

ಬೆಂಗಳೂರು: ರಾಜ್ಯ ಲಿಂಗತ್ವ ಅಲ್ಪ ಸಂಖ್ಯಾತರು (ಟ್ರಾನ್ಸ್ ಜೆಂಡರ್) ನೀತಿ 2012ಕ್ಕೆ ಪೂರಕವಾಗಿ ರಾಜ್ಯಾದ್ಯಂತ ಮೊದಲ ಹಂತದ ಸಮೀಕ್ಷೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯಮಟ್ಟದ ಸಮನ್ವಯ ಸಮಿತಿ ಲಿಂಗತ್ವ ಅಲ್ಪ ಸಂಖ್ಯಾತರ ಅಧ್ಯಕ್ಷರಾದ ಉಮಾ ಮಹದೇವನ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು 29 ಜಿಲ್ಲೆಗಳ ಲಿಂಗತ್ವ ಅಲ್ಪಸಂಖ್ಯಾತರ ಬೇಸ್‍ಲೈನ್ ಸರ್ವೆ ಕೈಗೊಳ್ಳಲು ಪೂರ್ವಸಿದ್ದತೆ ಕುರಿತು ಹಮ್ಮಿಕೊಳ್ಳಲಾದ ಸಭೆಯಲ್ಲಿ ಈ ವಿಷಯ ತಿಳಿಸಿದರು. ಲಿಂಗತ್ವ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಇವರಿಗೆ ಉದ್ಯೋಗ ಶಿಕ್ಷಣ ಮೀಸಲಾತಿ ಒದಗಿಸಿ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಪಡಿಸಬೇಕು ಎಂದರು.
ಮೈಸೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯ ಆಧಾರಿತ ಸಂಸ್ಥೆಗಳಿಂದ ಮಾಸ್ಟರ್ ಟ್ರೈನರ್ಸ್ ಸಮೀಕ್ಷೆದಾರರಿಂದ ಲಿಂಗತ್ವ ಅಲ್ಪಸಂಖ್ಯಾತರ ಪ್ರಾಯೋಗಿಕ ಸಮೀಕ್ಷೆಯನ್ನು ನಡೆಸಲಾಗಿತ್ತು. ಈ ಸಮೀಕ್ಷೆಯನ್ನು ಮಾರ್ಚ್ 2023ರಿಂದ 45 ದಿನಗಳ ಕಾಲ ನಡೆಸಲಾಯಿತು. ಮೈಸೂರಿನ ಒಟ್ಟು 245 ಹಾಗೂ ವಿಜಯಪುರದಲ್ಲಿ 1014 ಜನರನ್ನು ಸಮೀಕ್ಷೆಗೆ ಒಳಪಡಿಸಲಾಯಿತು ಎಂದರು.
ಈ ಬಾರಿ ಎಲ್ಲಾ ಜಿಲ್ಲೆಗಳಲ್ಲೂ ಸಮೀಕ್ಷೆ ಕೈಗೊಳ್ಳಲು ಕ್ರಮವಹಿಸಲಾಗಿದ್ದು, ಎನುಮರೇಟರ್‍ಗಳಿಗೆ ಪ್ರತಿದಿನ 400 ರೂ. ಗಳಂತೆ ಪ್ರತಿಯೊಬ್ಬರ ಸಮೀಕ್ಷೆಗೆ ರೂ. 75 ನ್ನು ನಿಗದಿಪಡಿಸಲಾಗಿದೆ. ಈ ಸಮೀಕ್ಷೆಯನ್ನು 45 ದಿನಗಳ ಒಳಗಾಗಿ ಪೂರ್ಣಗೊಳಿಸಲು ಅವಧಿ ನೀಡಲಾಗಿರುತ್ತದೆ ಎಂದರು.
ಜಿಲ್ಲಾ, ತಾಲ್ಲೂಕು ಹಾಗೂ ರಾಜ್ಯ ಮಟ್ಟದಲ್ಲಿ ಟ್ರಾನ್ಸ್‍ಜೆಂಡರ್ಸ್ ಕೋಶವನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಈವರೆಗೆ 43 ಸಾವಿರ ಲಿಂಗತ್ವ ಅಲ್ಪಸಂಖ್ಯಾತರಿದ್ದು, ಇದುವರೆಗೆ 3092 ಜನ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಅಧಿಕೃತ ಟ್ರಾನ್ಸ್‍ಜೆಂಡರ್ ಗುರುತಿನ ಚೀಟಿ ಪಡೆದಿದ್ದಾರೆ. ಈ ಗುರುತಿಸುವಿಕೆ ಹಾಗೂ ಗುರುತಿನ ಚೀಟಿ ಪ್ರಕ್ರಿಯೆ ಸರಳಗೊಳಿಸಲು ಜಿಲ್ಲಾ ಮಟ್ಟದಲ್ಲಿ ಆದ್ಯತಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.