

ನವದೆಹಲಿ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಪ್ರಕ್ಷೋಭೆಯ ವೇಳೆ ಜುಲೈ 16ರಿಂದ ಆಗಸ್ಟ್ 11ರ ನಡುವೆ ಸುಮಾರು 650 ಜನರು ಬಲಿಯಾಗಿದ್ದಾರೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಕಚೇರಿ (ಯುಎನ್ಎಚ್ಸಿಆರ್) ಪ್ರಾಥಮಿಕ ವರದಿಯೊಂದರಲ್ಲಿ ಹೇಳಿದೆ. ಉದ್ದೇಶಪೂರ್ವಕ ಕೊಲೆಗಳು ಮತ್ತು ಏಕಪಕ್ಷೀಯ ಬಂಧನಗಳ ಬಗ್ಗೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸುವಂತೆ ಅದು ಸಲಹೆ ಮಾಡಿದೆ.
ಜುಲೈ 16 ಮತ್ತು ಆಗಸ್ಟ್ 4ರ ನಡುವೆ ಹಿಂಸಾಚಾರ ಗಳಲ್ಲಿ ಸುಮಾರು 400 ಜನರು ಮೃತಪಟ್ಟಿದ್ದರು. ಆಗಸ್ಟ್ 5 ಮತ್ತು 6ರ ನಡುವೆ ಸ್ಪೋಟಗೊಂಡ ಪ್ರತಿಭಟನೆಯ ಹೊಸ ಅಲೆಯಲ್ಲಿ 250 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ‘ಬಾಂಗ್ಲಾದೇಶದಲ್ಲಿನ ಇತ್ತೀಚಿನ ಪ್ರತಿಭಟನೆಗಳು ಮತ್ತು ಅಶಾಂತಿಯ ಪ್ರಾಥಮಿ ವಿಶ್ಲೇಷಣೆ’ ಎಂಬ 10 ಪುಟಗಳ ವರದಿಯಲ್ಲಿ ಮಾನವ ಹಕ್ಕುಗಳ ಸಂಸ್ಥೆ ಹೇಳಿದೆ. ಮೀಸಲಾತಿ ವಿರುದ್ಧ ನಡೆದ ಹಿಂಸಾತ್ಮಕ ಚಳವಳಿಯ ಪರಿಣಾಮವಾಗಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದರು. ತಾರತಮ್ಯ-ವಿರೋಧಿ ವಿದ್ಯಾರ್ಥಿ ಚಳವಳಿಯ ವೇಳೆ ನಡೆದ ಹಿಂಸಾಚಾರಕ್ಕೆ 600ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆಂದು ಮಾಧ್ಯಮಗಳು ಮತ್ತು ಸ್ವತಃ ಚಳವಳಿ ಮುಖಂಡರೇ ಹೇಳಿದ್ದರು. ಆದರೆ, ಆಗಸ್ಟ್ 11ರ ನಂತರ ನಡೆದ ಪ್ರತೀಕಾರ ಆಕ್ರಮಣಗಳಲ್ಲಿ ಎಷ್ಟು ಸಾವು ಸಂಭವಿಸಿದೆ ಎನ್ನುವುದನ್ನು ಇನ್ನೂ ನಿರ್ಣಯಿಸಲಾಗಿಲ್ಲ ಎಂದು ಜಿನೇವಾದಲ್ಲಿ ಶುಕ್ರವಾರ ಬಿಡುಗಡೆ ಮಾಡಿದ ವರದಿ ಹೇಳಿದೆ.
ಚಿಕಿತ್ಸೆ ಪಡೆಯುತ್ತಿದ್ದವರ ಸಾವು: ಆಗಸ್ಟ್ 7 ಮತ್ತು 11ರ ನಡುವೆ; ಹಿಂಸಾಚಾರಗಳಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದವರ ಸಹಿತ ಹಲವು ಜನರು ಮೃತಪಟ್ಟಿದ್ದಾರೆ ಎಂದು ಯುಎನ್ಎಚ್ಸಿಆರ್ ವರದಿ ಹೇಳಿದೆ.
ಪತ್ರಕರ್ತರ ಸಾವು: ಮೃತರಲ್ಲಿ ಪ್ರತಿಭಟನೆಕಾರರು, ಬೀದಿ ಬದಿಗಳಲ್ಲಿ ನಿಂತವರು, ಪತ್ರಕರ್ತರು ಮತ್ತು ಭದ್ರತಾ ಪಡೆಗಳ ಹಲವು ಸಿಬ್ಬಂದಿ ಸೇರಿದ್ದಾರೆ. ಸಾವಿರಾರು ಪ್ರತಿಭಟನೆಕಾರರು ಮತ್ತು ರಸ್ತೆಗಳಲ್ಲಿ ಹಾದು ಹೋಗುತ್ತಿದ್ದ ಜನರು ಗಾಯಗೊಂಡಿದ್ದು ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದವು ಎಂದು ವಿಶ್ವ ಸಂಸ್ಥೆ ವರದಿ ಹೇಳಿದೆ. ವರದಿಯಾಗಿರುವ ಸಾವಿನ ಸಂಖ್ಯೆ ವಾಸ್ತವಕ್ಕಿಂತ ಕಡಿಮೆಯಾಗಿರುವ ಸಾಧ್ಯತೆಯಿದೆ. ಕರ್ಫ್ಯೂ ಇದ್ದಿದ್ದರಿಂದ ಓಡಾಟಕ್ಕೆ ಆದ ತೊಂದರೆ ಹಾಗೂ ಇಂಟರ್ನೆಟ್ ಮೇಲಿನ ನಿಷೇಧದಿಂದ ಮಾಹಿತಿ ಕಲೆ ಹಾಕುವುದಕ್ಕೆ ತೊಂದರೆಯಾಗಿದ್ದು ಇದಕ್ಕೆ ಕಾರಣವಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.