ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ

IMG-20250328-WA0052
ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು ಕೊಲೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
Published on

ಗೋಣಿಕೊಪ್ಪಲು: ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ಕೌಟುಂಬಿಕ ಕಲಹಕ್ಕೆ ಮಗು ಸೇರಿ ನಾಲ್ವರ ಹತ್ಯೆಯಾಗಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ, ಮಲಮಗಳು, ಪತ್ನಿಯ ಅಜ್ಜ, ಅಜ್ಜಿಯನ್ನು ಕತ್ತಿಯಿಂದ ಭೀಕರವಾಗಿ ಕಡಿದು ಹತ್ಯೆ ಮಾಡಿದ್ದಾನೆ.

ಕೇರಳ ಮೂಲದ ಗಿರೀಶ್(35) ಕೊಲೆ ಮಾಡಿದ ಆರೋಪಿಯಾಗಿದ್ದು, ಘಟನೆ ಬಳಿಕ ತಲೆ ಮರೆಸಿಕೊಂಡಿದ್ದಾನೆ. ಪತ್ನಿ ನಾಗಿ(30), ಪತ್ನಿಯ ಅಜ್ಜಿ ಜೇನು ಕುರುಬರ ಕರಿಯ(75), ಗೌರಿ(70) ಹಾಗೂ ಮಲಮಗಳು ಕಾವೇರಿ(5) ಕೊಲೆಯಾದವರು.

40 ವರ್ಷಗಳ ಹಿಂದೆ ಕೇರಳದಿಂದ ಕರಿಯ ಮತ್ತು ಗೌರಿ ಬೇಗೂರು ಗ್ರಾಮಕ್ಕೆ ಬಂದು ಜಾಗ ಖರೀದಿಸಿ ತೋಟ ಮಾಡಿಕೊಂಡು ನೆಲೆಸಿದ್ದರು. ಇವರಿಗೆ ಮೂರು ಜನ ಮಕ್ಕಳಿದ್ದು, ಅವರಲ್ಲಿ ಜಯಾ ಅವರ ಮಗಳು ನಾಗಿ ಎಂಬಾಕೆಯನ್ನು ಒಂದು ವರ್ಷದ ಹಿಂದೆ ಕೇರಳ ಮೂಲದ ಗಿರೀಶ್‌ಗೆ ಮದುವೆ ಮಾಡಲಾಗಿತ್ತು. ಎರಡು ತಿಂಗಳಿಂದ ಪತ್ನಿ ನಾಗಿ ಬೇಗೂರಿನ ಅಜ್ಜಿ ಜತೆ ವಾಸಿಸುತ್ತಿದ್ದರು. ಪತಿ ಗಿರೀಶ್ ಆಗಾಗ್ಗೆ ನಾಗಿ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಶುಕ್ರವಾರ ನಾಗಿ ಮನೆಗೆ ಬಂದ ಗಿರೀಶ್ ಏಕಾಏಕಿ ನಾಲ್ವರನ್ನು ಭೀಕರವಾಗಿ ಹತ್ಯೆಗೈದು ತಲೆಮರೆಸಿಕೊಂಡಿದ್ದಾನೆ. ಪಕ್ಕದ ತೋಟದ ಕಾರ್ಮಿಕರು ಮನೆಗೆ ಬಂದು ನೋಡಿದಾಗ ನಾಲ್ವರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಎಸ್‌ಪಿ ಸುಂದರ್ ರಾಜ್, ಪೊನ್ನಂಪೇಟೆ ಠಾಣಾಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂದರ್ಭ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ.ಬೋರಲಿಂಗಯ್ಯ ಮಾತನಾಡಿ, ತೋಟದ ಕಾಫಿ ಪಸಲು ಮನೆಯಲ್ಲಿಯೇ ಇದ್ದು ಕಾಫಿ ಮಾರುವುದರ ಬಗ್ಗೆ ಅಥವಾ ಬೇರೆ ಯಾವುದೋ ಕಾರಣಕ್ಕೆ ನಾಲ್ವರ ಹತ್ಯೆ ನಡೆದಿರಬಹುದು. ಮೇಲ್ನೋಟಕ್ಕೆ ಹರಿತವಾದ ಮಚ್ಚು ಅಥವಾ ಆಯುಧದಿಂದ ಹಲ್ಲೆ ಮಾಡಿರುವುದು ಗೊತ್ತಾಗಿದೆ. ಕೊಲೆ ಮಾಡಿದ ಆರೋಪಿ ಗಿರೀಶ್ ಕೇರಳಕ್ಕೆ ಹೋಗಿರುವ ಶಂಕೆ ಇದ್ದು, ಆತನ ಪತ್ತೆಗೆ ಒಂದು ತಂಡ ರಚಿಸಲಾಗಿದೆ. ಕೌಟುಂಬಿಕ ಕಲಹದಿಂದ ಹತ್ಯೆ ನಡೆದಿರಬಹುದು ಎಂಬ ಸಂಶಯವಿದೆ. ಶೀಘ್ರವೇ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net