

ನಂಜನಗೂಡು: ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರ ಜಯಂತಿ ಜಾತ್ಯತೀತ, ಪಕ್ಷಾತೀತವಾಗಿ ಆಚರಣೆ ಅಗತ್ಯ. ಬಸವಣ್ಣನವರ ಸ್ಮರಣೆಯನ್ನ ಎಲ್ಲರೂ ದಿನನಿತ್ಯ ಮಾಡಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ನಂಜನಗೂಡು ಪಟ್ಟಣದ ತಾಲೂಕು ಕಚೇರಿ ಅವರಣದಲ್ಲಿ ಬುಧವಾರ ಸಾಂಸ್ಕೃತಿಕ ನಾಯಕ, ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಕಾಯಕ ಮತ್ತು ದಾಸೋಹದ ಬಗ್ಗೆ ಬಸವಣ್ಣನವರು ವಿಶ್ವಕ್ಕೆ ತಿಳಿಸಿಕೊಟ್ಟರು. ಕಾಯಕವೇ ಕೈಲಾಸ ಎಂಬ ನಾಣ್ಣುಡಿಯೊಂದಿಗೆ ನಾವು ಮಾಡುವ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ಅವರಿಗೆ ಗೌರವ ಸಮರ್ಪಣೆ ಮಾಡಿದಂತಾಗುತ್ತದೆ. ಏನನ್ನೂ ಬಯಸದೆ ಸೇವೆ ಮಾಡಿದಾಗ ಮಾತ್ರ ಅವರ ಹಾದಿಯಲ್ಲಿ ಸಾಗಿದಂತೆ ಆಗುತ್ತದೆ. ಇಡೀ ವಿಶ್ವದಲ್ಲಿ ಮೊದಲನೇ ವಚನ ಸಂಸತ್ ಸ್ಥಾಪಿಸಿದವರು ಬಸವಣ್ಣನವರು. ಸಮಾನತೆಯ ವೇದಿಕೆಯನ್ನು ಸ್ಥಾಪಿಸಿ, ಸಮಾಜದ ಸುಧಾರಣೆ ಬಗ್ಗೆ ಚಿಂತನೆ ಮಾಡಿ ವಿಶ್ವದ ಅನುಭವ ಮಂಟಪ ಮಾಡಿದ ಹೆಗ್ಗಳಿಕೆ ಅವರದ್ದು. ಎಂದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾ ಅಧ್ಯಕ್ಷ ಎನ್.ಶ್ರೀಕಂಠ, ಉಪಾಧ್ಯಕ್ಷ ರಿಹಾನ ಬಾನು, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಕುರಹಟ್ಟಿ ಮಹೇಶ್, ಚೆನ್ನಪ್ಪ, ತಹಸೀಲ್ದಾರ್ ಶಿವಕುಮಾರ್ ಕಾಸನೂರು, ಜರಾಲ್ಡ್ ರಾಜೇಶ್, ರಾಜಣ್ಣ, ಮಾರುತಿ, ಶೋಭಾ ನಾಗಶಯನ, ಹುಲ್ಲಹಳ್ಳಿ ಮಾದಪ್ಪ, ಮಹೇಶ್, ಗಾಯತ್ರಿ ಮೋಹನ್, ನಾಗೇಶ್‌ರಾಜ್, ಶಿವಪ್ಪ ದೇವರು, ಖಾದರ್ ಸೇರಿದಂತೆ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಹಾಜರಿದ್ದರು.