ಸಂಪಾದಕೀಯ- ಬಾಂಗ್ಲಾದೇಶದ ಉದ್ಧಟತನ

Untitled design (1)
Published on

ವಕ್ಛ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರವನ್ನು ಉಲ್ಲೇಖಿಸಿರುವ ಬಾಂಗ್ಲಾದೇಶ ಅಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳುವ ಮೂಲಕ, ಮತ್ತೊಮ್ಮೆ ಉದ್ಧಟತನ ಮೆರೆದಿದೆ. ಬಾಂಗ್ಲಾದೇಶದ ಈ ಹೇಳಿಕೆ ಹಾಸ್ಯಾಸ್ಪದ. ಏಕೆಂದರೆ, ಬಾಂಗ್ಲಾದೇಶದ ಸ್ಥಿತಿ ಈಗ ಏನಾಗಿದೆ, ರಾಜಕೀಯ ಅಸ್ಥಿರತೆ ಹೇಗೆ ತಾಂಡವವಾಡುತ್ತಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ವಿಚಾರ. ತನ್ನ ದೇಶದಲ್ಲೇ ಅಲ್ಪಸಂಖ್ಯಾತರ ವಿರುದ್ಧ ನಿರಂತರ ದಾಳಿ, ದೌರ್ಜನ್ಯ ನಡೆಯುತ್ತಿದ್ದರೂ ಅಲ್ಲಿನ ಉಸ್ತುವಾರಿ ಸರ್ಕಾರ ಕೈಕಟ್ಟಿ ಕುಳಿತಿದೆ. ಭಾರತ ತನ್ನ ದೇಶದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಮರ್ಥವಾಗಿದ್ದು, ಭಾರತದ ಆಂತರಿಕ ವಿಷಯಗಳಲ್ಲಿ ಬಾಂಗ್ಲಾದೇಶ ಮೂಗು ತೂರಿಸುವ ಯಾವುದೇ ಅಗತ್ಯವಿಲ್ಲ. ಮುಖ್ಯವಾಗಿ, ಪಶ್ಚಿಮ ಬಂಗಾಳದ ಮುಶಿದಾಬಾದ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಡೆದ ಹಿಂಸಾಚಾರದಲ್ಲಿ ಬಾಂಗ್ಲಾ ನುಸುಳುಕೋರರ ಕೈವಾಡವಿರುವುದು ಪ್ರಾಥಮಿಕ ತನಿಖೆಯ ವೇಳೆ ದೃಢಪಟ್ಟಿದೆ. ಗಡಿ ಭದ್ರತಾ ಪಡೆ (ಬಿಎಸ್​ಎಫ್) ಮೇಲಿಂದ ಮೇಲೆ ಕಾರ್ಯಾಚರಣೆ ನಡೆಸಿ ಬಾಂಗ್ಲಾ ನುಸುಳುಕೋರರನ್ನು ಬಂಧಿಸುತ್ತಿದೆ. ಈ ಎಲ್ಲ ಸಂಗತಿಗಳು ಉಂಟುಮಾಡಿರುವ ಮುಖಭಂಗದಿಂದ ನುಣುಚಿಕೊಳ್ಳಲು ಅಥವಾ ಗಮನವನ್ನು ಬೇರೆಡೆ ಸೆಳೆಯಲು ಬಾಂಗ್ಲಾದೇಶ ಈ ರೀತಿಯ ಹತಾಶ ಹೇಳಿಕೆಗಳನ್ನು ನೀಡುತ್ತಿರುವುದು ನಿಜಕ್ಕೂ ವಿಪರ್ಯಾಸಕರ.

ಬಾಂಗ್ಲಾದೇಶದ ಹೇಳಿಕೆಗೆ ಭಾರತದ ವಿದೇಶಾಂಗ ಇಲಾಖೆ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಬಾಂಗ್ಲಾದೇಶದ ಹೇಳಿಕೆ ಧೂರ್ತತನದಿಂದ ಕೂಡಿದೆ. ತನ್ನಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಹತ್ಯೆ ಮತ್ತು ದಾಳಿ ಘಟನೆಗಳನ್ನು ಮರೆಮಾಚಲು ಅದು ಈ ರೀತಿ ಮಾಡುತ್ತಿದೆ. ಅಲ್ಲದೆ, ಬಾಂಗ್ಲಾ ಅಲ್ಪಸಂಖ್ಯಾತರ ಮೇಲೆ ದಾಳಿ ಮಾಡಿದ ತಪ್ಪಿತಸ್ಥರು ಕಾನೂನಿಯ ಭಯವಿಲ್ಲದೆ ಅಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದಾರೆ’ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಪ್ರಬಲ ತಿರುಗೇಟು ನೀಡಿರುವುದು ಸೂಕ್ತವಾಗಿಯೇ ಇದೆ.

2024ರ ಆಗಸ್ಟ್​ನಲ್ಲಿ ಪ್ರಧಾನಿ ಶೇಖ್ ಹಸೀನಾ ದೇಶ ತೊರೆದ ಮೇಲೆ ಉಂಟಾದ ಅರಾಜಕತೆ ಮತ್ತು ಮಧ್ಯಂತರ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಬಾಂಗ್ಲಾ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯದ 2400 ಘಟನೆಗಳು ವರದಿಯಾಗಿವೆ. ಈ ಪೈಕಿ 72 ಘಟನೆಗಳು 2025ರಲ್ಲಿ ಸಂಭವಿಸಿವೆ. ಹಿಂದು ಮಂದಿರಗಳ ಮೇಲೆ ಮತ್ತೆ ಮತ್ತೆ ದಾಳಿ ನಡೆಸಲಾಗುತ್ತಿದ್ದು, ಹಿಂದುಗಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಈಗಲೂ ಅಲ್ಲಿಯ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ವಾಸ್ತವ ಹೀಗಿರುವಾಗ ತನ್ನಲ್ಲಿನ ಸ್ಥಿತಿಯನ್ನು ಸುಧಾರಿಸುವುದನ್ನು ಬಿಟ್ಟು ಬಾಂಗ್ಲಾದೇಶ ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿರುವ ಬಾಂಗ್ಲಾದೇಶ ತನ್ನ ವರ್ತನೆಯನ್ನು ಬದಲಿಸಿಕೊಳ್ಳದಿದ್ದಲ್ಲಿ, ಅದು ಮತ್ತೊಂದು ಪಾಕಿಸ್ತಾನವಾಗುತ್ತದೆ ಅಷ್ಟೇ. ಪ್ರಸಕ್ತ ಎಲ್ಲ ವೈಫಲ್ಯಗಳನ್ನು ಒಟ್ಟಾಗಿ ಪಾಕ್​ನಲ್ಲಿ ಕಾಣಬಹುದಾಗಿದೆ. ಅಂಥ ದಾರುಣ ಸ್ಥಿತಿ ಬರುವ ಮುನ್ನ ಬಾಂಗ್ಲಾದೇಶ ಎಚ್ಚೆತ್ತುಕೊಳ್ಳುವುದೇ ವಿವೇಕದ ನಡೆಯಾಗಬಲ್ಲದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net