ಭೀಮ್‌ಆರ್ಮಿ ಬೆನ್ನಲ್ಲೇ ಬೀದಿಗಿಳಿಯಲಿದೆ ಬಸವದಳ, ಸಚಿವ ಡಾ.ಎಂ.ಬಿ. ಪಾಟೀಲ ಬಿಚ್ಚಿಟ್ಟ ರಹಸ್ಯವೇನು ಗೊತ್ತಾ?

M B Patil
Published on

ವಿಜಯಪುರ: ಆರ್‌ಎಸ್‌ಎಸ್ ಮತ್ತು ಭೀಮ್ ಆರ್ಮಿ ನಡುವಿನ ಮುಸುಕಿನ ಗುದ್ದಾಟದ ನಡುವೆ ಹೊಸದಾಗಿ ಬಸವ ದಳ ಬೀದಿಗಿಳಿಸುವ ಕುರಿತು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲ ಸೌಕರ್ಯ ಸಚಿವ ಡಾ.ಎಂ.ಬಿ. ಪಾಟೀಲ ಮನದಿಂಗಿತ ವ್ಯಕ್ತಪಡಿಸಿದ್ದಾರೆ.

ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ಮೇಲಿನ ನಿರ್ಬಂಧದ ಹಿನ್ನೆಲೆ ತಮ್ಮ ವಿರುದ್ಧ ಸಮಾವೇಶ ನಡೆಸುವ ಕುರಿತು ಮಾತನಾಡುತ್ತಿರುವ ಬಿಜೆಪಿಯ ಉಚ್ಛಾಟಿತ ನಾಯಕರಾದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಇಂಥದ್ದೊಂದು ತಂತ್ರಗಾರಿಕೆ ಬಿಚ್ಚಿಟ್ಟರು.

ಈಗಾಗಲೇ ಪ್ರಿಯಾಂಕ್ ಖರ್ಗೆ ಅವರ ಭೀಮ್ ಆರ್ಮಿಗೆ ಹೆದರಿದ್ದೀರಿ, ಇನ್ಮುಂದೆ ಬಸವದಳ, ಬಸವಸೇನೆ, ಸಿದ್ಧರಾಮಯ್ಯ ನೇತೃತ್ವದ ಅಹಿಂದ ವರ್ಗ ಮಾತ್ರವಲ್ಲ ಇಡೀ ಅನುಭವ ಮಂಟಪವನ್ನೇ ಎದುರಿಗಿಡುವುದಾಗಿ ತಿಳಿಸಿದರಲ್ಲದೇ, ಸ್ವಾಮೀಜಿಗಳನ್ನು ಕರೆಯಿಸಿ ಮಾಡುವ ನಿಮ್ಮ ಕಾರ್ಯಕ್ರಮಕ್ಕಿಂತಲೂ ದೊಡ್ಡದಾದ ಕಾರ್ಯಕ್ರಮ ಮಾಡುತ್ತೇವೆ. ಇದು ಬಸವ ಜನಿಸಿದ ನೆಲ. ನಾವು ಬಸವದಳ, ಭೀಮ್ ಸೇನೆ ಎಲ್ಲಾ ಸೇರಿಸಿ ಸಮಾವೇಶ ಮಾಡುತ್ತೇವೆ. ಬೇಕಾದರೆ ಒಮ್ಮೆ ಪ್ರಯೋಗಕ್ಕಿಳಿಯಿರಿ. ನಾವಾ-ನೀವಾ ನೋಡೇ ಬಿಡೋಣ ಎಂದು ಸವಾಲೆಸೆದರು.

ಲಿಂಗಾಯತರ ವಿರುದ್ಧ ಷಡ್ಯಂತ್ರ

ಲಿಂಗಾಯತರ ವಿರುದ್ಧ ಲಿಂಗಾಯತರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆದಿದೆ. ಸುಖಾಸುಮ್ಮನೆ ಪಂಚಪೀಠಾಧೀಶರನ್ನಾಗಲಿ, ಸಿದ್ಧೇಶ್ವರ ಸ್ವಾಮೀಜಿಗಳನ್ನಾಗಲಿ ಎಳೆದು ತರಲಾಗುತ್ತಿದೆ. ಪಂಚಪೀಠಾಧೀಶರನ್ನು ನಾವು ಟೀಕಿಸುವುದಿಲ್ಲ. ಅವರ ಬಗ್ಗೆ ಭಕ್ತಿ ಇದೆ. ನಮ್ಮಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯ ಇರಬಹುದು. ಅದನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ. ಅದು ನಮ್ಮ ಮನೆಯ ವಿಚಾರ. ಈ ಹಿಂದೆ ಇದೇ ಪಂಚಪೀಠಾಧೀಶರನ್ನು ಯಾರೆಲ್ಲ ಟೀಕಿಸಿದ್ದಾರೆಂಬುದು ಗೊತ್ತಿದೆ. ಹಾನಗಲ್ಲದ ಕುಮಾರಸ್ವಾಮೀಗಳನ್ನೂ ಟೀಕಿಸಿದ್ದಾರೆ. ಮಾತ್ರವಲ್ಲ ಜಂಗಮ ಸಮಾವನ್ನೂ ಬೈಯ್ದಿದ್ದು ಅದನ್ನೆಲ್ಲ ಸೂಕ್ತ ಸಂದರ್ಭದಲ್ಲಿ ಹೊರಹಾಕುತ್ತೇವೆ.

ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ಹಿಂದೆ ಯಾರಿದ್ದಾರೆಂಬುದು ಗೊತ್ತಿದೆ. ಬೇಕಾದರೆ ಸಾಕ್ಷಿ ಕೊಡುವೆ ಎಂದ ಸಚಿವ ಎಂ.ಬಿ. ಪಾಟೀಲರು, ಕನ್ಹೇರಿ ಶ್ರೀಗಳು ಆರ್‌ಎಸ್‌ಎಸ್ ಶಾಖೆಯಲ್ಲಿ ಭಾಗವಹಿಸಿದ್ದ ಫೋಟೊ ಪ್ರದರ್ಶಿಸಿದರು. ಮಾತ್ರವಲ್ಲ, ಅದಕ್ಕೆ ತಮ್ಮ ವಿರೋಧವೂ ಇಲ್ಲ ಎಂದರು.

ಹಿಂದು ಧರ್ಮವೇ ಅಲ್ಲ

ಹಿಂದು ಧರ್ಮವೇ ಅಲ್ಲವೆಂದು ಸುಪ್ರೀಂ ಕೋರ್ಟ್ ಸಹ ಹೇಳಿದೆ. ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಸಹ ಸಂದರ್ಶನವೊಂದರಲ್ಲಿ ಹಿಂದು ಧರ್ಮವಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ನಾವೆಲ್ಲ ಭಾರತೀಯರು. ಭೌಗೋಳಿಕವಾಗಿ ಜನಾಂಗೀಯವಾಗಿ ನಾವು ಹಿಂದುಗಳು. ದಾವಣಗೆರೆಯಲ್ಲಿ ವೀರಶೈವ ಮಹಾಸಭಾ ಅಧಿವೇಶನದಲ್ಲಿ ಮಾಡಿದ ನಿರ್ಣಯಗಳಲ್ಲಿ ನಾವು ಹಿಂದುಗಳಲ್ಲ ಎಂದು ನಿರ್ಣಯ ತೆಗೆದುಕೊಳ್ಳಲಾಗಿದೆ. ಆಗೆಲ್ಲ ಮಾತನಾಡದವರು ಇದೀಗ ಬಸವ ಸಂಸ್ಕೃತಿ ಅಭಿಯಾನ ಆರಂಭಿಸಿದ ಕೂಡಲೇ ಟೀಕಿಸುತ್ತಿರುವುದೇಕೆ? ಎಂದು ಎಂ.ಬಿ. ಪಾಟೀಲ ಪ್ರಶ್ನಿಸಿದರು.

2014 ರಲ್ಲಿ ಯುಪಿಎ ಸರ್ಕಾರ ಜೈನರಿಗೆ ಧರ್ಮದ ಮಾನ್ಯತೆ ನೀಡಿತು. ಆಗ ಇವರೆಲ್ಲ ಏಕೆ ಮಾತನಾಡಲಿಲ್ಲ? ಸ್ವಾಮೀಜಿಗಳಾದವರು, ಬಿಜೆಪಿಗರು ಏಕೆ ಪ್ರಶ್ನಿಸಲಿಲ್ಲ? ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಆ ಮಾನ್ಯತೆ ರದ್ದು ಮಾಡಲಿಲ್ಲವೇಕೆ? ಇದೀಗ ಲಿಂಗಾಯತ ವಿಚಾರವನ್ನಷ್ಟೇ ಏಕೆ ಪ್ರಶ್ನಿಸುತ್ತಿರುವುದು ಎಂದು ಕೇಳಿದರು.

ಸಿದ್ಧರಾಮಯ್ಯ ಎದೆಯಲ್ಲಿ ಸಂವಿಧಾನ ಇದೆ:

ಸೋಕಾಲ್ಡ್ ಹಿಂದು ಹುಲಿ ಬಸನಗೌಡ ಪಾಟೀಲ ಯತ್ನಾಳರು ಸಿಎಂ ಸಿದ್ದರಾಮಯ್ಯನವರ ಎದೆಯಲ್ಲಿ ಅಲ್ಲಾ ಇದ್ದಾನೆಂದು ಟೀಕಿಸಿದ್ದಾರೆ. ಆದರೆ, ಸಿದ್ಧರಾಮಯ್ಯ ಅವರ ಎದೆಯಲ್ಲಿ ಸಂವಿಧಾನವಿದೆ. ಸಾಮಾಜಿಕ ನ್ಯಾಯವಿದೆ, ಬಸವಣ್ಣನವರ ಸಿದ್ಧಾಂತವಿದೆ ಎಂದು ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದ ಎಂ.ಬಿ. ಪಾಟೀಲರು, ಈ ಹಿಂದೆ ನನ್ನದೇ ಜೊತೆ ಸೇರಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಟೋಪಿ ಧರಿಸಿ ಅಲ್ಲಾಹು ಅಕ್ಬರ್ ಎಂದು ನಮಾಜ್ ಮಾಡಿದಾಗ ನಿಮ್ಮ ಎದೆಯಲ್ಲಿ ಯಾರಿದ್ದರು? ಮಾತೆ ಮಹಾದೇವಿ ಅವರನ್ನು ಹೊಗಳುತ್ತಾ ‘ಲಿಂಗಾಯತ ಜಾಗತಿಕ ಧರ್ಮ’ ಮಾಡುತ್ತಿದ್ದಾರೆಂದು ಹೇಳಿದಾಗ ಎದೆಯಲ್ಲಿ ಯಾರಿದ್ದರು? ಎಂದು ಪ್ರಶ್ನಿಸಿದರಲ್ಲದೇ ನಿಮ್ಮ ಎದೆಯಲ್ಲಿ ಓಟಿನ ಆಸೆಯಿದೆ. ಒಮ್ಮೆ ಅಲ್ಲಾ, ಇನ್ನೊಮ್ಮೆ ಬಸವಣ್ಣ, ಮತ್ತೊಮ್ಮೆ ಶ್ರೀರಾಮ ಬರುತ್ತಾನೆ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net