

ಹಾವೇರಿ: ಈ ಜಗತ್ತು ನಮ್ಮ ಕಣ್ಣಿಗೆ ಕಾಣುವಂತೆ ಮಾಡುವುದು ಬೆಳಕು. ಬೆಳಕೇ ನಮ್ಮ ಜೀವನದ ಮಹತ್ತರವಾದ ಭಾಗವಾಗಿದೆ. ಹೀಗಾಗಿ ಮನುಷ್ಯನ ಜೀವನದಲ್ಲಿ ಶರಣರು, ಸಂತರು, ಸಮಾಜ ಸುಧಾರಕರ ಮಹಾತ್ಮರ, ಜ್ಞಾನಕ್ಕಾಗಿ ನಿತ್ಯ ಒಂದು ಗಂಟೆ ಕಾಲ ಮೀಸಲಿಡಬೇಕು. ಆ ವ್ಯಕ್ತಿ ಜ್ಞಾನ ಪರ್ವತಾಗುತ್ತಾನೆ ಎಂದು ಹೊಸಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿಯ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ, ತಾಲೂಕು ಹಾಗೂ ಮಹಿಳಾ, ಯುವ ಘಟಕದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಅಜ್ಞಾನದ ಕತ್ತಲ ಕಳೆದು ಸುಜ್ಞಾನದ ಬೆಳಕು ಸಿಗುತ್ತದೆ. ಬಾಲಗಂಗಾಧರ ತಿಲಕರನ್ನು ಲೋಕಮಾನ್ಯ ಎನ್ನುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ಶಾಂತಿದೂತ ಎನ್ನುತ್ತಾರೆ. ಬುದ್ಧನನ್ನು ಜ್ಞಾನಮೂರ್ತಿ ಎನ್ನುತ್ತಾರೆ. ಬಸವಣ್ಣನವರನ್ನು ಸರ್ವಧರ್ಮದ ಸರ್ವೋದಯ ನಾಯಕ, ತನುವನ್ನು ಗುರುವಿಗೆ ಅರ್ಪಿಸಿ, ಮನ ಲಿಂಗ ಧ್ಯಾನದಲ್ಲಿರಿಸಿ, ಧನವನ್ನು ಜಂಗಮಕ್ಕೆ (ಸಮಾಜ ಸೇವೆಗೆ) ಅರ್ಪಿಸಿ, ನಿಮ್ಮ ಅಂತರಾತ್ಮ ಒಳ್ಳೆಯ ಗೆಳೆಯನಿದ್ದಂತೆ ಮೇಲಿಂದ ಮೇಲೆ ಅವನ ಮಾತು ಮತ್ತು ಸಲಹೆಯನ್ನು ಕೇಳಬೇಕು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ಸಂಜೀವ ಕುಮಾರ ಪಾಟೀಲ ನೀರಲಗಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಯ ಹರಿಕಾರಾಗಿದ್ದರು. ಬಸವಣ್ಣನವರ ಸಂವಿಧಾನವೇ ಇಂದು ಭಾರತ ಸರ್ಕಾರ ಅವರ ಸಂವಿಧಾನದಂತೆ ನಡೆಯುತ್ತದೆ ಅಂತ ಅಂದರು. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಅಂತ ಆದೇಶ ಮಾಡಿರುವುದು ಶ್ಲಾಘನೀಯ ಎಂದರು.
ಜಿ.ಎಚ್. ಕಾಲೇಜ್‌ನ ಉಪನ್ಯಾಸಕ ಎಂ.ಬಿ. ಪಾಟೀಲ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಂಬಣ್ಣ ಜತ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪುರಸ್ಕೃತ ಮಾಂತಯ್ಯ ಮಠದ ಅವರನ್ನು ಸನ್ಮಾನಿಸಲಾಯಿತು.
ಸಮಾಜದ ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗಾಗಿ ಏರ್ಪಡಿಸಿದ್ದ ವಚನ ಸ್ಪರ್ಧೆಯಲ್ಲಿ ದಿಯಾ ತುಪ್ಪದ ಪ್ರಥಮ, ಆಧ್ಯಾ ತುಪ್ಪದ ದ್ವಿತೀಯ, ವರ್ಷಿಣಿ ಕುಶಗುರು ತೃತೀಯ ಹಾಗೂ ರಕ್ಷಿತಾ ಚೌಡಪ್ಪನವರ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಪ್ಪ ಕಡ್ಲಿ, ಜಿಲ್ಲಾ ಖಜಾಂಚಿ ವಿಶ್ವನಾಥ ಅಂಕಲಕೋಟಿ, ರಾಜ್ಯ ಯುವ ವಿಭಾಗದ ಕಾರ್ಯದರ್ಶಿ ಶಂಭು ಚಕ್ಕಡಿ, ತಾಲೂಕು ಘಟಕದ ಅಧ್ಯಕ್ಷ ಮೃತ್ಯುಂಜಯ ಬುಕ್ಕಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಅಶ್ವಿನಿ ಟೊಂಕದ, ಶಿವಮೂರ್ತಿ ಮೆಣಸಿನಹಾಳ, ಲತಾ ಭರತನೂರಮಠ, ಶೈಲಜಾ ಕೋರಿಶೆಟ್ಟರ, ನೀಲಮ್ಮ ಲಿಂಬರಗಿ, ಶಿವಬಸಮ್ಮ ಲಕ್ಕಣ್ಣನವರ, ವಿರುಪಾಕ್ಷಪ್ಪ ಕಡ್ಲಿ, ಶ್ವೇತಾ ತುಪ್ಪದ, ಪ್ರಭಪ್ಪ ಮರಗೂರ, ಅಮೃತಮ್ಮ ಶೀಲವಂತರ, ದಾಕ್ಷಾಯಿಣಿ ಗಾಣಿಗೇರ, ಅನುಸೂಯ ಎರವಿನತಲಿ, ಶಾಂತಮ್ಮ ದೊಡ್ಡಮನಿ, ಅಜ್ಜನಗೌಡ ಗೌಡಪ್ಪನವರ, ವೀರಪ್ಪ ಹರನಗೇರಿ, ಅನ್ನಪೂರ್ಣ ಅಂಕದಕೋಟಿ ಮತ್ತಿತರರು ಉಪಸ್ಥಿತರಿದ್ದರು.