

ಶಿವಾನಂದ ತಗಡೂರು, ಬೆಂಗಳೂರು:
ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿರುವ ಕನ್ನಡದ ಹೆಮ್ಮೆಯ ಸಾಹಿತಿ ಬಾನುಮಷ್ತಾಕ್ ಅವರು ಸವೆಸಿದ ಬದುಕಿನ ಹಾದಿ ಅಷ್ಟು ಸುಲುಭವಾಗಿಯೇನೂ ಇರಲಿಲ್ಲ.
ಮುಸ್ಲಿಂ ಸಮುದಾಯದೊಳಗಿನ ಕೆಲ ಅನಿಷ್ಠ ಸಂಪ್ರದಾಯಗಳ ಬಗ್ಗೆ ಧೈರ್ಯವಾಗಿ ಬರೆದು, ಬೆಳಕು ಚೆಲ್ಲಿದ್ದ ಬಾನುಮುಷ್ತಾಕ್ ಅವರನ್ನು ಆ ಸಮುದಾಯದ ಕಟ್ಟಾ ಸಂಪ್ರದಾಯವಾದಿಗಳು ಒಪ್ಪಲಿಲ್ಲ. ಅವರನ್ನು ಸಮಾಜದಿಂದಲೇ ಬಹಿಷ್ಕಾರ ಹಾಕಿದ ೋಷಣೆಗಳು ಮಸೀದಿಯಲ್ಲಿ ಮೊಳಗಿದಾಗ ಅವರ ಬದುಕು ಅಕ್ಷರಸಹ ಬೆಂಕಿಯಿಂದ ಬಾಣೆಲೆಗೆ ಬಿದ್ದಂತಾಗಿತ್ತು. ಅಂಥ ಸಂದರ್ಭಗಳನ್ನು ಎದುರಿಸಿದ ಬಾನು ಅವರು ಬೆಂಕಿಯ ಮಳೆಯಲ್ಲಿಯೇ ಈಜಿ, ಸಾಹಿತ್ಯ ಲೋಕದಲ್ಲಿ ತನ್ನದೇ ಹೆಜ್ಜೆ ಗುರುತು ಮೂಡಿಸುವ ಮೂಲಕ ಬದುಕು ಕಟ್ಟಿಕೊಂಡಿದ್ದು ಮಾತ್ರ ಅಚ್ಚರಿ.
ಎಂಬತ್ತರ ದಶಕದಲ್ಲಿ ತನ್ನ ಸಮುದಾಯದ ಹೆಣ್ಣುಮಗಳೊಬ್ಬಳು ಅಕ್ಷರ ಲೋಕಕ್ಕೆ ಕಾಲಿಟ್ಟಿದ್ದನ್ನೆ ನಿಬ್ಬೆರಗಾಗಿ ನೋಡಿದ್ದ ಅಂದಿನ ಮುಸ್ಲಿಂ ಸಮಾಜದಲ್ಲಿ ಬಾನು ಮುಷ್ತಾಕ್ ಅವರಿಗೆ ಸಿಕ್ಕ ಪ್ರೋತ್ಸಾಹಕ್ಕಿಂತ ಹೆಚ್ಚಾಗಿ ಹೆಜ್ಜೆ ಹೆಜ್ಜೆಗೂ ಸವಾಲುಗಳೇ ಹೆಚ್ಚು.
ಎದುರಾದ ಕಷ್ಟದ ಸವಾಲುಗಳನ್ನೆ ಮೆಟ್ಟಿಲಾಗಿಸಿಕೊಂಡು ಒಂದೊಂದೆ ಹೆಜ್ಜೆ ಇಡುತ್ತಾ ಬಂದ ರೀತಿ ಹಾಸನದಲ್ಲಿ ಮನೆ ಮಾತು.
ಕೌಟಂಬಿಕ ನಿರ್ಬಂಧಗಳ ವಾತಾವರಣದ ಎಲ್ಲೆ ಮೀರಿ ಓದು ಮುಗಿಸಿ ಪದವಿ ಪಡೆದ ಭಾನುಗೆ ಸರ್ಕಾರಿ ನೌಕರಿ ಹರಸಿ ಬಂದಿತ್ತು. ಇನ್ನೇನು ಸಕಲೇಶಪುರ ತಾಲೂಕಿನ ಬೆಳಗೋಡು ಶಾಲೆಗೆ ಶಿಕ್ಷಕಿಯಾಗಿ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕು ಎನ್ನುವ ಮುನ್ನವೇ ಅವರಿಗೆ ಮದುವೆಯಾಗಿದ್ದು ಅವರ ಬದುಕಿನ ಮತ್ತೊಂದು ತಿರುವು.
ಗಂಡನ ಮನೆ ಸೇರಿದ ಬಾನು ಅವರನ್ನು ಉದ್ಯೋಗಕ್ಕೆ ಕಳುಹಿಸಲು ಮಾವನ ಮನೆ ಕುಟುಂಬ ಒಪ್ಪಲಿಲ್ಲ. ಪತಿ ಮುಷ್ತಾಕ್ ಅವರ ಜೊತೆಗೆ ಹೋಗಿ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿ ಬಂದ ಬಾನುಗೆ ಮನೆಯಲ್ಲಿ ಕುಟುಂಬ ಜವಬ್ದಾರಿ. ಮೊದಲ ಮಗಳು ಹುಟ್ಟಿದ ಬೆನ್ನಲ್ಲಿಯೇ ಮತ್ತೊಂದು, ಮಗದೊಂದು ಹೀಗೆ ಮೂರು ಮಕ್ಕಳ ತಾಯಿಯಾದ ಬಾನು ಅವರು ಬಾಣಂತನದಲ್ಲಿಯೇ ಹೆಚ್ಚು ಕಾಲ ಕಳೆಯಬೇಕಾಯಿತು.
ಓದು ಮತ್ತು ಬರವಣಿಗೆ ಬಗ್ಗೆ ತುಂಬಾ ತುಡಿತ ಹೊಂದಿದ್ದ ಬಾನುಗೆ ಪತಿ ಮುಷ್ತಾಕ್ ಬೆಂಬಲವಾಗಿ ನಿಂತರು. ಆಗ ಸಿಕ್ಕ ಲಂಕೇಶ್ ಅವರ ಸಂಪರ್ಕ ಅವರ ಅಕ್ಷರ ಲೋಕದ ಪಯಣದ ಜೊತೆಗೆ ಅದೃಷ್ಟದ ಬಾಗಿಲು ತೆರೆಸಿತು. ಹಾಸನದಿಂದ ಲಂಕೇಶ್ ಪತ್ರಿಕೆಗೆ ಒಂದು ದಶಕಗಳ ಕಾಲ ವರದಿಗಾರ್ತಿಯಾಗಿ ಕೆಲಸ ಮಾಡಿದ ಬಾನುಮುಷ್ತಾಕ್, ಕತೆ, ಕವನ ಬರೆಯಲಾರಂಭಿಸಿದ್ದರು. ಬಂಡಾಯ ಸಾಹಿತ್ಯ ಅವರ ಬರವಣಿಗೆಗೆ ಮತ್ತೊಂದು ಮೆರಗು ನೀಡಿತು. ಪ್ರೊ.ಎಂ.ಎನ್.ನಂಜುಂಡಸ್ವಾಮಿ ಸಂಪರ್ಕ ಮೂಲಕ ರೈತ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದು ಅಷ್ಟೆ ಅಲ್ಲ, ದಲಿತ ಸಂಘಟನೆಯಲ್ಲಿಯೂ ತೊಡಗಿಸಿಕೊಂಡಿದ್ದು, ಅವರ ವ್ಯಕ್ತಿತ್ವ ಇನ್ನಷ್ಟು ಮಾಗಲು ಕಾರಣ. ವಕೀಲರಾಗಿ ಅಷ್ಟೆ ಅಲ್ಲ, ಹಾಸನದ ನಗರಸಭೆ ಚುನಾವಣೆಗೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದು ವಿಶೇಷ.
ಬಾನುಮುಷ್ತಾಕ್ ಅವರು ಬರೆದ ಕಥೆಯನ್ನು ಆದರಿಸಿ ಗಿರೀಶ್ ಕಾಸರವಳ್ಳಿ ಅವರು ಮಾಡಿದ ಹಸೀನಾ ಚಿತ್ರಕ್ಕೆ ಮೂರು ರಾಷ್ಟ್ರಪ್ರಶಸ್ತಿಗಳು ಬಂದದ್ದು ಅವರ ಸಾಹಿತ್ಯ ಕೃಷಿಗೆ ಮತ್ತೊಂದು ಮೆರಗು ಬಂದಿತ್ತು.
ಸುಧೀರ್ಘ ಅವಧಿಯ ಅವರ ಸಾಹಿತ್ಯ ಕೃಷಿಗೆ ಬೂಕರ್ ಪ್ರಶಸ್ತಿ ಒಲಿದು ಬಂದಿರುವುದು ಅವರೊಳಗೆ ಮೇಲೈಸಿರುವ ಸೌಹಾರ್ಧತೆಗೆ ಇನ್ನೊಂದು ಮೆರಗು.