

ಬರೇಲಿ: ‘ಐ ಲವ್ ಮುಹಮ್ಮದ್’ ಪೋಸ್ಟರ್ ವಿವಾದ ಹಿನ್ನೆಲೆಯಲ್ಲಿ ಬರೇಲಿಯಲ್ಲಿ ಇತ್ತೀಚೆಗೆ ನಡೆದ ಘರ್ಷಣೆಗಳ ಬಳಿಕ ನಗರದಲ್ಲಿನ ಅಕ್ರಮ ಕಟ್ಟಡಗಳ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ಶನಿವಾರ ಬರೇಲಿಯ ಜಖಿರಾ ಪ್ರದೇಶದಲ್ಲಿರುವ ಡಾ.ನಫೀಸ್ ಅಹ್ಮದ್ ಒಡೆತನದ ರಾಜಾ ಪ್ಯಾಲೇಸ್ ಕಲ್ಯಾಣ ಮಂಟಪವನ್ನು ಕೆಡವಲಾಗಿದೆ. ಗಲಭೆ ನಡೆದ ವೇಳೆ ಬರೇಲಿಯ ಫೈಕ್ ಎನ್ಕ್ಲೇವ್ ಪ್ರದೇಶದಲ್ಲಿ ತೌಕೀರ್ ರಜಾ ಅಡಗಿಕೊಂಡಿದ್ದ ನಿವಾಸವನ್ನು ಸೀಜ್ ಮಾಡಲಾಗಿದೆ. ಇದೆ ವೇಳೆ ಮುನ್ಸಿಪಲ್ ಕಾರ್ಪೆರೇಷನ್ ಸೈಲಾನಿ ಪ್ರದೇಶದಲ್ಲಿ ಅಕ್ರಮವಾಗಿ ನಿರ್ವಿುಸಿದ್ದ ಅಂಗಡಿಗಳು ಮತ್ತು ಮನೆಗಳನ್ನು ತೆರವುಗೊಳಿಸಿದೆ. ಬರೇಲಿಯಲ್ಲಿ ಸೆ.26ರಂದು ಮಸೀದಿ ಹೊರಗೆ 2000ಕ್ಕೂ ಹೆಚ್ಚು ಜನರು ಗಲಭೆ ನಡೆಸಿದ್ದರು. ಈ ವೇಳೆ ಗಲಭೆಕೋರರು ಕಲ್ಲು ತೂರಾಟ ನಡೆಸಿದ್ದರಿಂದ ಹಲವು ಪೊಲೀಸರಿಗೆ ಗಾಯಗಳಾಗಿದ್ದವು.
ಹೀಗಾಗಿ ಫೈಕ್ ಎನ್ಕ್ಲೇವ್, ಜಗತ್ಪುರ ಮತ್ತು ಬರೇಲಿ ಹಳೇ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಇತ್ತೆಹಾದ್ ಎ ಮಿಲ್ಲತ್ ಕೌನ್ಸಿಲ್ನ ಮುಖ್ಯ ಧರ್ಮಗುರು ತೌಕೀರ್ ರಜಾ ಮತ್ತು ಆತನ ಸಹಚರರಿಗೆ ಸಂಬಂಧಿಸಿದ 8 ಅಕ್ರಮ ಆಸ್ತಿಗಳನ್ನು ಅಧಿಕಾರಿಗಳು ಗುರುತಿಸಿದ್ದರು. ಈಗ ಆ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ತೌಕೀರ್ ರಜಾ ಮತ್ತು ಅವರ ಸಹಚರರು ಸಮುದಾಯ ಕಾರ್ಯಕ್ರಮಗಳ ಸೋಗಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುತ್ತಿದ್ದ ಶಂಕೆ ಇದ್ದು ಈ ಕುರಿತೂ ತನಿಖೆ ನಡೆಯುತ್ತಿದೆ. ಐವರ ಬಂಧನ: ಉತ್ತರಪ್ರದೇಶದ ಮೀರತ್ನಲ್ಲಿ ‘ಐ ಲವ್ ಮುಹಮ್ಮದ್’ ಪೋಸ್ಟರ್ ಹಾಕಿದ್ದಕ್ಕೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಮವಾನಾ ಟೌನ್ನಲ್ಲಿ ಶುಕ್ರವಾರ ಈ ಪೋಸ್ಟರ್ಗಳನ್ನು ಹಾಕಲಾಗಿದ್ದು, ಶನಿವಾರ ತೀವ್ರ ವಿರೋಧ ವ್ಯಕ್ತವಾದ್ದರಿಂದ ಆರೋಪಿಗಳನ್ನು ಬಂಧಿಸಲಾಗಿದೆ.
ಬರೇಲಿ ಗಲಭೆಯಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿರುವ ವ್ಯಕ್ತಿಗೆ ಸೇರಿದ ಕಟ್ಟಡವನ್ನು ಶನಿವಾರ ನೆಲಸಮಗೊಳಿಸಲಾಗಿದೆ. ಇದರೊಂದಿಗೆ ಹಲವು ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆಯೂ ನಡೆದಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ವಿಪಕ್ಷ ನಾಯಕ ಮಾತಾ ಪ್ರಸಾದ್ ಪಾಂಡೆ ನೇತೃತ್ವದಲ್ಲಿ ಬರೇಲಿಗೆ ತೆರಳಲು ಯೋಜಿಸಿದ್ದ ಸಮಾಜವಾದಿ ಪಕ್ಷದ 14 ಸಂಸದರು ಮತ್ತು ಶಾಸಕರನ್ನು ಪೊಲೀಸರು ಅವರ ಮನೆಗಳಲ್ಲಿಯೇ ತಡೆಯಲಾಗಿದೆ.