31ರಂದು ಬಸವೇಶ್ವರ ಜಯಂತಿ ಮಹೋತ್ಸವ

Published on

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಳ್ಳೇಗಾಲ ಘಟಕದಿಂದ ಆಯೋಜನೆ

ಕೊಳ್ಳೇಗಾಲ : ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಳ್ಳೇಗಾಲ ಘಟಕ, ಶ್ರೀ ಬಸವ ಜಯಂತಿ ಮಹೋತ್ಸವ ಸಮಿತಿ ಮತ್ತು ತಾಲೂಕು ವೀರಶೈವ ಲಿಂಗಾಯತ ಸಂಘ-ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಮೇ 31 ರಂದು ಬೆಳಗ್ಗೆ 9 ಗಂಟೆಗೆ ಜಗಜ್ಯೋತಿ ಶ್ರೀ ಬಸವೇಶ್ವರ 892ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಎಂಜಿಎಸ್‌ವಿ ಕಾಲೇಜು ಆವರಣದಲ್ಲಿ ಶ್ರೀ ಬಸವೇಶ್ವರ ಉತ್ಸವ ಕಾರ್ಯಕ್ರಮಕ್ಕೆ ಶ್ರೀ ಸುತ್ತೂರು ವೀರ ಸಿಂಹಾಸನ ಮಠಾಧ್ಯಕ್ಷ ಶ್ರೀ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಚಾಲನೆ ನೀಡಲಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನಂದಿಧ್ವಜ ಪೂಜೆ ನೆರವೇರಿಸಲಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಳ್ಳೇಗಾಲ ತಾಲೂಕು ಘಟಕ ಗೌರವಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಘನ ಉಪಸ್ಥಿತಿ ವಹಿಸಲಿದ್ದಾರೆ.

ಭವ್ಯ ಮೆರವಣಿಗೆ: ಚಿನ್ನದ ರಥದ ಮೇಲೆ ಶ್ರೀ ಬಸವೇಶ್ವರರ ಭಾವಚಿತ್ರವನ್ನಿರಿಸಿ ಹಲವು ಕಲಾ ತಂಡಗಳು ಹಾಗೂ ಜಾನಪದ ಕಲಾತಂಡಗಳೊಂದಿಗೆ ಬಸವೇಶ್ವರರ ಉತ್ಸವ ನಡೆಸಲಾಗುತ್ತಿದೆ. ಎಂಜಿಎಸ್‌ವಿ ಕಾಲೇಜು ಆವರಣದಿಂದ ಡಾ.ರಾಜ್ ಕುಮಾರ್ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸೆ ಮಾರ್ಗವಾಗಿ ಜೆಎಸ್‌ಎಸ್ ಮಹಿಳಾ ಕಾಲೇಜುವರೆಗೆ ಮೆರವಣಿಗೆ ಮಾಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಹರಗುರು ಚರ ಮೂರ್ತಿಗಳು, ಚುನಾಯಿತ ಪ್ರತಿನಿಧಿಗಳು, ರಾಜಕೀಯ ಮುಖಂಡರು ಹಾಗೂ ವೀರಶೈವ ಲಿಂಗಾಯತ ಸಮಾಜದ ಎಲ್ಲ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಮೆರವಣಿಗೆ ಬಳಿಕ ಮಧ್ಯಾಹ್ನ 1 ಗಂಟೆಗೆ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಪ್ರಸಾದ ವಿನಯೋಗ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net