ಬಿಜೆಪಿಗೆ ಮಾತ್ರ ಬಾನು ಹೆಸರು ಅಪಥ್ಯ

Yogesh
Published on

ಶಿವಮೊಗ್ಗ: ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಹೆಸರನ್ನು ಸಿಎಂ ಸೂಚಿಸಿದ ಬಳಿಕ ಬಿಜೆಪಿ ನಾಯಕರು ಎಂದಿನಂತೆ ಧರ್ಮಾಧಾರಿತ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ದಸರಾಕ್ಕೆ ದೀರ್ಘ ಇತಿಹಾಸವಿದೆ. ಇದು ಜಾತ್ಯತೀತ ನಾಡಹಬ್ಬ. ದಸರಾ ಆಚರಣೆಗೆ 24 ಸಮಿತಿಗಳಿದ್ದು, ಉದ್ಘಾಟನೆಯ ಪರಮಾಧಿಕಾರವನ್ನು ಸಿಎಂ ವಿವೇಚನೆಗೆ ಬಿಡಲಾಗಿದೆ. ಬುಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಅವರ ಹೆಸರಿಗೆ ಎಲ್ಲರೂ ಅನುಮೋದನೆ ನೀಡಿದ್ದರೂ ಬಿಜೆಪಿಯವರಿಗೆ ಮಾತ್ರ ಆ ಹೆಸರು ಪಥ್ಯವಾಗುತ್ತಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ದಸರಾ ಮೆರವಣಿಗೆಗೆ ತೆರಳುವ ಆನೆಗಳಿಗೆ ತರಬೇತಿ ನೀಡುವುದರಿಂದ ಹಿಡಿದು, ಅಂಬಾರಿ ಕಟ್ಟುವವರೆಗೆ ಎಲ್ಲವನ್ನೂ ಮುಸ್ಲಿಂ ಮಾವುತರೇ ನಿರ್ವಹಿಸುತ್ತಾರೆ. ಅವರು ಶ್ರದ್ಧಾಭಕ್ತಿಯಿಂದ ಯಶಸ್ವಿಯಾಗಿ ಈ ಕಾರ್ಯವನ್ನು ನಡೆಸುತ್ತಾರೆ. ಬಿಜೆಪಿ ನಾಯಕರಿಗೆ ಆಗ ಅಡ್ಡಿಯಾಗದ ಜಾತಿ, ಉದ್ಘಾಟನೆ ಸಮಯದಲ್ಲಿ ಮಾತ್ರ ನೆನಪಿಗೆ ಬರುವುದೇಕೆ ಎಂದು ಪ್ರಶ್ನಿಸಿದರು.

ಮಾಜಿ ಮೇಯರ್‌ಗಳಾದ ಪಾಲಾಕ್ಷಿ, ನಾಗರಾಜ ಕಂಕಾರಿ, ಮಾಜಿ ಸದಸ್ಯರಾದ ವಿಶ್ವನಾಥ ಕಾಶಿ, ಯಮುನಾ ರಂಗೇಗೌಡ, ಪ್ರಮುಖರಾದ ಎಸ್.ಟಿ.ಚಂದ್ರಶೇಖರ್, ಮಧು, ಪವನ್‌ಕುಮಾರ್, ಗಂಗಾಧರ್, ಚಿನ್ನಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net