

ಶಿವಮೊಗ್ಗ: ಒಳಮೀಸಲಾತಿ ವರ್ಗೀಕರಣ ವಿರೋಧಿಸಿ ಜಿಲ್ಲಾ ಬಂಜಾರ ಸಂಘ, ಕರ್ನಾಟಕ ಬಂಜಾರ (ಲಂಬಾಣಿ) ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಸೆ.12ರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಶಾಸಕ, ಬಂಜಾರ ಸಂಘದ ಜಿಲ್ಲಾಧ್ಯಕ್ಷ ಕೆ.ಬಿ.ಅಶೋಕ್ ನಾಯ್ಕ ಹೇಳಿದರು.
ಜಿಲ್ಲೆಯ ಎಲ್ಲ ತಾಂಡಾಗಳ ಮುಖ್ಯಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು. ಸೆ.20ರವರೆಗೂ ಪ್ರತಿಭಟನೆ ನಡೆಯಲಿದೆ. ಆಗಲೂ ನಮ್ಮ ಬೇಡಿಕೆ ಈಡೇರದಿದ್ದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಸಮುದಾಯದಿಂದ ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರಿಶಿಷ್ಟ ಜಾತಿಗಳ ಒಳಮೀಸಲಾತಿಗಾಗಿ ರಚನೆಯಾಗಿದ್ದ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ ರಾಜ್ಯ ಸರ್ಕಾರ ಈ ವರದಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿ, ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ದೂರಿದರು.
ಸ್ಪ ೃಶ್ಯ, ಅಸ್ಪ ೃಶ್ಯ ಎಂದು ಅಸಾಂವಿಧಾನಿಕ ಪದ ಬಳಸಿರುವುದರ ಹಿಂದೆ ಯಾವ ತಂತ್ರಗಾರಿಕೆಯಿದೆ. ಪರಿಶಿಷ್ಟ ಜಾತಿಗಳಲ್ಲಿ ಬರುವ ಎಲ್ಲ ಜಾತಿಗಳು ಶೋಷಿತ ಹಾಗೂ ದಮನಿತ ಸಮುದಾಯಗಳೇ ಆಗಿರುವಾಗ ಸ್ಪಶ್ಯ, ಅಸ್ಪಶ್ಯ ಎಂದು ವಿಂಗಡಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ, ‘ಸಿ’ ವರ್ಗದವರಿಗೂ ಶೇ.6ರಷ್ಟು ಮೀಸಲಾತಿ ನೀಡಬೇಕು. ಅಲೆಮಾರಿಗಳನ್ನು ಯಾವ ವರ್ಗಕ್ಕೂ ಸೇರಿಸದೆ ಪ್ರತ್ಯೇಕವಾಗಿ ಶೇ.1ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ನಾನ್ಯಾನಾಯ್ಕ, ನಾಗೇಶ್‌ನಾಯ್ಕ, ಟಾಕ್ಯಾನಾಯ್ಕ, ಆನಂದ್, ವಾಸುದೇವ ನಾಯ್ಕ, ಮಂಜುನಾಥ್ ನಾಯ್ಕ, ಯಂಕ್ಟಾನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.