ಮನುಷ್ಯನಿಗೆ ಮಾನಸಿಕ ಶಾಂತಿ ನೆಮ್ಮದಿ ಅಗತ್ಯ; ಚನ್ನವಿರ ಸ್ವಾಮೀಜಿ

8-RNR-01
Published on

ರಾಣೆಬೆನ್ನೂರ: ಮಾನವನ ಬದುಕು ಮತ್ತು ಜೀವನ ಸುಂದರವಾಗಿ ಇರಬೇಕೆಂದರೆ, ಮಾನಸಿಕ ಶಾಂತಿ ಮತ್ತು ನೆಮ್ಮದಿ ಅಗತ್ಯವಾಗಿದೆ ಎಂದು ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವಿರ ಸ್ವಾಮೀಜಿ ಹೇಳಿದರು.

ತಾಲೂಕಿನ ಕೂನಬೇವು ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ನೂತನ ಗೋಪುರ, ಭರಮದೇವರ ಕಳಸಾರೋಹಣ ಶ್ರೀ ಬಸವ ದರ್ಶನ ಪ್ರವಚನ ಮತ್ತು ಧರ್ಮಸಭೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಸಂಸತಿ ಮತ್ತು ಸಂಸ್ಕಾರ ಭಾರತೀಯ ಮಹಿಳೆಯ ಪರಂಪರೆ, ಮಹಿಳೆ ದೇಶವನ್ನು ಆಳಬಲ್ಲಳು. ಇಂದು ಕೇವಲ ನಾಲ್ಕು ಗೋಡೆಗೆ ಸೀಮಿತವಾಗದೆ ಎಲ್ಲ ರಂಗಗಳಲ್ಲಿ ತನ್ನನ್ನೇ ತಾನು ತೊಡಗಿಸಿಕೊಂಡು ಶ್ರಮಿಸುತ್ತಿದ್ದಾಳೆ. ಆಧುನಿಕ ಬದುಕಿನಲ್ಲಿ ಧರ್ಮದರ್ಶನ ದೂರವಾಗಿ, ದೂರದರ್ಶನ ಹತ್ತಿರವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು, ಧರ್ಮ ಮತ್ತು ಸಂಸ್ಕಾರ ಅಳವಡಿಸಿಕೊಂಡು ಧರ್ಮದ ಕಾರ್ಯದಲ್ಲಿ ಮುಂದಾಗಿರುವುದು ತುಂಬಾ ಸಂತೋಷದ ವಿಷಯ ಎಂದರು.

ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಸಮಾಜದಲ್ಲಿ ಶಾಂತಿ ನೆಮ್ಮದಿಗಾಗಿ, ಧರ್ಮ ದೇಗುಲಗಳ ಮೂಲಕ ಪೂಜೆ ಪುನಸ್ಕಾರಗಳು ನಿತ್ಯ ನಿರಂತರವಾಗಿ ನಡೆಯಬೇಕು. ಅಂತಹ ಧರ್ಮ ಪರಂಪರೆಯ ಗ್ರಾಮ ಇದಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ತತ್ವ ಇಲ್ಲಿನ ನಾಗರಿಕರು ಅಳವಡಿಸಿಕೊಂಡಿದ್ದಾರೆ ಎಂದರು.

ಗುಡ್ಡದ ಆನ್ವೇರಿ ಶಿವಯೋಗಿಶ್ವರ ಸ್ವಾಮೀಜಿ, ವಿಜಯಪುರದ ಪತ್ರಿಮಠದ ಶ್ರೀ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್​.ಆರ್​. ಪಾಟೀಲ, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಬಿಜೆಪಿ ಮುಖಂಡ ಎಂ.ಎಸ್​. ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಸವಣೂರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net