

ಬೆಂಗಳೂರು: ಪ್ರತಿಯೊಬ್ಬರಿಗೂ ವ್ಯವಹಾರಕ್ಕೆ ಬ್ಯಾಂಕ್ ಖಾತೆ ಅತ್ಯಗತ್ಯ. ಖಾತೆಯಿಂದ ನಿಯಮಿತವಾಗಿ ಹಣವನ್ನು ಜಮೆ, ಠೇವಣಿ ಮಾಡುವುದು ಅಥವಾ ಹಿಂಪಡೆಯುವುದು ಮಾಡಿದರೆ ರಿಸ್ಕ್ ಇಲ್ಲ. ಆದರೆ ಖಾತೆಯಿಂದ ಭಾರಿ ಮೊತ್ತದ ಹಣವನ್ನು ಹಿಂಪಡೆಯುವುದು, ಜಮಾ ಮಾಡುವುದು ಮಾಡಿದರೆ, ಆದಾಯ ತೆರಿಗೆ ಇಲಾಖೆ ನಿಮ್ಮ ಮೇಲೆ ವಿಶೇಷ ನಿಗಾ ಇರಿಸುತ್ತದೆ. ಕ್ರಮಕ್ಕೂ ಮುಂದಾಗುತ್ತದೆ.
ಕೆಲವರು ಉಳಿತಾಯ ಖಾತೆಗಳ ಮೂಲಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಾರೆ. ಹೀಗೆ ಮಾಡುವುದರಿಂದ ತೊಂದರೆಗೆ ಸಿಲುಕುವುದು ನಿಶ್ಚಿತ. ಏಕೆಂದರೆ ಆದಾಯ ತೆರಿಗೆ(ಐಟಿ) ಇಲಾಖೆಯು ಬ್ಯಾಂಕ್ ಖಾತೆಗಳಲ್ಲಿ ಜಮೆ, ಠೇವಣಿ ಮತ್ತು ಹಿಂಪಡೆಯುವಿಕೆಯ ಮೇಲೆ ಕಣ್ಗಾವಲು ಇಡುವ ಅಧಿಕಾರ ಹೊಂದಿರುತ್ತದೆ.
ಮನಿ ಲಾಂಡರಿಂಗ್, ತೆರಿಗೆ ವಂಚನೆ ಮತ್ತು ಇತರ ಹಣಕಾಸು ಚಟುವಟಿಕೆಗಳನ್ನು ತಡೆಗಟ್ಟಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
ಉಳಿತಾಯ ಖಾತೆಗಳಲ್ಲಿ ವರ್ಷಕ್ಕೆ 10 ಲಕ್ಷ ರೂಗಿಂತ ಹೆಚ್ಚು ಜಮೆ, ಠೇವಣಿ ಮಾಡಿದರೆ ಬ್ಯಾಂಕ್‌ಗಳು ಆದಾಯ ತೆರಿಗೆ ಇಲಾಖೆಗೆ ವಿವರಗಳನ್ನು ಕಳುಹಿಸುತ್ತವೆ. ಚಾಲ್ತಿ ಖಾತೆ 50 ಲಕ್ಷ ರೂ.ಮೀರಿದರೆ ಐಟಿ ಇಲಾಖೆ ಗಮನಹರಿಸುತ್ತದೆ.
ಐಟಿ ಕಾಯ್ದೆ 1961 ರ ಸೆಕ್ಷನ್ 68 ರ ಪ್ರಕಾರ ಆದಾಯದ ಮೂಲವನ್ನು ಹೇಳಲಾಗದಿದ್ದರೆ, ಸರ್ಕಾರವು 25 ಪ್ರತಿಶತ ಸರ್ ಚಾರ್ಜ್ ಮತ್ತು 4 ಪ್ರತಿಶತ ಸೆಸ್ ಸೇರಿದಂತೆ ಒಟ್ಟು 60 ಪ್ರತಿಶತವನ್ನು ತೆರಿಗೆ ರೂಪದಲ್ಲಿ ಪಡೆದುಕೊಳ್ಳುತ್ತದೆ. ಅಲ್ಲದೆ ಕಾನೂನು ಕ್ರಮ ಜರುಗಿಸುತ್ತದೆ.
ಇನ್ನು ಸೆಕ್ಷನ್ 194ಎನ್ ಪ್ರಕಾರ, 1 ವರ್ಷದಲ್ಲಿ ಖಾತೆಯಿಂದ 1 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣ ವಹಿವಾಟು ನಡೆದರೆ ಶೇ 2ಟಿಡಿಎಸ್ ಕಡಿತಗೊಳಿಸಲಾಗುತ್ತದೆ. ಅಲ್ಲದೆ, ಮೂರು ವರ್ಷದಿಂದ ಐಟಿ ರಿಟರ್ನ್ ಸಲ್ಲಿಸದವರು ಶೇ. 5 ರವರೆಗೆ ಟಿಡಿಎಸ್ ಪಾವತಿಸಬೇಕಾಗುತ್ತದೆ.
ಹೀಗಾಗಿಯೇ ಬ್ಯಾಂಕ್ ಖಾತೆದಾರರು ತಮ್ಮ ಆದಾಯದ ಮೂಲಗಳ ದಾಖಲೆಗಳನ್ನು ಸರಿಯಾಗಿ ಇಡಬೇಕು. ಆದಾಯ ತೆರಿಗೆ ರಿಟರ್ನ್ಸ್ ಅನ್ನು ನಿಯಮಿತವಾಗಿ ಸಲ್ಲಿಸಬೇಕು. ಇಲ್ಲವಾದರೆ ಐಟಿ ಕೈಗೆ ಸಿಕ್ಕಿಬೀಳುವುದು ಖಚಿತ.