

ಮುಂಬೈ: ಸಾರ್ವಜನಿಕ ವಲಯದ ಬ್ಯಾಂಕುಗಳ ಶಾಖಾ ಸಿಬ್ಬಂದಿ ಸ್ಥಳೀಯ ಭಾಷೆ ತಿಳಿದಿರುವುದನ್ನು ಹಿರಿಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಹೇಳಿದ್ದಾರೆ. ಬ್ಯಾಂಕ್ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳೀಯ ಭಾಷೆ ಮಾತನಾಡದೇ ಅಲ್ಲಿನ ಜನರ ಮತ್ತು ಸಂಘಟನೆಗಳ ವಿರೋಧಕ್ಕೆ ತುತ್ತಾಗುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ವಿತ್ತ ಸಚಿವರ ಈ ಹೇಳಿಕೆ ಮಹತ್ವ ಪಡೆದಿದೆ.
ಎಸ್ಬಿಐ ಬ್ಯಾಂಕಿಂಗ್ ಮತ್ತು ಎಕನಾಮಿಕ್ಸ್ ಕಾನ್ಕ್ಲೇವ್ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ, ‘ಸಿಬ್ಬಂದಿಗೆ ಸ್ಥಳೀಯ ಭಾಷೆ ಗೊತ್ತಿಲ್ಲದೇ ಇರುವುದರಿಂದ ಗ್ರಾಹಕರ ಜತೆಗಿನ ನಿಕಟ ಸಂಪರ್ಕ ಕಡಿಮೆಯಾಗುತ್ತಿದೆ. ಅನಿವಾರ್ಯವಾಗಿ ಹೊರಗಿನ ಕ್ರೆಡಿಟ್ ಇನ್ಪಮೇಶನ್ ಕಂಪನಿಗಳ ಮೇಲೆ ಬ್ಯಾಂಕ್ಗಳು ಅವಲಂಬಿತವಾಗಬೇಕಾಗಿದೆ. ಆ ಕಂಪನಿಗಳು ಡೇಟಾ ಅಪ್ಡೇಟ್ ಮಾಡಲು ದೀರ್ಘ ಸಮಯ ತೆಗೆದುಕೊಳ್ಳುತ್ತವೆ. ಕೊನೆಗೆ, ಗ್ರಾಹಕರಿಗೆ ಸಾಲ ನಿರಾಕರಿಸುವ ಸ್ಥಿತಿ ನಿರ್ವಣವಾಗುತ್ತಿ್ತೆ’ ಎಂದು ವಿಷಾದಿಸಿದರು.
‘ಸ್ಥಳೀಯ ಭಾಷೆ ಮಾತನಾಡುವ ಜನರನ್ನು ನೇಮಿಸಿಕೊಳ್ಳುವುದು ಮತ್ತು ಅವರಿಗೆ ಉತ್ತಮ ವೇತನ ನೀಡುವುದನ್ನು ಖಚಿತಪಡಿಸಿಕೊಳ್ಳಲು ನೇಮಕಾತಿ ಮತ್ತು ಮಾನವ ಸಂಪನ್ಮೂಲ ನೀತಿಗಳಲ್ಲಿ ಬ್ಯಾಂಕ್ಗಳು ಬದಲಾವಣೆ ಮಾಡಿಕೊಳ್ಳಬೇಕು. ಪ್ರತಿ ಶಾಖೆಯಲ್ಲಿ ನಿಯೋಜಿತಗೊಂಡಿರುವ ಪ್ರತಿ ಸಿಬ್ಬಂದಿ ತನ್ನ ಗ್ರಾಹಕನನ್ನು ಅರ್ಥ ಮಾಡಿಕೊಳ್ಳಬೇಕು. ಸ್ಥಳೀಯ ಭಾಷೆ ಮಾತನಾಡಬೇಕು. ಉನ್ನತ ಹುದ್ದೆಯಲ್ಲಿರುವವರು ಮಾತನಾಡದಿದ್ದರೂ, ಶಾಖಾ ಮಟ್ಟದ ಅಧಿಕಾರಿಯಾದರೂ ಸ್ಥಳೀಯ ಭಾಷೆ ಮಾತನಾಡಬೇಕು’ ಎಂದು ಹೇಳಿದರು. ‘ಆಯಾ ಭಾಗದಲ್ಲಿ ಅಲ್ಲಿನ ಭಾಷೆ ಬಲ್ಲವರನ್ನೇ ನೇಮಕ ಮಾಡದಿರುವ ಬಗ್ಗೆ ನಾನು ಸಾಕಷ್ಟು ಟೀಕೆ ಎದುರಿಸಿದ್ದೇನೆ. ಈ ಒಂದು ವಿಷಯದಲ್ಲಿ ಮಾತ್ರ ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗಿಲ್ಲ. ಸ್ಥಳೀಯ ಭಾಷೆ ಕಲಿತು ಮಾತನಾಡುವ ಸಿಬ್ಬಂದಿಗೆ ವೇತನ ಹೆಚ್ಚಳದಲ್ಲಿ ಆದ್ಯತೆ ಕೊಡಿ. ಬ್ಯಾಂಕ್ಗಳ ಬೆಳವಣಿಗೆಯ ದೃಷ್ಟಿಯಿಂದಲೂ ಇದು ಒಳ್ಳೆಯದು. ಮೊದಲೆಲ್ಲ ಗ್ರಾಹಕರ ಜತೆ ಬ್ಯಾಂಕ್ ಸಿಬ್ಬಂದಿಗೆ ವೈಯಕ್ತಿಕ ಪರಿಚಯ ಇರುತ್ತಿತ್ತು. ಇದರಿಂದ ಯಾರಿಗೆ ಸಾಲ ಕೊಟ್ಟರೆ ವಾಪಸ್ ಬರುತ್ತದೆ, ಯಾರಿಗೆ ಕೊಟ್ಟರೆ ಬರುವುದಿಲ್ಲ ಎಂಬುದೂ ತಿಳಿಯುತ್ತಿತ್ತು. ಈಗ ಅಂತಹ ಸ್ಥಿತಿಯೇ ಉಳಿದಿಲ್ಲ. ಬ್ಯಾಂಕುಗಳು ಬಾಹ್ಯ ಕ್ರೆಡಿಟ್ ಇನ್ಪಮೇಶನ್ ಕಂಪನಿಗಳ ಮೇಲೆ ಅವಲಂಬಿತವಾಗುವಂತಾಗಿದೆ. ತಂತ್ರಜ್ಞಾನದ ಜತೆ ವೈಯಕ್ತಿಕ ಸಂಪರ್ಕ ಉಳಿಸಿಕೊಳ್ಳುವ ಅಗತ್ಯವಿದೆ’ ಎಂದರು.
ವಿಶ್ವದರ್ಜೆ ಬ್ಯಾಂಕುಗಳು ಅಗತ್ಯ
ದೇಶಕ್ಕೆ ದೊಡ್ಡ ಮತ್ತು ವಿಶ್ವದರ್ಜೆಯ ಬ್ಯಾಂಕುಗಳ ಅವಶ್ಯಕತೆಯಿದೆ. ಈ ಸಂಬಂಧ ಆರ್ಬಿಐ ಜತೆ ಚರ್ಚೆ ನಡೆಯುತ್ತಿದೆ. ಉದ್ಯಮಗಳಿಗೆ ಸಾಲದ ಹರಿವನ್ನು ಹೆಚ್ಚಿಸಬೇಕಾಗಿದೆ. ಮೂಲಸೌಕರ್ಯ ಸೃಷ್ಟಿ ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.