ಉಡುಪಿ: ಕೇಂದ್ರ ಸರ್ಕಾರ ಮುಂಗಡಪತ್ರದಲ್ಲಿ ಆರ್ಥಿಕ ಸುಧಾರಣೆಗಾಗಿ ಕೆಲವು ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಖಾಸಗೀಕರಣಗೊಳಿಸುವ ಬಗ್ಗೆ ಪ್ರಸ್ತಾಪಿಸಿದ್ದು, ಇದನ್ನು ಖಂಡಿಸಿ ಬ್ಯಾಂಕ್ ಯೂನಿಯನ್ ಗಳ ಸಂಯುಕ್ತ ವೇದಿಕೆ ವತಿಯಿಂದ ಉಡುಪಿ ಕೆನರಾ ಬ್ಯಾಂಕ್ ಮುಂಭಾಗದಲ್ಲಿ 2 ದಿನಗಳ ಮುಷ್ಕರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯು ಎಫ್ ಬಿ ಯು ಸಂಚಾಲಕ ಹೆರಾಲ್ಡ್ ಡಿಸೋಜ, ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೇಕಡ 75ರಷ್ಟು ಪಾಲು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣದಿಂದ ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳು ಸೂಕ್ತ ರೀತಿಯಲ್ಲಿ ತಲುಪಲು ಸಾಧ್ಯವಿಲ್ಲ . ಜೊತೆಗೆ ಕೇಂದ್ರ ಸರ್ಕಾರದ ಈ ನೀತಿ ಜನವಿರೋಧಿ ಹಾಗೂ ಕಾರ್ಮಿಕ ವಿರೋಧಿಯಾಗಿದೆ ಎಂದು ಖಂಡಿಸಿದರು.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ ಮುಖಂಡರಾದ ರಮೇಶ್, ಅಶೋಕ್ ಕೋಟ್ಯಾನ್, ಸುಪ್ರಿಯ, ರವಿಶಂಕರ್, ರವೀಂದ್ರ, ಮರಿಯ ಮಥಾಯಿಸ್, ಅವಿನಾಶ್ , ಪ್ರೇಮನಾಥ್ ಪೂಜಾರಿ ಜಿಲ್ಲಾ ಬ್ಯಾಂಕ್ ನೌಕರ ಸಂಘದ ಅಧ್ಯಕ್ಷ ರಾಮ್ ಮೋಹನ್, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.