

ಶಿವಮೊಗ್ಗ: ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶದಿಂದ ಬಸವ ಸಂಗಮ ಎಂಬ ಸಂಘಟನೆ ಆರಂಭಿಸಲಾಗುತ್ತಿದೆ. ಇದರ ಮೊದಲ ಕಾರ್ಯಕ್ರಮವಾಗಿ ಆ.16ರ ಸಂಜೆ 4ಕ್ಕೆ ಗಾಂಧಿ ಪಾರ್ಕ್ ಎದುರಿನ ಬಸವೇಶ್ವರ ಪ್ರತಿಮೆ ಬಳಿಯಿಂದ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಒಂದು ಲಾರಿ ಅಕ್ಕಿ ಕಳುಹಿಸಲಾಗುವುದು ಎಂದು ಬಸವ ಸಂಗಮದ ಅಧ್ಯಕ್ಷ ಚೇತನ್ ಕುಮಾರ್ ದುಮ್ಮಳ್ಳಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವಕೇಂದ್ರದ ಶ್ರೀ ಡಾ.ಬಸವ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ವೀರಶೈವ, ಲಿಂಗಾಯತ ಸೇರಿದಂತೆ ಎಲ್ಲ ಒಳಪಂಗಡಗಳನ್ನು ಸಮೀಕರಿಸುವುದು, ನಿರುದ್ಯೋಗ ಸಮಸ್ಯೆ ನಿವಾರಣೆಯತ್ತ ಗಮನಹರಿಸುವುದು, ವಿದ್ಯಾರ್ಥಿಗಳಿಗೆ ಧನಸಹಾಯ, ಆರೋಗ್ಯದ ಅರಿವು ಮೂಡಿಸುವುದು, ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶನ ನೀಡುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಸವ ಸಂಗಮದ ಪದಾಧಿಕಾರಿಗಳಾದ ಧ್ರುವಕುಮಾರ್, ಅವಿನಾಶ್, ಮಂಗಳಾ ನಾಗೇಂದ್ರ, ಅರವಿಂದ, ಚಂದ್ರು ಮುಂತಾದವರಿದ್ದರು.