ಸಂಪಾದಕೀಯ: ಚೀನಾ ಆಪ್​ಗಳನ್ನು​ ಬ್ಯಾನ್ ಮಾಡಿರುವುದು​ ಸೂಕ್ತ ನಿರ್ಧಾರ

China
Published on

ಲಡಾಖ್ ಗಡಿಯಲ್ಲಿ ಚೀನಾದ ಸರಣಿ ಕಿರಿಕ್​ಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಒಂದಾದ ಮೇಲೊಂದರಂತೆ ಪ್ರತೀಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಚೀನಾವನ್ನು ಆರ್ಥಿಕವಾಗಿ ಕುಗ್ಗಿಸಬೇಕೆಂಬ ಉದ್ದೇಶದ ಈ ಕ್ರಮಗಳ ಮುಂದುವರಿದ ಭಾಗವಾಗಿ ಗೇಮಿಂಗ್ ಆಪ್ ಪಬ್​ಜಿ ಸೇರಿದಂತೆ ಒಟ್ಟು 118 ಆಪ್​ಗಳನ್ನು ಸರ್ಕಾರ ಬುಧವಾರ ನಿಷೇಧಿಸಿದೆ. ಈ ಮುಂಚೆ ಕೂಡ ಚೀನಾ ಮೂಲದ ಟಿಕ್​ಟಾಕ್ ಸೇರಿ 59 ಆಪ್​ಗಳನ್ನು ನಿಷೇಧಿಸಲಾಗಿತ್ತು. ಆರ್ಥಿಕ ಮತ್ತು ಸಾಮಾಜಿಕ ಆರೋಗ್ಯದ ಹಿತದೃಷ್ಟಿಯಿಂದಲೂ ಇದು ಸ್ವಾಗತಾರ್ಹ ಕ್ರಮ ಎಂದು ಹೇಳಬಹುದು. ಏಕೆಂದರೆ, ಟಿಕ್​ಟಾಕ್ ಮತ್ತು ಪಬ್​ಜಿ ಉಮೇದಿನಲ್ಲಿ ಅನೇಕರು ಪ್ರಾಣಕ್ಕೂ ಅಪಾಯ ತಂದುಕೊಂಡಿದ್ದರು. ‘ಮಾಹಿತಿ ತಂತ್ರಜ್ಞಾನ ಕಾಯ್ದೆಯ 69ಎ ಸೆಕ್ಷನ್ ಅನ್ವಯ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಈ ಆಪ್​ಗಳು ದೇಶದ ಸಾರ್ವಭೌಮತೆ, ಏಕತೆ, ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಕುರಿತು ಪೂರ್ವಗ್ರಹ ಭಾವನೆಗಳನ್ನು ಹೊಂದಿದ್ದವು. ಭಾರತದ ಸೈಬರ್ ವಲಯದ ಸುರಕ್ಷತೆ, ಸಾರ್ವಭೌಮತೆ ಹಿತರಕ್ಷಣೆ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತಿಳಿಸಿದೆ. ವರದಿಗಳ ಪ್ರಕಾರ, ದೇಶದಲ್ಲಿ ಸುಮಾರು 17ಕೋಟಿಯಷ್ಟು ಪಬ್​ಜಿ ಬಳಕೆದಾರರಿದ್ದಾರೆ. ಇದರಿಂದ ಅಪಾರ ಪ್ರಮಾಣ ಹಣ ಕಂಪನಿ ಕೈಸೇರುತ್ತದೆ. ಟಿಕ್​ಟಾಕ್ ಮತ್ತಿತರ ಆಪ್​ಗಳಿಂದಲೂ ಹೀಗೆ ದೊಡ್ಡ ಮೊತ್ತ ಚೀನಾ ಮೂಲದ ಕಂಪನಿಗಳ ಪಾಲಾಗುತ್ತಿತ್ತು. ಆ ಹಣವನ್ನು ಭಾರತವಿರೋಧಿ ಕೃತ್ಯಗಳಿಗೆ ಬಳಸುವ ಬಗ್ಗೆಯೂ ಸಂಶಯ ವ್ಯಕ್ತವಾಗುತ್ತಿದೆ.

ಇಂಥ ಕಂಪನಿಗಳ ಚಟುವಟಿಕೆಯಿಂದ ಆರ್ಥಿಕವಾಗಿ ಮಾತ್ರವಲ್ಲದೆ ಬಳಕೆದಾರರ ಗೌಪ್ಯ ಮಾಹಿತಿ ಕೂಡ ಅವುಗಳ ಪಾಲಾಗುತ್ತದೆ. ಏಕೆಂದರೆ, ಯಾವುದೇ ಆಪ್ ಡೌನ್​ಲೋಡ್ ಮಾಡುವಾಗ ಕೆಲವಷ್ಟು ಅನುಮತಿಗಳನ್ನು ಕೇಳಲಾಗುತ್ತದೆ. ಅದಕ್ಕೆ ಒಪ್ಪದಿದ್ದರೆ ಆಪ್ ಡೌನ್​ಲೋಡ್ ಆಗುವುದಿಲ್ಲ. ಇದಲ್ಲದೆ, ಬಹುತೇಕ ಮಂದಿಗೆ ಹೀಗೆ ಯಾವ್ಯಾವ ಮಾಹಿತಿಗಳನ್ನು ಕೇಳಲಾಗುತ್ತದೆ, ಅದರ ಪರಿಣಾಮವೇನು ಎಂಬ ಅಂದಾಜೇ ಇರುವುದಿಲ್ಲ. ಆದ್ದರಿಂದ ಬಳಕೆದಾರರ ಇಂಥ ಖಾಸಗಿ ಮಾಹಿತಿ ದುರುಪಯೋಗ ಸಾಧ್ಯತೆ ಬಗ್ಗೆ ಸಂಶಯ ಇದ್ದೇ ಇದೆ.

ಜಾಗತಿಕ ಸೂಪರ್​ಪವರ್ ಆಗುವ ಹಂಬಲ ಹೊಂದಿರುವ ಚೀನಾ ತನ್ನ ಈ ಉದ್ದೇಶ ಈಡೇರಿಕೆಗೆ ಯಾವ ದಾರಿ ಹಿಡಿಯಲೂ ಹಿಂದೆಮುಂದೆ ನೋಡುವ ಪೈಕಿಯಲ್ಲ. ಆ ದೇಶದ ಇಂಥ ದುಸ್ಸಾಹಸಕ್ಕೆ ಕಾರಣ ಅದರ ಬಳಿ ಇರುವ ಅಪಾರ ಧನರಾಶಿ. ಹೀಗಾಗಿ ಚೀನಾಕ್ಕೆ ಮೂಗುದಾಣ ಹಾಕಬೇಕೆಂದರೆ ಮೊದಲು ಅದರ ಆರ್ಥಿಕ ಸೊಕ್ಕನ್ನು ಕಡಿಮೆ ಮಾಡಬೇಕು. ಮೋದಿ ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದೆ. ಚೀನಾದಿಂದ ಆಗುವ ಆಮದು ಪ್ರಮಾಣ ತಗ್ಗಿಸಲು ಸ್ವಾವಲಂಬಿ ಭಾರತ ಯೋಜನೆ, ಅಲ್ಲಿಂದ ಬರುವ ವಸ್ತುಗಳ ತೀವ್ರ ತಪಾಸಣೆ, ಆಟಿಕೆ ಕ್ಷೇತ್ರದಲ್ಲಿ ಚೀನಾ ಪಾರಮ್ಯಕ್ಕೆ ಸೆಡ್ಡು ಹೊಡೆಯಲು ಚಿಂತನೆ, ಇಂಧನ ರಂಗದಲ್ಲಿ ಬೃಹತ್ ಯೋಜನೆಗಳ ಗುತ್ತಿಗೆಯಲ್ಲಿ ಚೀನಾ ಕಂಪನಿಗಳು ಭಾಗವಹಿಸುವುದಕ್ಕೆ ನಿಷೇಧ- ಮುಂತಾದ ಕ್ರಮಗಳನ್ನು ಸರ್ಕಾರ ಈಗಾಗಲೇ ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಇಂಥ ಮತ್ತಷ್ಟು ಕ್ರಮಗಳು ನಿರೀಕ್ಷಿತ. ಇದು ಅನಿವಾರ್ಯ ಕೂಡ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net