

ಶಿಕಾರಿಪುರ: ಹನ್ನೆರಡನೇ ಶತಮಾನವೆಂದರೆ ಸಾಮಾಜಿಕ ಕಳಕಳಿ, ಕಾಯಕ, ದಾಸೋಹ, ಸಹಬಾಳ್ವೆ ನಾಡಿನಾದ್ಯಂತ ಮೊಳಗಿದ ಕಾಲ. ಅಂದಿನ ಬಸವಾದಿ ಶರಣರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ತೊಗರ್ಸಿ ಮಳೆಹಿರೇಮಠದ ಶ್ರೀ ಮಹಾಂತ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕು ಆಡಳಿತ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಬಸವೇಶ್ವರರು ಈ ನಾಡಿನಲ್ಲಿ ಸಮಾನತೆಯ ಹೊಸ ಇತಿಹಾಸ ಬರೆದವರು ಎಂದು ಬಣ್ಣಿಸಿದರು.
ಎಲ್ಲೆಡೆ ತುಂಬಿ ತುಳುಕುತ್ತಿದ್ದ ಮೌಢ್ಯ, ಜಾತೀಯತೆ, ಮೇಲು-ಕೀಳು ಎಂಬ ಭಾವನೆ ವಿರುದ್ಧ ಚಳವಳಿ ಹುಟ್ಟು ಹಾಕಿದರು. ಅವರ ಮೊದಲ ವಾಕ್ಯವೇ ಮನದ ಮಲಿನ ತೊಳೆದುಕೊಳ್ಳಿ, ಪ್ರೀತಿ ವಿಶ್ವಾಸದ ಕಂಗಳಿಂದ ಸಮಾಜವನ್ನು ನೋಡಿ. ಜಗತ್ತೇ ನಿಮಗೆ ಬಂಧುವಾಗಿ ಕಾಣುತ್ತದೆ ಎನ್ನುವುದು. ಆ ವಾಕ್ಯದಂತೆಯೇ ತಮ್ಮ ಬದುಕನ್ನು ನಡೆಸಿದರು ಎಂದರು.
ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಮಾತನಾಡಿ, ಬಸವೇಶ್ವರರು ನಮ್ಮ ನಾಡಿನ ಸಾಂಸ್ಕೃತಿಕ ನಾಯಕ. ಅವರು ಸಾರಿದ ಸಂದೇಶಗಳನ್ನು ಇಂದು ನಾವು ಪಾಲಿಸಬೇಕು. ಹೊಸ ಸಮಾಜ ನಿರ್ಮಾಣದ ಕಡೆಗೆ ಹೆಜ್ಜೆ ಹಾಕಿದ್ದರು. ಇಂತಹ ಶರಣ ಬಸವೇಶ್ವರರನ್ನು ನಾವು ನಿತ್ಯ ಸ್ಮರಿಸಬೇಕು ಎಂದು ತಿಳಿಸಿದರು.
ತಿಪ್ಪಾಯಿಕೊಪ್ಪ ಮತ್ತು ಸುರಗಿಹಳ್ಳಿ ಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಬಸವಣ್ಣನ ಸಂಸತ್ತು ಎಂದರೆ ಅದು ಮನುಕುಲದ ಒಳಿತಿನ ಸಂಸತ್ತು. ಮೌಢ್ಯಗಳನ್ನು ಬದಿಗೊತ್ತು ನಂಬಿಕೆ, ವಿಶ್ವಾಸದ ಜತೆಗೆ ಪ್ರೀತಿಯನ್ನು ಧಾರೆಯೆರೆದ ಸಂಸತ್ತು. ಅಲ್ಲಿ ಪ್ರತಿ ಜಾತಿಗಳ ಪ್ರತಿನಿಧಿಗಳಿದ್ದರು. ಹೃದಯ ಶ್ರೀಮಂತಿಕೆಯಿತ್ತು. ಶರಣತ್ವ ಪ್ರಕಾಶಿಸುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ಸಾಲೂರು ಹಿರೇಮಠದ ಶ್ರೀ ಗುರುಲಿಂಗ ಜಂಗಮ ಶಿವಾಚಾರ್ಯರು ಮಾತನಾಡಿ, ಬಸವನೆಂದರೆ ಪಾಪ ದೆಸೆಗೆಟ್ಟು ಪೋಪುದು, ಪುಣ್ಯ ಬಪ್ಪುದು. ಬಸವನ ಸ್ಮರಣೆಯಿಂದ ಮನಸು ಪರಿಶುದ್ಧವಾಗುತ್ತದೆ. ನಮಗರಿವಿಲ್ಲದಂತೆ ನಮ್ಮಲ್ಲಿ ಸಾಮಾಜಿಕ ಕಳಕಳಿ ಹಾಗೂ ಶರಣತ್ವ ಆವರಿಸುತ್ತದೆ ಎಂದರು.
ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಸುಧೀರ್ ಮಾರವಳ್ಳಿ ಮಾತನಾಡಿ, ವೀರಶೈವ ಲಿಂಗಾಯತ ಸಮಾಜ ಯಾವತ್ತೂ ಸಮಾಜಮುಖಿಯಾದ ಸ್ವಾಭಿಮಾನಿ ಸಮಾಜ. ಬಸವಾದಿ ಶರಣರು ಈ ಸಮಾಜವನ್ನು ಕಾಲಕಾಲಕ್ಕೆ ಸದೃಢಗೊಳಿಸಿದ್ದಾರೆ. ಸಮಾಜಕ್ಕೆ ವೀರಶೈವ ಮಠಗಳ ಕೊಡುಗೆ ಅನನ್ಯ ಎಂದು ಹೇಳಿದರು.
ಶ್ರೀ ಅಕ್ಕಮಹಾದೇವಿ ಸರ್ಕಲ್ನಿಂದ ಹೊರಟ ಬಸವ ಜಯಂತಿ ಮೆರವಣಿಗೆಯು ವೀರಗಾಸೆ, ಮಂಗಳವಾದ್ಯ, ಡೊಳ್ಳು, ಭಜನೆ ಮತ್ತು ಸಾಂಪ್ರದಾಯಿಕ ವಾದ್ಯ ಘೋಷದೊಂದಿಗೆ ಸಾಗಿತು. ರಾಜ್ಯ ಹೆದ್ದಾರಿ ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಶಿವಮೊಗ್ಗ ರಸ್ತೆಯಲ್ಲಿ ಹೊಸ ಸಂತೆ ಮೈದಾನದ ಮುಂಭಾಗದಲ್ಲಿರುವ ಶ್ರೀ ಬಸವೇಶ್ವರ ಪುತ್ಥಳಿ ಇರುವ ಸ್ಥಳವನ್ನು ತಲುಪಿತು.
ಉಪತಹಸೀಲ್ದಾರ್ ವಿನಯ್ ಆರಾಧ್ಯ, ರವಿಕುಮಾರ್, ಕೃಷಿ ಸಹಾಯಕ ನಿರ್ದೇಶಕ ಕಿರಣ್‌ಕುಮಾರ್ ಹರ್ತಿ, ಪುರಸಭೆ ಕಚೇರಿ ವ್ಯವಸ್ಥಾಪಕ ರಾಜ್‌ಕುಮಾರ್, ವೀರಶೈವ ಸಮಾಜದ ಬಿ.ಡಿ.ಭೂಕಾಂತ್, ಗಿರೀಶ್, ನಿರಂಜನ್, ಶಶಿಧರ್ ಸ್ವಾಮಿ, ಯೋಗೀಶ್, ನಿವೇದಿತಾ ರಾಜು, ಪುರಸಭೆ ಮಾಜಿ ಅಧ್ಯಕ್ಷೆ ಶೈಲಾ ಮಡ್ಡಿ ಇತರರಿದ್ದರು.