ಬಂಜಾರ ಸಮಾಜದಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

25-RNR-04
Published on

ರಾಣೆಬೆನ್ನೂರ: ರಾಜ್ಯ ಸರ್ಕಾರ ಒಳ ಮೀಸಲಾತಿಯ ಕುರಿತು ಅ. 28ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲು ತಯಾರಿ ನಡೆಸುತ್ತಿರುವುದನ್ನು ವಿರೋಧಿಸಿ ಬಂಜಾರ ಸಮುದಾಯದ ರಾಷ್ಟ್ರೀಯ ಗೋರ್​ ಸೇನಾ ಸಂಘಟನೆ ರಾಜ್ಯ ಘಟಕದ ಸದಸ್ಯರು ಶುಕ್ರವಾರ ನಗರದಲ್ಲಿ ಸ್ಥಳಿಯ ಶಾಸಕರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯ ಬಂಜಾರ ಸಮಾಜಕ್ಕೆ ಕಾಡುತ್ತಿರುವ ಒಳಮೀಸಲಾತಿ ಮತ್ತು ವರ್ಗೀಕರಣವನ್ನು ರಾಷ್ಟ್ರೀಯ ಗೋರ್​ ಸೇನಾ ಸಂಘಟನೆ ರಾಜ್ಯ ಘಟಕ ತೀವ್ರವಾಗಿ ವಿರೋಧಿಸುತ್ತದೆ. ಈ ವಿಚಾರವಾಗಿ ರಾಜ್ಯ ಸರ್ಕಾರವು ಒಳಮೀಸಲಾತಿ ಕುರಿತು ಅ. 28ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲು ತಯಾರಿ ನಡೆಸುತ್ತಿರುವುದನ್ನು ಸಹ ಖಂಡಿಸುತ್ತದೆ.

ರಾಜ್ಯದ ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಒಂದು ಗುಂಪಿಗೆ ಸೇರಿಸಿ, ಈ ಸಮುದಾಯಗಳನ್ನು ಸಮಾಜದ ಮುಖ್ಯ ವಾಹಿನಿಯಿಂದ ಹೊರಗಿಡಬೇಕೆನ್ನುವ ಯತ್ನವು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಅಂಬೇಡ್ಕರ್​ ಅವರು ಸಂವಿಧಾನಾತ್ಮಕವಾಗಿ ನೀಡಿರುವ ಮೀಸಲಾತಿಯನ್ನು ಅಸಂವಿಧಾನಾತ್ಮಕ ಹಾಗೂ ಅವೈಜ್ಞಾನಿಕವಾಗಿ ವರ್ಗೀಕರಣವನ್ನು ಸರ್ಕಾರ ಮಾಡಕೂಡದು.

ಮೀಸಲಾತಿಯ ವರ್ಗೀಕರಣ ರಾಜ್ಯದಲ್ಲಿರುವ ಎಲ್ಲ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೆ ಹಾಗೂ ವೈಜ್ಞಾನಿಕವಾಗಿ ಸರಿಯಾದ ದತ್ತಾಂಶ ಸಂಗ್ರಹಿಸಲಾರದೆ, ತರಾತುರಿಯಲ್ಲಿ ಮಾಡಿಕೊಡರು. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆಥಿರ್ಕ ಸ್ಥಿತಿಗಳು, ರಾಜಕೀಯ ಸ್ಥಾನಮಾನ, ಹಾಗೂ ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸದೆ ಒಳಮೀಸಲು ಹಂಚಿಕೆಯ ನಿರ್ಧಾರ ಸಮಂಜಸವಾದ ನಡೆಯಲ್ಲ.

ಈ ಹಿಂದೆ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಲು ಬಂದ ಬಿಜೆಪಿ ವಿರುದ್ಧ ಬಿಜೆಪಿ ಹಠಾವ್​ ತಾಂಡಾ ಬಚಾವ್​ ಎಂಬ ಘೋಷಣೆ ಮಾಡಲಾಗಿತ್ತು. ಇದು ಮುಂಬರುವ ದಿನಗಳಲ್ಲಿ ಕಾಂಗ್ರೆಸ್​ ಹಠಾವ್​ ತಾಂಡಾ ಬಟಾವ್​ ಎಂದು ಬದಲಾಗದಂತೆ ನಿಗಾವಹಿಸಲು ಎಚ್ಚರಿಸುತ್ತಿದ್ದೇವೆ ಎಂದು ಆಗ್ರಹಿಸಿದರು.

ಪ್ರಮುಖರಾದ ರಾಮಪ್ಪ ನಾಯಕ, ಸೋಮಪ್ಪ ಲಮಾಣಿ, ಬೀರಪ್ಪ ಲಮಾಣಿ, ದಾನಪ್ಪ ಪೂಜಾರ, ಹಾಲೇಶ ಲಮಾಣಿ, ಮಾಲತೇಶ ಲಮಾಣಿ, ಚಂದ್ರು ಲಮಾಣಿ, ಮಾರುತಿ ಲಮಾಣಿ, ಆನಂದ ಲಮಾಣಿ, ದೇವಲಪ್ಪ ಲಮಾಣಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net