಪರ್ಧಿಗಳ ಭವಿಷ್ಯ ಇಂದು ಮತ್ತು ನಾಳೆಯ ಸಂಚಿಕೆಯಲ್ಲಿ ಸ್ಪಷ್ಟವಾಗಿ ತಿಳಿಯಲಿದೆ. ಸೀಸನ್​ 11ರ ಪಟ್ಟಕ್ಕಾಗಿ ಮೋಕ್ಷಿತಾ ಪೈ, ತ್ರಿವಿಕ್ರಮ್​, ಮಂಜು, ಭವ್ಯ, ರಜತ್ ಮತ್ತು ಹನುಮಂತು ಮಧ್ಯೆ ಸಖತ್ ಪೈಪೋಟಿ ಶುರುವಾಗಿದೆ. ತಮ್ಮ ಕಡೆಯ ಬಿಗ್ ಬಾಸ್​ ಸೀಸನ್​ ಬಗ್ಗೆ ಕಿಚ್ಚ ಹೇಳಲಿರುವ ಭಾವುಕ ಮಾತುಗಳೇನು? ಇತರರಿಗೆ ಕೊಡುವ ಸಲಹೆಗಳೇನು ಎಂಬ ಹಲವಾರು ವಿಷಯಗಳನ್ನು ನೋಡಲು ವೀಕ್ಷಕರು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ.

ಇಂದು ಸಂಜೆ ಆರು ಗಂಟೆಯಿಂದ ಪ್ರಾರಂಭವಾಗಲಿರುವ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಜಬರ್ದಸ್ತ್​ ಆಗಿ ಕಾಣಿಸಿಕೊಂಡಿದ್ದು, ಎಂದಿನಂತೆ ಆಕರ್ಷಕ ಉಡುಗೆಯಲ್ಲಿ ಎಲ್ಲರ ಗಮನಸೆಳೆದಿದ್ದಾರೆ. ಇಲ್ಲಿಯವರೆಗೂ ವೇದಿಕೆಯಲ್ಲಿ ಹೆಜ್ಜೆ ಹಾಕದ ಕಿಚ್ಚ ಸುದೀಪ್, ತಮ್ಮ ಕೊನೆಯ ಸೀಸನ್​ನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿರುವುದು ಫಿನಾಲೆ ಪ್ರೋಮೋದಲ್ಲಿ ಕಾಣಬಹುದಾಗಿದೆ. ಅಸಲಿಗೆ ಇಂದಿನ ಸಂಚಿಕೆಯಲ್ಲಿ ಯಾರು ಮನೆಯಿಂದ ಹೊರಬರುತ್ತಾರೆ? ಯಾವ ಮೂವರು ಭಾನುವಾರದ ಸಂಚಿಕೆಗೆ ಹೋಗುತ್ತಾರೆ ಎಂಬ ಕುತೂಹಲ ನೋಡುಗರಲ್ಲಿ ಕಾಡುತ್ತಿದೆ. ಈ ಕೌತುಕಗಳಿಗೆ ನಾಳೆ ಸಂಪೂರ್ಣವಾಗಿ ತೆರೆ ಬೀಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net