

ಶಿವಮೊಗ್ಗ: ಜಗತ್ತಿನ ಶ್ರೇಷ್ಠ ತತ್ವಜ್ಞಾನಿ, ದಾರ್ಶನಿಕ, ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಕುರಿತು ಅಸಂಬದ್ಧ ಹೇಳಿಕೆ ನೀಡಿರುವ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಿವಮೊಗ್ಗ ಬಸವದಳ ಟ್ರಸ್ಟ್ ಪ್ರಮುಖರು ಮಂಗಳವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಯತ್ನಾಳ್ ಅವರ ಅಸಂಬದ್ಧ ಹಾಗೂ ಅಪ್ರಬುದ್ಧ ಹೇಳಿಕೆಯನ್ನು ರಾಷ್ಟ್ರೀಯ ಬಸವದಳ ಟ್ರಸ್ಟ್ ಖಂಡಿಸುತ್ತದೆ. ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು. ಬಸವಣ್ಣ ಇಷ್ಟಲಿಂಗಯೋಗದ ಮೂಲಕ ಲಿಂಗೈಕ್ಯಗೊಂಡರು ಎನ್ನುವುದಕ್ಕೆ ಪ್ರಬಲ ಸಾಕ್ಷಿಯಿದೆ. ನೂರಾರು ವರ್ಷಗಳಿಂದ ಬಸವಭಕ್ತರು ಕೂಡಲಸಂಗಮ ಸುಕ್ಷೇತ್ರದಲ್ಲಿರುವ ಗುರುಬಸವಣ್ಣನವರ ಲಿಂಗೈಕ್ಯ ಸ್ಥಳವನ್ನು ಅತ್ಯಂತ ಭಕ್ತಿಭಾವದಿಂದ ಪೂಜಿಸಿಕೊಂಡು ಬಂದಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸಂಶೋಧನೆಗಳು ಈ ಕುರಿತು ಬೆಳಕು ಚೆಲ್ಲಿರುವುದನ್ನು ಯತ್ನಾಳ್ ಗಮನಿಸದೇ ಇರುವುದು ಅವರ ಅಜ್ಞಾನವನ್ನು ತೋರಿಸುತ್ತದೆ. ಬಸವಭಕ್ತರ ಭಕ್ತಿಭಾವನೆಗಳಿಗೆ ಧಕ್ಕೆ ಮಾಡುವ ಮನೋಭಾವದಿಂದ ಯತ್ನಾಳ್ ಹೊರಬರಬೇಕು. ಈಗಲಾದರೂ ಸತ್ಯವನ್ನು ಅರಿತು ಯತ್ನಾಳ್ ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದರು.
ರಾಷ್ಟ್ರೀಯ ಬಸವದಳ ಟ್ರಸ್ಟ್ ಶಿವಮೊಗ್ಗ ಘಟಕದ ಅಧ್ಯಕ್ಷ ರಾಮಪ್ಪ, ಉಪಾಧ್ಯಕ್ಷ ಮೂಲಿಮನಿ, ಗೌರವಾಧ್ಯಕ್ಷ ಹಾಲಪ್ಪ, ಕಾರ್ಯದರ್ಶಿ ಯೋಗೀಶ್ ನಿರ್ವಿಕಲ್ಪ, ಸದಸ್ಯರಾದ ಬಾಳಾನಂದ, ಶಿವಕುಮಾರ್, ರತ್ನಮ್ಮ, ಅನಸೂಯಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.