ಬ್ಯಾಂಕ್​ ಲಾಕರ್​ ಭದ್ರತೆ ಪರಿಶೀಲಿಸಿದ ಪೊಲೀಸರು

19-RNR-10
Published on

ಹಾವೇರಿ: ಬ್ಯಾಂಕ್​ಗಳಲ್ಲಿನ ಲಾಕರ್​ಗಳಿಗೆ ಇರುವ ಭದ್ರತೆ, ಸಿಸಿಟಿವಿ ನಿರ್ವಹಣೆ, ಎಟಿಎಂಗಳ ಸುರಕ್ಷತೆ ಸೇರಿದಂತೆ ಆಯಾ ಬ್ಯಾಂಕ್​ಗಳು ಕೈಗೊಂಡಿರುವ ಭದ್ರತಾ ಕ್ರಮಗಳನ್ನು ಪರಿಶೀಲಿಸಲು ಜಿಲ್ಲಾ ಪೊಲೀಸ್​ ಇಲಾಖೆ ಮುಂದಾಗಿದೆ.

ಬೀದರ್​ ಮತ್ತು ಮಂಗಳೂರಿನ ಕೋಟೆಕಾರ್​ ಬ್ಯಾಂಕ್​ನಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆಕೋರರು ನುಗ್ಗಿ ಬ್ಯಾಂಕ್​ನಲ್ಲಿದ್ದ ಹಣ, ಒಡವೆ ದೋಚಿರುವುದಕ್ಕೆ ಪೊಲೀಸ್​ ಇಲಾಖೆಯ ವೈಲ್ಯದ ಬಗ್ಗೆಯೂ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್​ ಇಲಾಖೆ ಎಚ್ಚೆತ್ತುಕೊಂಡಿದೆ.

ಅದಕ್ಕಾಗಿ ಪ್ರತಿಯೊಂದು ಬ್ಯಾಂಕ್​ಗಳಿಗೆ ಪೊಲೀಸ್​ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಕಳೆದ ಮೂರು ದಿನಗಳಿಂದ ವಿವಿಧ ಬ್ಯಾಂಕ್​ಗಳಿಗೆ ಪೊಲೀಸರು ಭೇಟಿ ನೀಡಿ ಭದ್ರತೆ ಪರಿಶೀಲಿಸುತ್ತಿದ್ದಾರೆ. ಬ್ಯಾಂಕ್​ಗಳ ಲಾಕರ್​ ವ್ಯವಸ್ಥೆ, ಸಿಸಿಟಿವಿ ಕ್ಯಾಮರಾ ಕಾರ್ಯನಿರ್ವಹಿಸುತ್ತಿರುವುದನ್ನು ಪೊಲೀಸರೆ ಸ್ವತಃ ನೋಡಿ ಬರುತ್ತಿದ್ದಾರೆ. ಅಲ್ಲದೆ ಬ್ಯಾಂಕ್​ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಆಯಾ ಠಾಣೆ ಅಧಿಕಾರಿಗಳು ಸಭೆ ನಡೆಸಿ ಸೂಕ್ತ ಮಾಹಿತಿ ನೀಡುತ್ತಿದ್ದಾರೆ.

ಕೆಲವು ಬ್ಯಾಂಕ್​ಗಳಲ್ಲಿ ಸಿಸಿಟಿವಿ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು, ಇದ್ದರೂ ವಿಡಿಯೋ ಕಾಣಿಸದಿರುವುದು ಇತ್ಯಾದಿ ಲೋಪಗಳನ್ನು ಕಂಡು ತಕ್ಷಣ ಸರಿಪಡಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಅಲ್ಲದೆ ಬ್ಯಾಂಕಿನ ಸೆಕ್ಯುರಿಟಿ ಗಾರ್ಡ್​ಗಳು ವಹಿಸಬೇಕಾದ ಎಚ್ಚರಿಕೆಯನ್ನು ತಿಳಿಸಿ ಬರುತ್ತಿದ್ದಾರೆ.

ಒಂದು ವಾರ ಬ್ಯಾಂಕ್​, ಭದ್ರತೆ ಬಗ್ಗೆ ಫೋಕಸ್​...

ಬ್ಯಾಂಕ್​ಗಳ ಭದ್ರತಾ ವ್ಯವಸ್ಥೆ ಪರಿಶೀಲನೆಗಾಗಿಯೆ ಈ ಒಂದು ವಾರವಿಡಿ ಗಮನ ಕೇಂದ್ರೀಕರಿಸಲು ಪೊಲೀಸ್​ ಇಲಾಖೆ ಮುಂದಾಗಿದೆ. ಸ್ವತಃ ಎಸ್ಪಿ ಅಂಶು ಕುಮಾರ, ಈ ಬಗ್ಗೆ ವಿಶೇಷ ಗಮನ ಹರಿಸಿದ್ದು, ಈಗಾಗಲೆ ಎಲ್ಲ ಪೊಲೀಸ್​ ಠಾಣೆ, ಉಪವಿಭಾಗಗಳ ಹಂತದಲ್ಲಿ ಬ್ಯಾಂಕ್​ ಸಿಬ್ಬಂದಿಯೊಂದಿಗೆ ಸಭೆ ನಡೆಸಲಾಗಿದೆ.

ಜಿಲ್ಲೆಯಲ್ಲಿ ಹಲವು ಬ್ಯಾಂಕುಗಳಲ್ಲಿ ಕಳ್ಳತನದಂತಹ ಪ್ರಕರಣ ಈ ಹಿಂದೆ ನಡೆದಿದೆ. ಆದರೂ ಕೆಲವು ಬ್ಯಾಂಕ್​ ಶಾಖೆಗಳು ಭದ್ರತಾ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕೆಲ ಬ್ಯಾಂಕ್​ಗಳಲ್ಲಿ ಸಿಸಿಟಿವಿ ದುರಸ್ತಿಯಲ್ಲಿದ್ದರೂ ಸರಿಪಡಿಸದಿರುವುದು, ವೈಯರಿಂಗ್​ ಸಮಸ್ಯೆಯಿಂದ ಸೈರನ್​ ಮೊಳಗದಿರುವುದು, ಎಟಿಎಂಗಳಲ್ಲಿ ಸಿಸಿಟಿವಿ ಇಲ್ಲದಿರುವುದು, ಸೆಕ್ಯುರಿಟಿ ಗಾರ್ಡ್​ ನಿಯೋಜಿಸದಿರುವುದು ಸೇರಿದಂತೆ ಬ್ಯಾಂಕ್​ಗಳು ನಿರ್ಲಕ್ಷ$್ಯ ತೋರುತ್ತಿರುವುದು ಕಳ್ಳತನ ಘಟನೆಗೆ ಕಾರಣವಾಗುತ್ತಿದೆ. ಆದರೆ, ಬಳಿಕ ಪೊಲೀಸ್​ ಇಲಾಖೆ ಮೇಲೆ ಆರೋಪ ಕೇಳಿಬರುವುದರಿಂದ ಈ ಸಲ ಪೊಲೀಸರು ಈ ವಿಷಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಅದಕ್ಕಾಗಿ ಈ ವಾರವಿಡಿ ಗಮನ ನೀಡಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net