ಬಸವರಾಜ ಬೊಮ್ಮಾಯಿ ಆದ ನಾನು...: ಇಂದು 11ಕ್ಕೆ ಮುಖ್ಯಮಂತ್ರಿ ಆಗಿ ಪ್ರಮಾಣ, ಯಡಿಯೂರಪ್ಪ ಆಯ್ಕೆಗೆ ವರಿಷ್ಠರ ಮಣೆ..

front
ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಧಮೇಂದ್ರ ಪ್ರಧಾನ್ ಅಭಿನಂದಿಸಿದರು. ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶ್ರೀರಾಮುಲು ಇದ್ದರು.
Published on

ಬೆಂಗಳೂರು: ರಾಜಕೀಯ ಆಳ-ಅಗಲ ಅರಿತ, ರಾಜಕೀಯ ಪಟ್ಟುಗಳ ನಿಪುಣ, 61 ವರ್ಷದ , ಹಾವೇರಿ ಜಿಲ್ಲೆ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ನಾಡಿನ 23ನೇ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಮಂಗಳವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿ.ಎಸ್. ಯಡಿಯೂರಪ್ಪ ಉತ್ತರಾಧಿಕಾರಿ ಆಯ್ಕೆ ಪೂರ್ವ ನಿಗದಿತ ಪ್ರಕ್ರಿಯೆಯಂತೆ ಸಲೀಸಾಗಿ ನಡೆದುಹೋದರೆ, ಪವಾಡದ ನಿರೀಕ್ಷೆಯಲ್ಲಿದ್ದವರಿಗೆ ಹಾಗೂ ಸಿಎಂ ಗಾದಿಯ ಕನಸು ಕಾಣುತ್ತಿದ್ದವರಿಗೆ ನಿರಾಸೆ ಕಾದಿತ್ತು.

ರಾಜಕೀಯ ಪ್ರಭಾವಕ್ಕಿಂತ ವೈಯಕ್ತಿಕ ನಡವಳಿಕೆಗೆ ಅಧಿಕಾರ ಅರಸಿ ಬಂದಿರುವಂತೆ ಗೋಚರಿಸಿದೆ. ಮೂರು ದಶಕದ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಆರ್. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ರಾಜ್ಯ ಮುನ್ನಡೆಸುವ ಅವಕಾಶ ಪಡೆದುಕೊಂಡಿದ್ದಾರೆ. ಇನ್ನೊಂದು ಮಗ್ಗುಲಲ್ಲಿ ನೋಡುವುದಾದರೆ, ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಅವರ ಯುಗಾಂತ್ಯವಾಯಿತು ಎಂದುಕೊಂಡವರಿಗೆ ಉತ್ತರಾಧಿಕಾರಿ ಆಯ್ಕೆ ರೂಪದಲ್ಲಿ ಫಿನಿಕ್ಸ್​ನಂತೆ ಮೇಲೆದ್ದು ಬಂದಿರುವುದು ಕಾಣಿಸುತ್ತದೆ. ಜತೆಗೆ ಇದು ವರಿಷ್ಠರು ಬಿಎಸ್​ವೈ ರಾಜಕೀಯ ಹಿರಿತನಕ್ಕೆ ಕೊಟ್ಟ ಬಳುವಳಿ ಎಂದೂ ಸಹ ಭಾವಿಸಬಹುದಾಗಿದೆ.

ಪ್ರಕ್ರಿಯೆ ಹೇಗಿತ್ತು?: ವೀಕ್ಷಕರಾಗಿ ದೆಹಲಿಯಿಂದ ಆಗಮಿಸಿದ್ದ ಧಮೇಂದ್ರ ಪ್ರಧಾನ್ ಅವರು ನೂತನ ಶಾಸಕಾಂಗ ಪಕ್ಷದ ನಾಯಕ ಆಯ್ಕೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಜತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಸಕಾಂಗ ಪಕ್ಷದ ನೂತನ ನಾಯಕನ ಹೆಸರು ಪ್ರಸ್ತಾಪಿಸುತ್ತಾರೆಂದು ಪ್ರಕಟಿಸಿದರು. ಬಳಿಕ ಬಿಎಸ್​ವೈ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಹಾಗೂ ಮುಂದಿನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರನ್ನು ಸೂಚಿಸುತ್ತೇನೆಂದು ಪ್ರಕಟಿಸಿದರು. ಮುಂದಿನ ಪ್ರಕ್ರಿಯೆಯಾಗಿ ಹಿರಿಯ ಮುಖಂಡರಾದ ಗೋವಿಂದ ಕಾರಜೋಳ, ಆರ್.ಅಶೋಕ್, ಕೆ.ಎಸ್.ಈಶ್ವರಪ್ಪ, ಎಸ್.ಟಿ. ಸೋಮಶೇಖರ್, ಪೂರ್ಣಿಮಾ ಅನುಮೋದಿಸಿದರು. ಪ್ರಕ್ರಿಯೆ ಅಂತಿಮಗೊಳ್ಳುತ್ತಿದ್ದಂತೆ ಸಭೆಯಲ್ಲಿದ್ದ ಶಾಸಕರು ಕರತಾಡನ ಮಾಡಿ ಅನುಮೋದಿಸಿದರು. ಈ ಸಭೆಗೆ ಮುನ್ನ ಬಿಜೆಪಿ ಕಚೇರಿಯಲ್ಲಿ ವೀಕ್ಷಕರಾದ ಧರ್ವೆಂದ್ರ ಪ್ರಧಾನ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆದಿತ್ತು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಜತೆಗಿದ್ದರು. ಅಲ್ಲಿಂದ ಕುಮಾರ ಕೃಪದಲ್ಲೂ ಸಹ ಸಭೆ ನಡೆದಿತ್ತು. ಆ ವೇಳೆಗಾಗಲೇ ಮುಂದಿನ ಪ್ರಕ್ರಿಯೆ ಹೇಗೆ ನಡೆಯಬೇಕೆಂಬ ಬಗ್ಗೆ ವೀಕ್ಷಕರು ನಿರ್ದೇಶನ ನೀಡಿದ್ದರು. ನಂತರ ನಡೆದ ಕೋರ್ ಕಮಿಟಿ ಸಭೆಯಲ್ಲಿ ಆಯ್ಕೆ ಬಹುತೇಕ ಅಂತಿಮವಾಗಿತ್ತು. ಅಲ್ಲಿಂದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಧಿಕೃತವಾಗಿ ಆಯ್ಕೆ ಮಾಡಲಾಯಿತು.

ಬಿಎಸ್​ವೈ ಬೌನ್ಸರ್: ನಾಯಕತ್ವ ಬದಲಾವಣೆ ಬಗ್ಗೆ ದನಿ ಎತ್ತಿ ದೆಹಲಿಯಲ್ಲಿ ಕೈಯಾಡಿಸುತ್ತಿದ್ದವರಿಗೆ ಬಿಎಸ್​ವೈ ಬೌನ್ಸರ್ ಎಸೆದಿದ್ದಾರೆ ಎಂಬ ವಿಶ್ಲೇಷಣೆ ರಾಜಕೀಯ ವಲಯದಲ್ಲಿದೆ. ಬೊಮ್ಮಾಯಿ ಆಯ್ಕೆಯನ್ನು ತಿರಸ್ಕರಿಸುವ ಕಾರಣ ಕಡಿಮೆ. ಉತ್ತರ ಕರ್ನಾಟಕ ಮಂದಿ, ಪ್ರಬಲ ವೀರಶೈವ ಲಿಂಗಾಯತ ಸಮುದಾಯದ ನಂಟು, ರಾಜಕೀಯ ಅನುಭವ ಎಲ್ಲವೂ ಅವರಲ್ಲಿದೆ. ಒಂದು ಮಾತಲ್ಲಿ ವಿಶ್ಲೇಷಿಸುವುದಾದರೆ, ‘ಬಿಎಸ್​ವೈ ವಿರೋಧಿಗಳು ಪರೀಕ್ಷೆಯಲ್ಲಿ ಪಾಸಾದರು, ಸಿಇಟಿಯಲ್ಲಿ ಮುಗ್ಗರಿಸಿದರು’.

ಅನುಕೂಲಕರ ಅಂಶ: ಅಭಿವೃದ್ಧಿ, ಆಡಳಿತ ಸರಿದೂಗಿಸುವ, ಆರ್ಥಿಕ ಬಿಕ್ಕಟ್ಟು, ಪ್ರಾಕೃತಿಕ ಹಾಗೂ ಸಾಂಕ್ರಾಮಿಕ ಸಂಕಷ್ಟ ನಿರ್ವಹಣೆ ವಿಚಾರದಲ್ಲಿ ಬೊಮ್ಮಾಯಿ ಅವರಿಗೆ ಸ್ವಾನುಭವ ಜತೆಗೆ ಬಿಎಸ್​ವೈ ಸಾಥ್ ಕೂಡ ನೆರವಾಗಲಿದೆ. ಸಾಲುಗಟ್ಟಿ ಬರಲಿರುವ ಉಪ ಚುನಾವಣೆ, ವಿಧಾನ ಪರಿಷತ್, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಜತೆಯಲ್ಲಿ 2023 ಮತ್ತು 2024ರ ಚುನಾವಣೆಯಲ್ಲಿ ಪಕ್ಷದ ಮೇಲುಗೈ ಸಾಧಿಸುವಂತೆ ನೋಡಿಕೊಳ್ಳಬೇಕಿರುವುದು ಬೊಮ್ಮಾಯಿಗಿಂತಲೂ ಬಿಎಸ್​ವೈಗೆ ಕೂಡ ಈಗ ಅಗ್ನಿ ಪರೀಕ್ಷೆ. ಯಡಿಯೂರಪ್ಪ ಇಚ್ಛೆಯಂತೆ ಸಿಎಂ ಆಯ್ಕೆಯಾಗಿದೆ. ಬೊಮ್ಮಾಯಿ ಕಾಪಾಡಿಕೊಳ್ಳುವ ಅವಶ್ಯಕತೆ ಕೂಡ ನಿರ್ಗಮಿತ ಸಿಎಂಗಿದೆ. ಇದೇ ವೇಳೆ ಸರ್ವಾನುಮತದ ಆಯ್ಕೆ ನೂತನ ನಾಯಕನ ಹೊಣೆಯನ್ನು ಹೆಚ್ಚಿಸಿದೆ. ಆರ್ಥಿಕ ಇತಿಮಿತಿಯ ನಡುವೆ ಆಡಳಿತ ಪಕ್ಷದ ಶಾಸಕರ ನಿರೀಕ್ಷೆ ಕೂಡ ಹೆಚ್ಚಿದೆ. ಅದರ ಅರಿವೂ ಅವರಿಗಿದೆ. ಪ್ರಸ್ತುತ ಕೋರಿಕೆಗಳನ್ನು ಸರಿದೂಗಿಸುವುದೇ ಅವರ ಮೇಲಿರುವ ದೊಡ್ಡ ಸವಾಲು. ಹಾಗೆಯೇ, ಮೇಕೆದಾಟು, ಕಳಸಾ-ಬಂಡೂರಿ, ಭದ್ರಾ ಮೇಲ್ದಂಡೆ, ಕೃಷ್ಣಾ ಎರಡನೇ ಐತೀರ್ಪ ಅಂತಿಮ ಅಧಿಸೂಚನೆ ವಿಚಾರದಲ್ಲಿ ಬೊಮ್ಮಾಯಿ ಮೇಲೆ ಹೆಚ್ಚಿನ ನಿರೀಕ್ಷೆಯ ಭಾರವಿದೆ.

ಔಟ್​ ಆಫ್ ದಿ ಬಾಕ್ಸ್

  1. ವ್ಯಕ್ತಿ ಹೇಗೆ?: ಸೀದಾಸಾದ ಮನುಷ್ಯ. ಸ್ನೇಹ ಜೀವಿ, ಸೌಜನ್ಯಯುತ ನಡವಳಿಕೆ
  2. ರಾಜಕೀಯ ಅನುಭವ?: ಜೆ.ಎಚ್.ಪಟೇಲ್ ರಾಜಕೀಯ ಕಾರ್ಯದರ್ಶಿಯಾಗಿ, ಬಳಿಕ ಜಲಸಂಪನ್ಮೂಲ, ಗೃಹ ಖಾತೆ ನಿಭಾಯಿಸಿದ ಛಾತಿ.
  3. ಸ್ಪೆಷಲಿಸ್ಟ್: ನೀರಾವರಿ ಯೋಜನೆಗಳು, ಜಲ ವಿವಾದದ ಬಗ್ಗೆ ಅಗಾಧ ಅನುಭವ. ಈಗ ಜಿಎಸ್ಟಿ ಕೌನ್ಸಿಲ್ ಪ್ರತಿನಿಧಿಸುತ್ತಿದ್ದಾರೆ. ಹಣಕಾಸಿನ ಜ್ಞಾನ
  4. ಆಡಳಿತ ಕಲಿಕೆ: ಬೇರೆಯವರನ್ನು ಆಯ್ಕೆ ಮಾಡಿದ್ದರೆ ಕಲಿತುಕೊಳ್ಳುವ ಅನಿವಾರ್ಯತೆ ಇತ್ತು, ಸಮಯವೂ ಹಿಡಿಯುತ್ತಿತ್ತು. ಇವರು ರೆಡಿ ಫುಡ್ ಇದ್ದಂತೆ.
  5. ಸಂವಹನ: ಇಂಗ್ಲಿಷ್ ಚೆನ್ನಾಗಿ ಬಲ್ಲರು. ಕನ್ನಡದ ಮೇಲೂ ಹಿಡಿತವಿದೆ. ಹಿಂದಿಯೂ ಬಲ್ಲರು. ವರಿಷ್ಠರೊಂದಿಗೆ ಸಂವಹನಕ್ಕೆ ಅಡ್ಡಿಯೂ ಆಗದು.
  6. ಪಳಗಿದ ತಂತ್ರಗಾರಿಕೆ: ತಮ್ಮ ತಂದೆ ಕಾಲದಿಂದ ರಾಜಕೀಯ ನಾಯಕರು ಮಾಡಿಕೊಂಡ ತಪ್ಪು-ಒಪ್ಪುಗಳ ಸ್ಪಷ್ಟ ಅರಿವಿದೆ. ಅವು ಈಗ ಅನುಭವ ಪಾಠವಾಗಲಿಕ್ಕೂ ಸಾಕು.

113 ಶಾಸಕರಷ್ಟೇ ಹಾಜರಿ: ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆಗಾಗಿ ನಡೆದ ಸಭೆಯಲ್ಲಿ ಐದು ಶಾಸಕರು ಕೈಕೊಟ್ಟಿದ್ದರು. ಸ್ಪೀಕರ್ ಸೇರಿದಂತೆ ಒಟ್ಟು ಬಿಜೆಪಿ ಸದಸ್ಯರ ಬಲ 119. ಆದರೆ, 113 ಶಾಸಕರಷ್ಟೇ ಸಭೆಯಲ್ಲಿ ಹಾಜರಿದ್ದರು. ಈ ಶಾಸಕರು ಗೈರಾಗಿದ್ದಕ್ಕೆ ಕಾರಣ ಗೊತ್ತಾಗಿಲ್ಲ. ತಮ್ಮ ಕ್ಷೇತ್ರದಿಂದ ಕಡಿಮೆ ಸಮಯಾವಕಾಶದಲ್ಲಿ ಬರಲಾಗದವರು ಬಂದಿರಲಿಕ್ಕಿಲ್ಲ ಬಿಜೆಪಿ ಮುಖಂಡರೊಬ್ಬರು ತಿಳಿಸಿದರು. ತಡಮಾಡದಂತೆ ನಡೆದ ಪ್ರಕ್ರಿಯೆ: ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ಮತ್ತು ಮುಂದಿನ ಹಂತಗಳ ವಿಚಾರದಲ್ಲಿ ಫಟಾಫಟ್ ನಿರ್ಧಾರವಾಗಿವೆ. ದೆಹಲಿಯಿಂದ ಆಗಮಿಸಿದ ವರಿಷ್ಠರ ನಿಯೋಜಿತ ವೀಕ್ಷಕರು ಎರಡು ಸಭೆ ನಡೆಸಿ, ಶಾಸಕಾಂಗ ಪಕ್ಷದ ನಾಯಕನನ್ನೂ ಆಯ್ಕೆ ಮಾಡಿ ರಾಜಭವನಕ್ಕೂ ಎಲ್ಲರನ್ನೂ ಒಟ್ಟಿಗೆ ಕಳಿಸಿದರು. ತಮಗೆ ಪಕ್ಷದ ಎಲ್ಲಾ ಶಾಸಕರ ಬೆಂಬಲ ಇರುವ ಪತ್ರವನ್ನು ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ಕೈಗಿತ್ತ ಬಸವರಾಜ ಬೊಮ್ಮಾಯಿ, ಪ್ರಮಾಣ ವಚನ ಸ್ವೀಕರಿಸಲು ಕೋರಿದರು. ರಾಜ್ಯಪಾಲರು ಸಹ ಕೋರಿಕೆಗೆ ಒಪ್ಪಿದರು. ಬುಧವಾರ ಬೆಳಗ್ಗೆಯೇ ಪ್ರಮಾಣ ವಚನ ಸಮಾರಂಭ ಎಂಬುದೂ ಅಲ್ಲೇ ನಿರ್ಧಾರವಾಯಿತು.

ಸಿಎಂ ಮುಂದೆ ಸವಾಲು

  • ಸರ್ಕಾರ, ಪಕ್ಷದ ನಡುವೆ ಸಮನ್ವಯ ಸಾಧಿಸಬೇಕು
  • ಎಲ್ಲ ಶಾಸಕರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಬೇಕು
  • ಬೊಕ್ಕಸ ಭರ್ತಿ ಮಾಡುವ ಕಡೆ ಗಮನ ಹರಿಸಬೇಕು
  • ಕೇಂದ್ರದಿಂದ ಬಾಕಿ ಇರುವ ಹಣ ತರಲು ಪ್ರಯತ್ನಿಸಬೇಕು
  • ರಾಜ್ಯದ ಆಡಳಿತವನ್ನು ಸರಿಯಾದ ಹಳಿಗೆ ತರಬೇಕು
  • ಪ್ರಾದೇಶಿಕ ಅಸಮತೋಲನ ನಿವಾರಣೆ ಮಾಡಬೇಕು
  • ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಬೇಕು
  • ಹೂಡಿಕೆ ಹರಿಸಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸಬೇಕು
  • ವರ್ಗಾವಣೆ ದಂಧೆಗೆ ಕಡಿವಾಣ ಹಾಕಲೇಬೇಕು
  • ಮುಂದಿನ ಚುನಾವಣೆಗೆ ಪಕ್ಷ ಸಜ್ಜುಗೊಳಿಸಬೇಕು
  • ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರಬೇಕು
  • ಪ್ರತಿಪಕ್ಷಗಳನ್ನು ನಿಭಾಯಿಸಬೇಕು
  • ಎಲ್ಲ ಜಾತಿ, ಧರ್ಮಗಳಿಗೆ ಆದ್ಯತೆ ನೀಡಿ ಬಿಜೆಪಿಗೆ ಸೆಳೆಯಬೇಕು

ಕಾರಜೋಳ, ಅಶೋಕ್, ರಾಮುಲು ಡಿಸಿಎಂ?: ಲಿಂಗಾಯತ ಸಮುದಾಯದ ಬೊಮ್ಮಾಯಿ ಸಿಎಂ ಆಗಿರುವುದರಿಂದ ಪರಿಶಿಷ್ಟ ಜಾತಿಯಿಂದ ಗೋವಿಂದ ಕಾರಜೋಳ, ಒಕ್ಕಲಿಗ ಸಮುದಾಯದಿಂದ ಆರ್. ಅಶೋಕ್ ಹಾಗೂ ಪರಿಶಿಷ್ಟ ಪಂಗಡದಿಂದ ಬಿ. ಶ್ರೀರಾಮುಲುಗೆ ಡಿಸಿಎಂ ಅವಕಾಶ ನೀಡುವ ಸಾಧ್ಯತೆ ಇದೆ.

ಮೆತ್ತಗಾದ ಆಕಾಂಕ್ಷಿಗಳು: ಅಂತಿಮ ಕ್ಷಣದಲ್ಲಿ ನಮಗೂ ಅವಕಾಶ ಸಿಗಬಹುದು ಎಂದು ಮುರುಗೇಶ್ ನಿರಾಣಿ, ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ್ದರು. ಆದರೆ, ಸಭೆಗೆ ಮುನ್ನವೇ ಬೊಮ್ಮಾಯಿ ಹೆಸರು ಅಂತಿಮಗೊಂಡಿದೆ ಎಂಬ ಸುದ್ದಿ ತಿಳಿದು ಮೆತ್ತಗಾದರು, ಬೊಮ್ಮಾಯಿ ಸಹ ನಮ್ಮವರೇ ಎಂದು ಮಾಧ್ಯಮಗಳಿಗೆ ಅಭಿಪ್ರಾಯ ನೀಡಿದರು. ಯತ್ನಾಳ್ ಮಾತ್ರ ಸ್ವಲ್ಪ ಸಿಟ್ಟಿನಲ್ಲೇ ಕಂಡರು. ಸಭೆ ಮುಗಿಯುತ್ತಿದ್ದಂತೆ ಮೊದಲು ಎದ್ದು ಬಂದ ಅವರು ಮಾಧ್ಯಮಗಳ ಲೋಗೋಗಳನ್ನು ಪಕ್ಕಕ್ಕೆ ತಳ್ಳಿ ಸ್ಥಳದಿಂದ ಹೊರಟುಹೋದರು. ಸಭೆಗೆ ಬರುವ ಮುನ್ನ ನಮ್ಮನ್ನು ಬೆಂಬಲಿಸಿ ಎಂದು ನಿರಾಣಿ ಹಾಗೂ ಯತ್ನಾಳ್ ಕೆಲವು ಶಾಸಕರಿಗೆ ಕರೆ ಮಾಡಿ ಮನವಿ ಮಾಡಿದ್ದರೆಂಬುದು ವಿಶೇಷ ಸಂಗತಿ.

ಇಂದು ಪ್ರಮಾಣ: ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಬುಧವಾರ ಬೆಳಗ್ಗೆ 11ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಸವರಾಜ ಬೊಮ್ಮಾಯಿಗೆ ಎಲ್ಲರೂ ಸಹಕಾರ ಕೊಡಬೇಕು. ನಾಡಿನ ಜನ ಆಶೀರ್ವಾದ ಮಾಡಬೇಕು. ಮುಂದಿನ ಬಾರಿ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಗುರಿ ನಮ್ಮದು. ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಬೊಮ್ಮಾಯಿ ಆಯ್ಕೆ ಸರ್ವಾನುಮತದಿಂದ ಆಗಿದೆ. ಇಂತಹ ಪ್ರಕ್ರಿಯೆ ಬಿಜೆಪಿಯಲ್ಲಷ್ಟೇ ಸಾಧ್ಯ. | ಬಿ.ಎಸ್.ಯಡಿಯೂರಪ್ಪ ಹಂಗಾಮಿ ಸಿಎಂ ಯಡಿಯೂರಪ್ಪ ಅವರೇ ಆಶೀರ್ವದಿಸಿ ನನ್ನ ಹೆಸರು ಘೋಷಿಸಿದ್ದಾರೆ. ಅವರ ನಿರೀಕ್ಷೆಗಳನ್ನು ಈಡೇರಿಸುತ್ತೇನೆ. ನನ್ನನ್ನು ಆಯ್ಕೆ ಮಾಡಿದ ಹಾಗೂ ಅನುಮೋದಿಸಿದ ಎಲ್ಲರಿಗೂ ಧನ್ಯವಾದಗಳು. ಜನಪರ ಕೆಲಸ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತೇನೆ. ಉತ್ತಮ ಆಡಳಿತ ಕೊಡುವ ಮೂಲಕ ಅಭಿವೃದ್ಧಿಯತ್ತ ಸಾಗೋಣ. | ಬಸವರಾಜ ಬೊಮ್ಮಾಯಿ ನಿಯೋಜಿತ ಸಿಎಂ

ಬೊಮ್ಮಾಯಿಯೇ ಏಕೆ?

  • ಮಾಜಿ ಸಿಎಂ ಯಡಿಯೂರಪ್ಪ ಆಪ್ತ, ಬಿಎಸ್​ವೈ ವಿಶ್ವಾಸ ಉಳಿಸಿಕೊಳ್ಳುವ ತಂತ್ರ
  • ರಾಜ್ಯದ ಪ್ರಬಲ ಲಿಂಗಾಯತ ಸಮುದಾಯದ ನಾಯಕ, ಸಮುದಾಯ ಪಕ್ಷವನ್ನು ಕೈಬಿಟ್ಟು ಹೋಗದಂತೆ ಹಿಡಿದಿಟ್ಟುಕೊಳ್ಳುವ ಪ್ರಯತ್ನ
  • ಉತ್ತರ ಕರ್ನಾಟಕದ ಪ್ರಭಾವಿ ಮುಖಂಡ, ಮಂತ್ರಿಯಾಗಿ ಅನುಭವ, ಬಿಎಸ್​ವೈ ಮತ್ತು ಹೈಕಮಾಂಡ್ ನಡುವೆ ಸಮನ್ವಯ ಸಾಧಿಸುವ ವಿಶ್ವಾಸ
  • ಸರಳ, ಸಜ್ಜನಿಕೆ, ವಿವಾದ ರಹಿತ ವ್ಯಕ್ತಿತ್ವ
  • ಜಲಸಂಪನ್ಮೂಲ, ಗೃಹ ಖಾತೆಗಳನ್ನು ಸರಾಗವಾಗಿ ನಿಭಾಯಿಸಿದ ಅನುಭವ
  • ಬಿ.ಎಲ್.ಸಂತೋಷ್ ಜತೆಗೂ ಉತ್ತಮ ಬಾಂಧವ್ಯ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ವಿಶ್ವಾಸ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net