ಬಸವೇಶ್ವರ ಬ್ಯಾಂಕ್‌ನ ಶತಮಾನೋತ್ಸವದ ಸಂಭ್ರಮಾಚರಣೆ ಸೆ. 24ರಂದು

Published on

ರಾಣೆಬೆನ್ನೂರ: ನಗರದಲ್ಲಿ 1924ರಲ್ಲಿ ಸ್ಥಾಪನೆಯಾದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಬ್ಯಾಂಕ್ ಇಂದು ಹೆಮ್ಮರವಾಗಿ ಬೆಳೆದಿದ್ದು, 100ನೇ ವರ್ಷಕ್ಕೆ ಪಾದರ್ಪಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸೆ. 24ರಂದು ಬ್ಯಾಂಕ್‌ನ ಶತಮಾನೋತ್ಸವದ ಸಂಭ್ರಮಾಚರಣೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಸಿ.ಆರ್. ಅಸುಂಡಿ ತಿಳಿಸಿದರು.
ನಗರದಲ್ಲಿ ಬುಧವಾರ ಬ್ಯಾಂಕ್‌ನ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ 12 ಜನ ಶೇರುದಾರರಿಂದ 1924 ಮಾರ್ಚ್ 7ರಂದು 5 ಸಾವಿರ ರೂ. ಬಂಡವಾಳದಿಂದ ಪ್ರಾರಂಭವಾದ ಬ್ಯಾಂಕ್ ಪ್ರಸ್ತುತ 1.81 ಕೋಟಿ ರೂ. ಶೇರು ಬಂಡವಾಳ ಹೊಂದಿರುವ ಸಾಧನೆ ಮಾಡಿದೆ.
ಬ್ಯಾಂಕ್‌ನ ಪ್ರಥಮ ಅಧ್ಯಕ್ಷರಾಗಿ ಕೊಟ್ರಬಸಪ್ಪ ಬಣಗಾರ ಹಾಗೂ ಕಾರ್ಯದರ್ಶಿಯಾಗಿ ಗೋಮಣಸಾ ಕಾಟವೆ ಕಾರ್ಯ ನಿರ್ವಹಿಸಿದ್ದರು. ನಂತರದ ದಿನಗಳಲ್ಲಿ ಕೊಟ್ರಪ್ಪ ಅನಿಶಟ್ರ, ಮಹಾಲಿಂಗಪ್ಪ ಅಂಕಲಕೋಟಿ, ಶಂಕ್ರಪ್ಪ ಸೂರಣಗಿ ಇವರುಗಳ ಅಧ್ಯಕ್ಷತೆ ಹಾಗೂ ದಕ್ಷ ಆಡಳಿತದಿಂದಾಗಿ ಸಾಕಷ್ಟು ಅಭಿವೃದ್ಧಿ ಹೊಂದಿತು.
ನಂತರದ ದಿನಗಳಲ್ಲಿ ಅಂದಾನಪ್ಪ ಅಸುಂಡಿ, ಬಸವರಾಜ ಆಲೂರ, ಶಿವಮೂರ್ತಪ್ಪ ಕಟ್ಟೀಮನಿ, ಮಹಾದೇವಪ್ಪ ಗವಳಿ, ಮಹಾಲಿಂಗಪ್ಪ ಬೇತೂರ, ವೀರಣ್ಣ ಜಂಬಗಿ, ಗೂಳಪ್ಪ ನರಸಗೊಂಡರ, ಗಾಯತ್ರಮ್ಮ ಕುರವತ್ತಿ, ಜಯಣ್ಣ ಜಂಬಗಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇವರ ಪೈಕಿ ಮಹಾದೇವಪ್ಪ ಗವಳಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಬ್ಯಾಂಕ್ ಬಹಳಷ್ಟು ಪ್ರವರ್ಧಮಾನಕ್ಕೆ ಬಂದಿದ್ದು ಅದನ್ನು ಬ್ಯಾಂಕ್‌ನ ಸುವರ್ಣಯುಗ ಎಂದು ಕರೆಯಬಹುದಾಗಿದೆ. 1963 ಜುಲೈ 25ರಂದು ಬ್ಯಾಂಕ್ ಸ್ವಂತ ಕಟ್ಟಡ ಹೊಂದಿದ್ದು ನಂತರ 2011 ಆಗಸ್ಟ್ 28ರಂದು ಈಗಿರುವ ಕಟ್ಟಡ ನವೀಕೃತಗೊಂಡಿತು.
ಪ್ರಸ್ತುತ ಬ್ಯಾಂಕ್‌ನ ವಾರ್ಷಿಕ ವಹಿವಾಟು 843.87 ಕೋಟಿ ರೂ.ಗೆ ತಲುಪಿದ್ದು 46.34 ಕೋಟಿ ರೂ. ಠೇವಣಿ, 39.81 ಕೋಟಿ ರೂ. ನಿವ್ವಳ ಉತ್ಪಾದಕ ಸಾಲ ಹೊಂದಿದೆ. 1.49 ಕೋಟಿ ರೂ. ಆದಾಯ ಗಳಿಸಿದ್ದು ಇದಕ್ಕೆ ಸಾರ್ವಜನಿಕರು, ಸದಸ್ಯರು ಪ್ರಮುಖ ಕಾರಣವಾಗಿದ್ದು ಸಿಬ್ಬಂದಿಯ ಪರಿಶ್ರಮ ಅಪಾರವಾಗಿದೆ ಎಂದರು.
ಬ್ಯಾಂಕ್‌ನ ನಿರ್ದೇಶಕರಾದ ಶಿವಾನಂದ ಸಾಲಗೇರಿ, ಮಂಜುನಾಥ ಓಲೇಕಾರ, ಚೋಳಪ್ಪ ಕಸವಾಳ, ಪರಮೇಶಪ್ಪ ಗವಳಿ, ಶಂಭುಲಿಂಗಪ್ಪ ಕಟಗಿಹಳ್ಳಿ, ಬಸವರಾಜ ತಾವರಗೊಂದಿ, ಬಸವಣ್ಣೆಪ್ಪ ಬಳ್ಳಾರಿ, ಸರೋಜಾ ಅಜ್ಜೇವಡಿಮಠ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net