ಮುಖ ಯೋಗದ ಮೂಲ ತತ್ವಗಳು ಮತ್ತು ಸೂಕ್ಷ್ಮ ವಿವರಗಳು

Georgia (2)
Published on
ಮುಖ ಯೋಗ ಕೇವಲ ಸುಕ್ಕುಗಳನ್ನು ಹೋಗಲಾಡಿಸುವ ವ್ಯಾಯಾಮವಲ್ಲ. ಇದು ನಮ್ಮ ದೇಹ, ಮನಸ್ಸು ಮತ್ತು ಚರ್ಮದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಒಂದು ಸಮಗ್ರ ವಿಧಾನ. ನಾವು ನಗುವಾಗ ಅಥವಾ ಕೋಪಗೊಂಡಾಗ ಮುಖದ ಸ್ನಾಯುಗಳು ಕುಗ್ಗುತ್ತವೆ. ಒತ್ತಡ ಮತ್ತು ಆತಂಕದ ಸಮಯದಲ್ಲಿ ಮುಖದಲ್ಲಿ ಬಿಗಿತ ಉಂಟಾಗುತ್ತದೆ. ಮುಖ ಯೋಗದಿಂದ ಈ ಬಿಗಿತವನ್ನು ಕಡಿಮೆ ಮಾಡಬಹುದು, ಇದು ಮನಸ್ಸಿನ ಮೇಲಿನ ಒತ್ತಡವನ್ನು ಸಹ ನಿವಾರಿಸುತ್ತದೆ.

ಯೋಗದ ಪ್ರಕಾರ, ಪ್ರಾಣಶಕ್ತಿ ನಮ್ಮ ದೇಹದಾದ್ಯಂತ ಸೂಕ್ಷ್ಮ ನಾಡಿಗಳ ಮೂಲಕ ಹರಿಯುತ್ತದೆ. ಮುಖದ ಮೇಲೆ ಕೆಲವು ‘ಮರ್ಮ ಬಿಂದುಗಳು’ (ಶಕ್ತಿ ಕೇಂದ್ರಗಳು) ಇವೆ. ಮುಖ ಯೋಗದ ಮಸಾಜ್ ಮತ್ತು ವ್ಯಾಯಾಮಗಳು ಈ ಬಿಂದುಗಳನ್ನು ಉತ್ತೇಜಿಸಿ, ಪ್ರಾಣಶಕ್ತಿಯ ಹರಿವನ್ನು ಸುಧಾರಿ ಸುತ್ತವೆ. ಇದು ಚರ್ಮಕ್ಕೆ ಪೌಷ್ಟಿಕಾಂಶ ಮತ್ತು ಆಮ್ಲಜನಕವನ್ನು ಒದಗಿಸಿ, ಅದನ್ನು ಹೊಳೆಯುವಂತೆ ಮಾಡುತ್ತದೆ.

ಮುಖದ ಮೇಲೆ ಅನೇಕ ಲಸಿಕಾ ಗ್ರಂಥಿಗಳಿವೆ. ಇವು ದೇಹದ ತ್ಯಾಜ್ಯವನ್ನು ಹೊರ ಹಾಕಲು ಸಹಾಯ ಮಾಡುತ್ತವೆ. ಮುಖ ಯೋಗದ ಮಸಾಜ್​ಗಳು ಈ ಗ್ರಂಥಿಗಳನ್ನು ಉತ್ತೇಜಿಸಿ, ಮುಖದ ಊತ ಅಥವಾ ಬಾವು ಕಡಿಮೆಯಾಗಲು ಸಹಾಯ ಮಾಡುತ್ತವೆ, ಇದರಿಂದ ಮುಖವು ಹೆಚ್ಚು ನಿರ್ದಿಷ್ಟ ಮತ್ತು ಸುಂದರವಾಗಿ ಕಾಣುತ್ತದೆ. ಕೆಲವು ಪ್ರಮುಖ ಮತ್ತು ಪರಿಣಾಮಕಾರಿ ಮುಖ ಯೋಗ ಇಲ್ಲಿ ನಿಮ್ಮನ್ನು ಇನ್ನಷ್ಟು ಆಳವಾಗಿ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುವ ಕೆಲವು ತಂತ್ರಗಳಿವೆ:

ಸಿಂಹ ಮುಖ : ಆಳವಾದ ಉಸಿರು ತೆಗೆದುಕೊಂಡು, ನಿಮ್ಮ ಬಾಯಿ ಮತ್ತು ಕಣ್ಣುಗಳನ್ನು ಸಾಧ್ಯವಾದಷ್ಟು ದೊಡ್ಡದಾಗಿ ತೆರೆಯಿರಿ. ನಾಲಿಗೆಯನ್ನು ಸಂಪೂರ್ಣವಾಗಿ ಹೊರಗೆ ಚಾಚಿ, ನಾಲಿಗೆಯ ತುದಿಯನ್ನು ಗಲ್ಲದ ಕಡೆಗೆ ತರಲು ಪ್ರಯತ್ನಿಸಿ. ಈ ಸಮಯದಲ್ಲಿ ಹಾ ಎಂಬ ಶಬ್ದ ಮಾಡಿ. ಇದನ್ನು 3-5 ಬಾರಿ ಪುನರಾವರ್ತಿಸಿ. ಇದರಿಂದ ಮುಖದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಾಲಿಗೆ, ಗಂಟಲು ಹಾಗೂ ಕುತ್ತಿಗೆಯ ಸ್ನಾಯುಗಳನ್ನು ಬಲಪಡಿಸುತ್ತದೆ.

ಮೀನಿನ ತುಟಿ: ನಿಮ್ಮ ಕೆನ್ನೆಗಳನ್ನು ಒಳ ಗೆಳೆದು, ನಿಮ್ಮ ಬಾಯಿಯನ್ನು ಮೀನಿನಂತೆ ಮಾಡಿ. ಈಗ, ನಿಮ್ಮ ತುಟಿಗಳನ್ನು ಮುತ್ತಿನಂತೆ ಒಟ್ಟುಗೂಡಿಸಿ, ನಂತರ ದೊಡ್ಡದಾಗಿ ನಕ್ಕು. ಈ ಎರಡು ಭಂಗಿಗಳ ನಡುವೆ ಪರ್ಯಾಯವಾಗಿ 10 ಬಾರಿ ಪುನರಾವರ್ತಿಸಿ. ಇದರಿಂದ ಕೆನ್ನೆ ಮತ್ತು ತುಟಿಯ ಸುತ್ತಲಿನ ಸ್ನಾಯುಗಳನ್ನು ಬಲಪಡಿಸುತ್ತದೆ, ನಸುನಗುವಿನ ರೇಖೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

’ಣ’ ಆಕಾರದ ವ್ಯಾಯಾಮ: ನಿಮ್ಮ ತುಟಿಗಳನ್ನು ’ಣ’ ಆಕಾರದಲ್ಲಿ ಮಾಡಿ. ನಂತರ, ನಿಮ್ಮ ಮೇಲಿನ ತುಟಿಯನ್ನು ಸಾಧ್ಯವಾದಷ್ಟು ಮೇಲಕ್ಕೆತ್ತಿ ಮತ್ತು ಕೆಳಗಿನ ತುಟಿಯನ್ನು ಕೆಳಗೆ ಇಳಿಸಿ, ಹೀಗೆ ಮುಖವನ್ನು ಉದ್ದವಾಗಿಸಿ. ಈ ಭಂಗಿಯಲ್ಲಿ 5 ಸೆಕೆಂಡುಗಳ ಕಾಲ ಇದ್ದು ವಿಶ್ರಾಂತಿ ಪಡೆಯಿರಿ. ಇದನ್ನು 5-6 ಬಾರಿ ಮಾಡಿ. ಇದರಿಂದ ಬಾಯಿ ಸುತ್ತಲಿನ ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡುತ್ತದೆ ಮತ್ತು ತುಟಿಗಳಿಗೆ ಒಂದು ನಿರ್ದಿಷ್ಟ ಆಕಾರವನ್ನು ನೀಡುತ್ತದೆ.

ನಿಮ್ಮ ಬಾಯಿ ಮುಚ್ಚಿ, ನಿಮ್ಮ ದವಡೆಯನ್ನು ಹೊರಗೆ ಚಾಚಿ ಮತ್ತು ನಿಮ್ಮ ಕೆಳಗಿನ ತುಟಿಯನ್ನು ಮೇಲಿನ ತುಟಿಯ ಮೇಲೆ ಇರಿಸಿ. ನಿಮ್ಮ ಕುತ್ತಿಗೆಯ ಸ್ನಾಯುಗಳು ಬಿಗಿಯಾಗಿರುವಂತೆ ನಿಮಗೆ ಅನಿಸಬೇಕು. 10 ಸೆಕೆಂಡುಗಳ ಕಾಲ ಹಿಡಿದು ನಿಧಾನವಾಗಿ ವಿಶ್ರಾಂತಿ ಪಡೆಯಿರಿ. ಈ ಕ್ರಮವು ಕುತ್ತಿಗೆಯ ಬಿಗಿತವನ್ನು ಕಡಿಮೆ ಮಾಡುತ್ತದೆ ಮತ್ತು ಗಲ್ಲದ ಕೆಳಗಿನ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ನಿರಂತರತೆ: ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಕೇವಲ 10-15 ನಿಮಿಷಗಳ ಕಾಲ ನಿಯಮಿತವಾಗಿ ಅಭ್ಯಾಸ ಮಾಡಿ. ಯಾವುದೇ ವ್ಯಾಯಾಮ ಮಾಡುವಾಗ ಮುಖದ ಮೇಲೆ ಯಾವುದೇ ರೀತಿಯ ನೋವು ಅಥವಾ ಒತ್ತಡ ಉಂಟಾಗದಂತೆ ನೋಡಿಕೊಳ್ಳಿ. ಮುಖ ಯೋಗದ ಜೊತೆಗೆ ಸರಿಯಾದ ನಿದ್ರೆ, ಸಾಕಷ್ಟು ನೀರು ಕುಡಿಯುವುದು ಮತ್ತು ಆರೋಗ್ಯಕರ ಆಹಾರ ಸೇವಿಸುವುದು ಮುಖ್ಯ. ಇದು ನಿಮ್ಮ ಚರ್ಮದ ಆರೋಗ್ಯವನ್ನು ಒಳಭಾಗದಿಂದ ಸುಧಾರಿಸುತ್ತದೆ. ಕನ್ನಡಿ ಉಪಯೋಗಿಸಿ: ಅಭ್ಯಾಸ ಮಾಡುವಾಗ ಕನ್ನಡಿಯ ಮುಂದೆ ನಿಂತು ಸರಿಯಾದ ಭಂಗಿಯನ್ನು ಅನುಸರಿಸಿ. ನಿಮ್ಮ ಮುಖದ ಸೌಂದರ್ಯವು ನಿಮ್ಮ ಒಳಗಿನ ಸಂತೋಷದ ಪ್ರತಿಬಿಂಬವಾಗಿರಲಿ.

(ಪ್ರತಿಕ್ರಿಯಿಸಿ: vvsudina@gmail.com) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net