ಬಸವೇಶ್ವರ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಇಂದು

Published on

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಕೆಂಡಗಣ್ಣಸ್ವಾಮಿ ಗದ್ದಿಗೆ ಬಳಿಯ ಸಂಜೀವಿನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮುಕ್ಕಣ್ಣೇಶ್ವರಸ್ವಾಮಿ ಮತ್ತು ಬಸವ ದೇವಸ್ಥಾನದ ಗದ್ದಿಗೆ ಉದ್ಘಾಟನೆ ಹಾಗೂ ಬಸವೇಶ್ವರ ವಿಗ್ರಹ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವು ಅ.29ರಂದು ನಡೆಯಲಿದೆ ಎಂದು ಗ್ರಾಮದ ಮುಖಂಡರಾದ ರಾಜ್ಯ ಸಹಕಾರಿ ತೋಟಗಾರಿಕೆ ಮಹಾಮಂಡಲದ ಮಾಜಿ ಉಪಾಧ್ಯಕ್ಷ ಸೂರ್ಯಕುಮಾರ್ ತಿಳಿಸಿದರು.

20 ವರ್ಷಗಳ ಹಿಂದೆ ಪಕ್ಕದ ಎಚ್.ಡಿ.ಕೋಟೆ ತಾಲೂಕಿನಿಂದ ಮೂರು ಕಣ್ಣು, ಮೂರು ಕೊಂಬಿನ ಬಸವನನ್ನು ಗದ್ದಿಗೆ ಕೆಂಡಗಣ್ಣಸ್ವಾಮಿ ದೇವಾಲಯಕ್ಕೆ ಬಿಟ್ಟಿದ್ದರು. ಸುತ್ತಮತ್ತಲಿನ ಗ್ರಾಮಸ್ಥರ ಪ್ರೀತಿ ಪಾತ್ರನಾಗಿದ್ದ ಈ ಬಸವ 2011 ಜು.7ರಂದು ಸಂಜೀವಿನಗರದಲ್ಲಿ ಸಾವನ್ನಪ್ಪಿತ್ತು. ಗ್ರಾಮಸ್ಥರ ಪ್ರೀತಿ ಪಾತ್ರನಾಗಿದ್ದ ಬಸವನಿಗೆ ದೇವಾಲಯ ನಿರ್ಮಿಸಲು ಹಾಗೂ ಬಸವನ ಪಂಚಲೋಹದ ವಿಗ್ರಹ ಪ್ರತಿಷ್ಠಾಪಿಸಲು ನಿರ್ಧರಿಸಿದ್ದಂತೆ ಗ್ರಾಮಸ್ಥರು ಹಾಗೂ ಭಕ್ತರ ನೆರವಿನಿಂದ ತಮಿಳುನಾಡಿನ ಕುಂಬಕೋಣಂನಸ್ವಾಮಿ ಮಲೈಯಲ್ಲಿ 26 ಲಕ್ಷ ರೂ. ವೆಚ್ಚದ 780 ಕೆಜಿಯ ಪಂಚಲೋಹದ ಬಸವನ ಪ್ರತಿಮೆ ನಿರ್ಮಿಸಿರುವ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಎರಡು ದಿನ ನಡೆಯುವ ಧಾರ್ಮಿಕ ಸಮಾರಂಭದ ಅಂಗವಾಗಿ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಯ.ಶಿವಣ್ಣನಾಯಕ, ಪಂಚಲಿಂಗರಾಜೇಅರಸ್, ಲಕ್ಷ್ಮಣ, ಸೋಮಶೆಟ್ಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net